ಶನಿವಾರ, ಆಗಸ್ಟ್ 25, 2012

ಸತ್ಯಮೇವ ಜಯತೆ (ಕಾದಂಬರಿ -5)

                                                      ಬಿಸಿಲೇ ಇರಲಿ .. sunlight let come.. 

ಶಾಂತಾ ಮೇಡಂದು ಐದನೇ ತರಗತಿಗೆ ಮೊದಲ ಪೀರಿಯಡ್. ಅವರು ಆವತ್ತಿನ ಪಾಠ ಮಾಡುವ ಮುಂಚೆ, ಹಿಂದಿನ ದಿನದ ಪಾಠದ ಬಗ್ಗೆ ಇಂಗ್ಲೀಷ್ ಉಕ್ತ ಲೇಖನ (Dictation) ಕೊಡುತ್ತಾರೆ.ಅವರು ಉಚ್ಚರಿಸುವ ಹತ್ತು ಪದಗಳನ್ನು ಬರೆದಾದ ನಂತರ ಅದನ್ನು ಪಕ್ಕದಲ್ಲಿರುವ ವಿದ್ಯಾರ್ಥಿಗಳಿಂದ ಮೌಲ್ಯಮಾಪನ ಮಾಡಿಸಿಕೊಳ್ಳಬೇಕು. ಪಕ್ಕದವರ ಉಕ್ತಲೇಖನವನ್ನು ನಾವು ಮೌಲ್ಯಮಾಪನ ಮಾಡುವುದು ರೂಢಿ. ಇದು ಪ್ರತಿದಿನದ ದಿನಚರಿ.
ಅವತ್ತಿನ ಉಕ್ತಲೇಖನ ಮುಗಿಯಿತು.
ಶಾಂತಾ ಮೇಡಂ "ಎಂಟಕ್ಕಿಂತ ಹೆಚ್ಚು ಸರಿ ಉತ್ತರ ಬರೆದವರು ಕೈ ಮೇಲೆತ್ತಿ"
ಪಕ್ಕದಲ್ಲಿರುವ ನಳಿನಿ ಸೇರಿ, ಇಬ್ಬರು-ಮೂವರು ಕೈ ಎತ್ತಿದರು.
"Good"
"ಎರಡಕ್ಕಿಂತ ಕಡಿಮೆ ಬಂದವರು ಕೈ ಮೇಲೆತ್ತಿ"
ನಾನು ಎಲ್ಲಾ ಕಡೆ ತಿರುಗಿ ನೋಡಿದೆ. ಯಾರೂ ಕೈ ಎತ್ತಿರಲಿಲ್ಲ. ನಾನು ಅಳುಕುತ್ತಲೆ ಕೈ ಎತ್ತಿದೆ.
"ಹತ್ತಕ್ಕೆ ಎಷ್ಟು ಸರಿ ಇದೆ"
"ಯಾವುದು ಇಲ್ಲಾ ಮೇಡಂ, ಮಿಸ್"
"ಇವತ್ತು ಮೊದಲ Dictation ಅಂತ ಬಿಡ್ತಾ ಇದ್ದೇನೆ. ನಾಳೆಯಿಂದ ಸರಿಯಾಗಿ ಓದಿಕೊಂಡು ಬರಬೇಕು"
ಮದ್ದೂರಿನ ಶಾಲೆಯಲ್ಲಿ ಹುಡುಗರು ಒಂದು ಕಡೆ, ಹುಡುಗಿಯರು ಒಂದು ಕಡೆ ಕೂಡುವ ಸಂಪ್ರದಾಯವಿರಲಿಲ್ಲ. ಗಲಾಟೆ ಮಾಡಬಾರದು ಎಂದು, ಒಬ್ಬ ಹುಡುಗನ ಪಕ್ಕ ಒಂದು ಹುಡುಗಿಯ ಹಾಗೆ ಪರ್ಯಾಯವಾಗಿ ಕೂರಿಸುತ್ತಿದ್ದರು. ಹಾಗಾಗಿ ನಮ್ಮ ಬೆಂಚಿನಲ್ಲಿ ನಾನು, ನಳಿನಿ, ಹರೀಶ, ಗೀತ ಮತ್ತು ದೀಪಕ್ ಕುಳಿತುಕೊಳ್ಳುತ್ತಿದ್ದೆವು. ನಮಗೆ ಆ ವಯಸ್ಸಿನಲ್ಲಿ ಮಾತನಾಡುವುದಕ್ಕೆ ಹುಡುಗರೆ ಬೇಕೆನಿಸುತ್ತಿತ್ತು. ಮಾತನಾಡಲು ಪ್ರಯತ್ನಿಸಿದರೆ, ಮಧ್ಯ ಇರುವ ಹುಡುಗಿ ತನಗೆ ತೊಂದರೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಳು. ಆಗಾಗಿ ಹೆಚ್ಚು ಮಾತನಾಡಲು ಅವಕಾಶವಿರಲಿಲ್ಲ.
"ಆರಕ್ಕಿಂತ ಹೆಚ್ಚು ಸರಿ ಇರುವವರು ಕೈ ಎತ್ತಿ"
ನಮ್ಮ ಬೆಂಚಿನ ಎಲ್ಲರೂ ಕೈ ಎತ್ತಿದರು. ತಕ್ಷಣ ಶಾಂತಾ ಮೇಡಂನ ಗಮನ ಸಹಜವಾಗಿ ನನ್ನ ಮೇಲೆ ಬಿತ್ತು.
"ಇವತ್ತು ಎಷ್ಟು ಸರಿ ಇದೆ"
"ಎಲ್ಲಾ ತಪ್ಪು ಮೇಡಂ, ಅಲ್ಲ ಮಿಸ್"
"ಬಾ ಇಲ್ಲಿ"
ಹತ್ತಿರ ಹೋಗಿ ನಿಂತೆ
"ಒಂದರಿಂದ ನಾಲ್ಕನೇ ತರಗತಿಯವರೆಗೆ ಎಲ್ಲಿ ಓದಿದ್ದು"
ಹೇಳಿದೆ.
"ಇಂಗ್ಲೀಷ್ ಅರ್ಥವಾಗದೆ ಹೋದರೆ, ಇಂದಿನ ಪಾಠವನ್ನು ತಂದೆ ತಾಯಿಗಳ ಸಹಾಯದಿಂದ ಓದಿಕೊಂಡು ಬರಬೇಕು"
"ಆಯ್ತು ಮಿಸ್"
"ನಿನ್ನ ಸಮವಸ್ತ್ರ ಬೇರೆ ಬಣ್ಣ ಇದೆಯಲ್ಲಾ, ಯಾವ ಅಂಗಡಿಯಲ್ಲಿ ತೆಗೆದುಕೊಂಡಿದ್ದು"
"ನೀವು ಕೊಟ್ಟ ಅಂಗಡಿಯ ವಿಳಾಸ ಸಿಗಲ್ಲಿಲ್ಲ, ಅದಕ್ಕೆ ಬೇರೆ ಅಂಗಡಿಯಲ್ಲಿ ತಕ್ಕೊಂಡ್ವಿ ಮಿಸ್. ಬಟ್ಟೆ ತೆಗೆದುಕೊಳ್ಳುವಾಗ ಗೊತ್ತಾಗಲಿಲ್ಲ" ಸುಳ್ಳು ಹೇಳಿದೆ.
"ಈಗ ಆಗಿದ್ದು ಆಗಿ ಹೋಗಿದೆ, ಮುಂದಿನ ವರ್ಷ ಸರಿಯಾದ ಬಣ್ಣದ ಸಮವಸ್ತ್ರ ಧರಿಸಬೇಕು"
"ಆಯ್ತು ಮಿಸ್"

ಮೊದಮೊದಲು ಅಪ್ಪ ಶಾಲೆಯವರೆಗೂ ಸೈಕಲ್ಲಿನಲ್ಲಿ ಕೂರಿಸಿಕೊಂಡು ಬಂದು ಬಿಡುತ್ತಿದ್ದರು. ಅದು ಆಗುವ ಕೆಲಸವಲ್ಲ ಅಂತ ಅವರಿಗೂ ಮನಸ್ಸಿಗೆ ಬಂತು. ನನಗೆ ಒಂದು ಸೈಕಲ್ ಕೊಡಿಸಿದರು.ದಿನವೂ, ಹೊಳೆಯವರೆಗೆ ಬಂದು ಸೈಕಲ್ ದಾಟಿಸಿಕೊಡುತ್ತಿದ್ದರು. ನಂತರ ಸುಮಾರು ಐದು ಮೈಲು ಸೈಕಲ್ ಒಬ್ಬನೆ ತುಳಿದು ಶಾಲೆ ತಲುಪುತ್ತಿದ್ದೆ. ಹೊಳೆಯ ನೀರು ಹೆಚ್ಚಾದ ದಿವಸ ಎಂಟು ಮೈಲು ಬಳಸಿಕೊಂಡು ಶಾಲೆ ತಲುಪಬೇಕು.

"ಯ್ಯಾಕೆ ಇವತ್ತು ಲೇಟು"
"ನಮ್ಮೂರಿನ ಹೊಳೆಯ ನೀರು ಹೆಚ್ಚಾಗಿತ್ತು ಮಿಸ್, ಬಳಸಿಕೊಂಡು ಬರೊದು ತಡವಾಯ್ತು"
"ಕಾರಣ ಹೇಳುವುದನ್ನು ಬಿಟ್ಬಿಡು, ಹೊಳೆಯ ನೀರು ಹೆಚ್ಚಾಗಿದ್ದರೆ ಮನೆಯನ್ನು ಒಂದು ಗಂಟೆ ಬೇಗ ಬಿಡಬೇಕು. Dictation ಕೊಡುವ ಮುಂಚೆ ಶಾಲೆ ತಲುಪದಿದ್ದರೆ, ಒಳಗೆ ಬರುವ ಅಗತ್ಯವಿಲ್ಲ"
ಶಾಲೆ ಮುಗಿಸಿ, ಸೈಕಲ್ ಹೊಡೆದುಕೊಂಡು ಹೊಳೆಯ ಬಳಿ ಕಾದಿರುತ್ತಿದ್ದೆ. ಅಪ್ಪ ಒಬ್ಬನೆ ಹೊಳೆ ದಾಟಬೇಡ ಅಂತ ಕಟ್ಟಾಜ್ಞೆ ಮಾಡಿದ್ದರು. ಅವರು ಬಂದ ಮೇಲೆ, ಹೊಳೆ ದಾಟಿ ಮನೆಗೆ ಬರುವಷ್ಟರಲ್ಲಿ ಕತ್ತಲಾಗಿಬಿಡುತ್ತಿತ್ತು. ಮನೆಗೆ ಬಂದ ಮೇಲೆ ಅಲ್ಪಸ್ವಲ್ಪ ಶಾಲೆಯ ಮನೆಗೆಲಸ (home work) ಮಾಡಿ ಮಲಗುತ್ತಿದ್ದೆ. ಅಪ್ಪನಿಗೆ ನಾನು ಹೇಗೆ ಓದುತ್ತಿದ್ದೇನೆ ಎಂದು ಕೇಳಲು ಪುರುಷೊತ್ತು ಇರಲಿಲ್ಲ. ಅಮ್ಮನಿಗೆ ನಮ್ಮ ಪುಸ್ತಕಗಳನ್ನು ಅರ್ಥ ಮಾಡಿಕೊಳ್ಳುವಷ್ಟು ತಿಳುವಳಿಕೆ ಇರಲಿಲ್ಲ. ನಾನು ಓದಿದ್ದೆ ಓದು, ನಡಿದಿದ್ದೆ ದಾರಿ.
"ಎಂಟಕ್ಕಿಂತ ಮೇಲೆ ಸರಿಯಿದ್ದವರು ಕೈ ಮೇಲೆತ್ತಿ"
ನಳಿನಿ ಮತ್ತು ದೀಪಕ್ ಮೈ ಮೇಲೆತ್ತಿದರು
"Good"
"ಐದಕ್ಕಿಂತ ಕೆಳಗೆ ಸರಿಯಿದ್ದವರು ಕೈ ಮೇಲೆತ್ತಿ"
ಮತ್ತೆ ಸುತ್ತ ಮುತ್ತ ಯಾರಾದರೂ ಜೊತೆಗಿರುವರೊ ಎಂದು ನೋಡಿದೆ. ಯಾರು ಜೊತೆಗಾರರಿಲ್ಲದೆ, ಒಬ್ಬನೇ ಕೈ ಮೇಲೆತ್ತಬೇಕಾಗಿ ಬಂತು.
"ಎಷ್ಟು ಸರಿ ಇದೆ"
"ಎರಡು ಮಿಸ್"
"ಬಾ ಇಲ್ಲಿ"
"ದಿನಾ ಮನೆಯಲ್ಲಿ ಇಂದಿನ ಪಾಠವನ್ನು ಓದಿಕೊಂಡು ಬರುವುದಕ್ಕೆ ಏನು ದಾಡಿ?"
"    "
"ಬೂಟು ನೋಡು ಹೇಗೆ ಹಾಕ್ಕೊಂಡಿದ್ದೀಯ"
"   "
"ಯಾವ ಕಾಲಿನ ಶೂ, ಯಾವ ಕಾಲಿಗೆ ಅಂತ ಅಷ್ಟು ಗೊತ್ತಾಗಲ್ವ. ಎಡಗಾಲಿನ ಶೂ ಬಲಗಾಲಿನಲ್ಲಿದೆ, ಬಲಗಾಲಿನ ಶೂ ಎಡಗಾಲಿನಲ್ಲಿದೆ"
ಎಲ್ಲರೂ ನಕ್ಕರು. ಅವಮಾನದಿಂದ ಕಣ್ಣಲ್ಲಿ ನೀರು ಬಂದಿದ್ದೆ ಗೊತ್ತಾಗಲಿಲ್ಲ. ನನಗೆ ನೆನಪಿರುವ ಹಾಗೆ ಅತ್ತದ್ದು ಅದೇ ಮೊದಲ ಸಲ.ನಮ್ಮೂರಿನಲ್ಲಿದ್ದಾಗ ಕಾಲಿಗೆ ಚಪ್ಪಲಿಯೇ ಹಾಕುತ್ತಿರಲಿಲ್ಲ. ಶಾಲೆಗೆ ಸೇರಿದ ನಂತರ ನೇರವಾಗಿ ನಾನು ಬೂಟು ಧರಿಸಲು ಆರಂಭಿಸಿದೆ. ಬಲದ ಕಾಲಿನಲ್ಲಿನ ಬೂಟು ಯಾವುದು,ಎಡದ ಕಾಲಿನಲ್ಲಿನ ಬೂಟು ಯಾವುದು ಅಂತ ತಿಳಿಯುತ್ತಿರಲಿಲ್ಲ. ಅಪ್ಪ ಗಮನಿಸಿದರೆ ಹೇಳುತ್ತಿದ್ದರು, ಇಲ್ಲವಾದರೆ ಇಲ್ಲ.ಹರೀಶನನ್ನು ಕೇಳಿ, ಬಲದ ಕಾಲಿನ ಬೂಟಿನ ದಾರವನ್ನು ಗುರುತಿಗಾಗಿ ಸ್ವಲ್ಪ ಕತ್ತರಿಸಿಕೊಂಡೆ. ಆಮೇಲೆ ಬೂಟು ಬದಲಾವಣೆಯಾಗುವುದು ತಪ್ಪಿತು.

"ಎಂಟಕ್ಕಿಂತ ಮೇಲೆ ಸರಿಯಿದ್ದವರು ಕೈ ಮೇಲೆತ್ತಿ"
ನಳಿನಿ ಕೈ ಮೇಲೆತ್ತಿದಳು
"ವಿಶ್ವನಾಥ, ನಿನ್ನದು ಎಷ್ಟು ಸರಿ ಇದೆ"
"ಯಾವುದು ಇಲ್ಲಾ ಮಿಸ್"
"zero, come here. ನನ್ನ ತರಗತಿಗೆ ಇಂದು ಬರುವುದು ಬೇಡ, ಹೊರಗೆ ತರಗತಿ ಮುಗಿಯುವವರೆಗೂ ನಿಂತುಕೊ"

ಸುಮ್ಮನೆ ಹೊರಗೆ ಹೋದೆ. ದಿನವೂ ಮೊದಲ ಪೀರಿಯಡ್ ನಲ್ಲಿಯೇ ಮನಸ್ಸು ಕುಂದಿಹೋಗುತ್ತಿತ್ತು. ದಿನಪೂರ್ತಿ ಅವಮಾನವನ್ನು ನೆನೆದು ಉತ್ಸಾಹವೇ ಇರುತ್ತಿರಲಿಲ್ಲ.ಮೇಡಂ ಹೇಳುವ ಇಂಗ್ಲೀಷ್ ಪಾಠ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಮನಸ್ಸಿಗೆ ಎಷ್ಟು ಬೇಜಾರಾಗುತ್ತಿತ್ತು ಎಂದರೇ, ಮೊದಲನೇ ಪೀರಿಯಡ್ ಮುಗಿದ ನಂತರ,
ಅದೇ ನೆನಪಿನಲ್ಲಿ ಉಳಿದ ಪಾಠದ ಬಗ್ಗೆ ಅದು ಕನ್ನಡವೇ ಆಗಿದ್ದರೂ ಸರಿಯಾದ ಗಮನ ಕೊಡುವುದಕ್ಕೆ ಆಗುತ್ತಿರಲಿಲ್ಲ.
ಮೊದಮೊದಲು ಶಾಂತಾ ಮೇಡಂ ಕೈಲಿ ಬೈಸಿಕೊಳ್ಳಬಾರದು ಅಂತ, ಮನೆಯಲ್ಲಿ ಓದಲು ಪ್ರಯತ್ನಮಾಡತೊಡಗಿದೆ. ಆದರೆ ಪಾಠ ಅರ್ಥವಾಗದೆ, ಐದು ನಿಮಿಷ ಓದುವುದರೊಳಗೆ ಬೇಸರವಾಗಿ ಪುಸ್ತಕ ಮುಚ್ಚಿಡುತ್ತಿದ್ದೆ. ತೀರಾ ಅತ್ಯಗತ್ಯವಾದ home work ಮಾಡಿ ಮಲಗಿಕೊಳ್ಳುತ್ತಿದ್ದೆ.
"ಎಂಟಕ್ಕಿಂತ ಮೇಲೆ ಸರಿಯಿದ್ದವರು ಕೈ ಮೇಲೆತ್ತಿ"
ನಳಿನಿ ಮತ್ತು ದೀಪಕ್ ಕೈ ಮೇಲೆತ್ತಿದರು.
"ವಿಶ್ವನಾಥನನ್ನು ಕೇಳುವ ಅಗತ್ಯವೇ ಇಲ್ಲ, ಇಲ್ಲಿ ಬಾ, ಕೈ ನೀಡು"
"   "
"ಎಷ್ಟು ಸರಿ ಇದೆ"
"ಒಂದು ಮಿಸ್"
"ಹಾಗದರೆ ಎಡ ಕೈಗೆ ಐದು, ಬಲದ ಕೈಗೆ ನಾಲ್ಕು ಏಟು"
ಬಹಳ ಜೋರಾಗಿ ಕೊಲಿನಲ್ಲಿ ಏಟು ಬಾರಿಸಿದರು, ಆ ಏಟಿಗೆ ಅಂಗೈ ಕೆಂಪಾಗಿ ಹೋಗಿತ್ತು, ಕಣ್ಣಲ್ಲಿ ನೀರು ತುಂಬಿ ಬಂತು.
"ನಿನಗೆ ಎಷ್ಟು ಹೊಡೆದರು ಕಮ್ಮಿಯೇ, ಓದಿಕೊಂಡು ಬಾ ಅಂತ ಹೇಳಿ, ಹೇಳಿ ಸಾಕಾಗಿ ಹೋಗಿದೆ. ನಿನ್ನ ಬಟ್ಟೆ ನೋಡು ಇದಕ್ಕೆ ಇಸ್ತ್ರಿ ಹಾಕಿ ಎಷ್ಟು ದಿನವಾಯ್ತು ಹೇಳು, ಇದನ್ನು ಒಗೆದು ಎಷ್ಟು ದಿನವಾಯ್ತು"
ಅಪ್ಪ ತೆಗೆದುಕೊಟ್ಟಿದುದು ಒಂದೇ ಜೊತೆ ಸಮವಸ್ತ್ರ ಮಾತ್ರ. ಎರಡು ಮೂರು ಜೊತೆ ಒಟ್ಟಿಗೆ ಹೊಲೆಸಿದರೆ, ಬೆಳೆಯುವ ಹುಡುಗನಿಗೆ ಆರು ತಿಂಗಳಲ್ಲಿ ಬಿಗಿಯಾಗುತ್ತದೆ ಎಂಬುದು ಅಪ್ಪನ ಇಂಗಿತ.ಆದ್ದರಿಂದ ಆರು ತಿಂಗಳಾದ ನಂತರ ಇನ್ನೊಂದು ಹೊಲೆಸಿಕೊಡುತ್ತೇನೆ ಅಂದಿದ್ದರು. ಒಂದೇ ಜೊತೆ ಬಟ್ಟೆಯನ್ನು ದಿನವೂ ಒಗೆಯುವುದಾದರೂ ಹೇಗೆ?
ಭಾನುವಾರ ಒಗೆದು ಒಣಗಿಸಬೇಕು. ಕರೆಂಟ್ ಇದ್ದರೆ ಇಸ್ತ್ರೀ, ಇಲ್ಲದಿದ್ದರೆ ಅದೂ ಇಲ್ಲ. ನಮ್ಮೂರಿನಲ್ಲಿ ದಿನಕ್ಕೆ ಆರುಗಂಟೆ ಮಾತ್ರ ಕರೆಂಟ್ ಕೊಡುತ್ತಿದ್ದರು.
"ವಿಶ್ವನಾಥ, ಇವತ್ತು ಏಟು Dictation ಹೇಳುವುದಕ್ಕೆ ಮೊದಲೇ ಕೊಡಲೋ ಅಥವಾ Dictation ಹೇಳಿದ ನಂತರ ಕೊಡಲೋ"
"  "  ಬೀಳುವ ಏಟು ನೆನಪಿಸಿಕೊಂಡು ಮೊದಲೆ ಅಳುಬಂತು.
"ನಿನ್ನನ್ನು A ಸೆಕ್ಷನ್ ಗೆ ಹಾಕಿದ್ದಾದರೂ ಹೇಗೆ ಅಂತ ಹೆಡ್ ಮಾಸ್ಟರನ್ನು ಕೇಳಬೇಕು"
"     " ಎದೆಯಲ್ಲಿ ಢವ ಢವ ಶುರುವಾಗಿತ್ತು. ಹರೀಶ ಕಡೆ ತಿರುಗಿ ನೊಡಿದೆ, ಅವನು ಏನೂ ಗೊತ್ತಿಲ್ಲದವನಂತೆ ಮೇಡಂ ಕಡೆ ನೋಡುತ್ತಿದ್ದ.
"ನಿಮ್ಮಂತವರು ಏಕಾದರೂ ಶಾಲೆಗೆ ಬರುತ್ತೀರಾ, ನಿಮ್ಮಿಂದ ನಮಗೂ ಕೆಟ್ಟ ಹೆಸರು, ಸರಿಯಾಗಿ ಪಾಠ ಹೇಳಿಕೊಡುವುದಿಲ್ಲ ಅಂತ"
ದಿನವೂ ಶಾಂತಾ ಮೇಡಂ ಕೈಲಿ ಅನ್ನಿಸಿಕೊಂಡು ರೂಢಿಯಾಗಿಬಿಟ್ಟಿತು.ಬೆಂಚಿನ ಮೇಲೆ ನಿಂತುಕೊಳ್ಳುವುದು ,ತಲೆ ಬಗ್ಗಿಸಿ ಕಾಲುಗಳ ನಡುವೆ ಕೈ ತೂರಿಸಿ ಕಿವಿ ಹಿಡಿದುಕೊಳ್ಳುವುದು  ಮತ್ತು ಇನ್ನು ಮುಂತಾದ ಪ್ರಯೋಗಗಳನ್ನು ಶಾಂತಾ ಮೇಡಂ ಮಾಡಿ ಮುಗಿಸಿದರು .ಏನು ಮಾಡಿದರು  ಅವರ ಪಾಠವನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಪಾಠ ಅರ್ಥವಾಗದೆ ಉರು ಹಚ್ಚಲು ಪ್ರಯತ್ನಿಸೆದನಾದರು ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಕ್ರಮೇಣ ಇಂಗ್ಲೀಷ್ ಮೇಲೆ ದ್ವೇಷ ಭಾವನೆ ಬೆಳೆಯತೊಡಗಿತು. ಆ ವಿಷಯವನ್ನು ಆಲಕ್ಷ್ಯ ಮಾಡುವುದು ರೂಢಿಯಾಯಿತು. ಮೇಡಂನ ಬೈಗುಳ ಹೆಚ್ಚಾಯಿತು.
"ಯ್ಯಾಕೋ, ಮೇಡಂ ಹತ್ರ ದಿನಾ ಬೈಸಿಕೊಳ್ತೀಯಾ"
"ಅವ್ರು ಇಂಗ್ಲೀಷ್ ಅನ್ನು ಇಂಗ್ಲೀಷ್ ನಲ್ಲಿ ಪಾಠ ಮಾಡಿದರೆ ತಲೆಗೆ ಹೋಗಲ್ಲ"
"ನಿನ್ನ ಅಪ್ಪ ಪಾಠ ಹೇಳಿ ಕೊಡಲ್ವಾ?"
"ಅಪ್ಪನಿಗೆ ಅವರದೇ ಆದ ಕೆಲಸ, ಇತ್ತೀಚೆಗೆ ಮನೆಗೆ ಬರೋದೆ ಲೇಟು, ನಿಂಗೆ ನಿಮ್ಮ ಮನೆಯಲ್ಲಿ ಪಾಠ ಹೇಳಿಕೊಡ್ತಾರ"
"ಅಮ್ಮ ಹೋಂ ವರ್ಕ್ ಮಾಡೋವರೆಗೂ ಊಟ ಬಡಿಸೊಲ್ಲ, ನಿದ್ರೆ ಮಾಡಿಬಿಡ್ತಿನಿ ಅಂತ"
"ದಿನಾಲೂ ಏಟು ತಿಂದೂ, ತಿಂದೂ ಅಳದೆ ಹೊಡೆಸಿಕೊಳ್ಳೋದು ರೂಢಿ ಆಗ್ತಾ ಇದೆ"
"ಮಿಸ್ Dictation ಹೇಳುವಾಗ, ನಾನು ತೋರಿಸ್ತೀನಿ ನೋಡಿಕೊಂಡೂ ಬರ್ಕೊ"
"ಬೇಡ"
"ಯಾಕೆ"
"ಕಾಪಿ ಮಾಡೋದು ತಪ್ಪು ಅಂತ, ನಮ್ಮೂರಿನ ಮೇಷ್ಟ್ರು ಹೇಳಿದ್ದಾರೆ"
"ಮತ್ತೆ ಸುಳ್ಳು ಹೇಳುತ್ತಿಯಾ, ಸುಳ್ಳು ಹೇಳೋದು ತಪ್ಪು ಅಂತ ನಿಮ್ಮ ಮೇಷ್ಟ್ರು ಹೇಳಲ್ವ"
"ಅದೇ ಬೇರೆ, ಇದೆ ಬೇರೆ, ನಿನಗೆ ಅರ್ಥವಾಗಲ್ಲ ಬಿಡು"
"ಸರಿ, ದಿನಾನೂ Dictation ಹೇಳುವಾಗ ಒಂದೆರಡು ಜಾಗ ಖಾಲಿ ಬಿಡು. ನಾನೇ ಸ್ಪೆಲ್ಲಿಂಗ್ ಬರೆದು ರೈಟ್ ಹಾಕ್ತಿನಿ, ಹೇಗಿದ್ರು ದಿನಾ ನಾನೇ ತಾನೆ ಕರೆಕ್ಷನ್ ಮಾಡೊದು"
"ಮೇಡಂ ಗೆ ಗೊತ್ತಾದ್ರೆ? ಬೇಡ, ಬೇಡ"
"ಎಲ್ಲಾನು ಸರಿ ಮಾಡೊದು ಬೇಡ, ನಾಲ್ಕೈದು ಸರಿಮಾಡಿದ್ರೆ ಮೇಡಂ ಹೊಡೆಯೊದಿಲ್ಲ, ಅನುಮಾನನೂ ಬರೊದಿಲ್ಲ. ನಂಗೆ ದಿನಾ ಮೇಡಂ ನಿನ್ನ ಹೊಡೆಯೊದನ್ನು ನೋಡೊಕಾಗೊದಿಲ್ಲ"
ನಾನು ಒಪ್ಪಲಿಲ್ಲ, ಅದಕ್ಕೆ ಬಲವಾದ ಕಾರಣವೂ ಇತ್ತು.ಆಗ ನಾನು ಮೂರನೇ ಕ್ಲಾಸಿನಲ್ಲಿದ್ದೆ. ನಮ್ಮೂರಿನ ಸ್ಕೂಲಿನಲ್ಲಿ ವರ್ಷಕ್ಕೆ ಒಂದೇ ಪರೀಕ್ಷೆ ನಡೆಯುವುದು. ನಮ್ಮ ಊರಿನ S.S.L.C ಓದುವ ಹುಡುಗರು ಪರೀಕ್ಷೆ ಯಲ್ಲಿ ನಕಲು
ಮಾಡುವುದಕ್ಕೆ, ಸಣ್ಣ ಸಣ್ಣ ಚೀಟಿ ತಯಾರುಮಾಡುವುದನ್ನು ನೋಡಿದೆ. ಅತ್ಯಂತ ಸಣ್ಣ ಅಕ್ಷರದಲ್ಲಿ, ಸಣ್ಣ ಹಾಳೆಯಲ್ಲಿ ಬರೆದುಕೊಂಡು, ಗುಪ್ತವಾಗಿರಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದರು. ನಾನು ಹಾಗೆ ಮಾಡಿದರೆ ಹೇಗೆ? ಎಂಬ ಉಪಾಯ ಹೊಳೆಯಿತು. ಹಾಗೆ ಬರೆದುಕೊಂಡು ಅಂಗಿಯ ಕಿಸೆಯಲ್ಲಿರಿಸಿಕೊಂಡು ಹೋದೆ. ಅದನ್ನು ತೆಗೆದುಕೊಂಡು ಬರೆಯುತ್ತಿರಬೇಕಾದರೆ ಮೇಷ್ಟ್ರು ಹಿಡಿದುಕೊಂಡರು.
"ವಿಶ್ವ ಏನಿದು?
"           "
"ಬೆಳೆಯುವ ಪೈರು ಮೊಳಕೆಯಲ್ಲಿ ಅಂತಾರೆ, ಇಷ್ಟು ಸಣ್ಣ ವಯಸ್ಸಿಗೆ ನಕಲು ಮಾಡುವ ನೀನು ಮುಂದೆ ಏನಾಗಬಹುದು. ನಿನಗೆ ಕಾಪಿ ಮಾಡುವುದಕ್ಕೆ ಏನಾಗಿತ್ತು. ನೀನು ಏನೂ ಬರೆಯದಿದ್ದರೂ ಪಾಸು ಮಾಡುತ್ತಿರಲಿಲ್ವಾ. ಏನೂ ಬಾರದ ದಡ್ಡ ವಿದ್ಯಾರ್ಥಿಗಳನ್ನು ಕ್ಷಮಿಸಬಹುದು, ಆದರೆ ನೀತಿಗೆಟ್ಟವರನ್ನ ಸಹಿಸುವುದಿಲ್ಲ. ಕಾಪಿ ಮಾಡಿ ಯಾರನ್ನು ಮೆಚ್ಚಿಸಬೇಕು ಅಂತ ಅಂದುಕೊಂಡಿದ್ದಿ.ನಿಮಗೆ ಪರೀಕ್ಷೆ ಕೊಡುವುದು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವುದಕ್ಕೆ, ನಮಗೋಸ್ಕರ ಅಲ್ಲ. ಉತ್ತರ ಗೊತ್ತಿರದ ಪ್ರಶ್ನೆಗಳು ನಿಮ್ಮನ್ನು ಇನ್ನು ಓದುವಂತೆ ಪ್ರೇರೇಪಿಸಬೇಕೇ ವಿನಃ,ಅಡ್ಡದಾರಿಯಲ್ಲಿ ಕೊಂಡೊಯ್ಯಬಾರದು.ಎಲ್ಲಾ ಸರಿ. ನೀನು ಈಗ ಕಾಪಿ ಮಾಡಿ ಬರೆದರೆ, ನಿನಗೆ ಏನು ಸಿಗುತ್ತದೆ, ಕೆಲಸವ? ಪದಕವ? ರ್ಯಾಂಕ?........"
ಅವತ್ತೇ ಕೊನೆ ಮತ್ತೆ ನಕಲು ಮಾಡುವ ಯೋಚನೆಯನ್ನೇ ಮಾಡಲಿಲ್ಲ. ಎಷ್ಟೇ ಅವಮಾನವಾದರೂ ಸರಿ, ನಕಲು ಮಾಡಬಾರದು ಅಂತ ತಿರ್ಮಾನ ಮಾಡಿಬಿಟ್ಟಿದ್ದೆ.

ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ ಅಂತಾರೆ. ಇಂಗ್ಲೀಷ್ ಪೀರಿಯಡ್ ನಲ್ಲಿ ಹೋದ ಮಾನ, ಬೇರೆ ವಿಷಯದಲ್ಲಿ ಬುದ್ಧಿವಂತ ಅನ್ನಿಸಿಕೊಂಡಿದ್ದರೆ ಬರುತ್ತಿತ್ತೊ ಏನೋ.ಆದರೆ ಪಟ್ಟಣದ ಖಾಸಗಿ ಶಾಲೆಯಲ್ಲಿ ಬುದ್ಧಿವಂತ ಎನ್ನಿಸಿಕೊಳ್ಳುವುದು ನನ್ನಂತಹ ಹಳ್ಳಿಹುಡುಗನಿಗೆ ಸುಲಭವಾಗಿರಲಿಲ್ಲ. ಇಡೀ ತರಗತಿಯಲ್ಲಿ ಇಂಗ್ಲೀಷ್ ಮೇಡಂನಿಂದ ಏಟು ತಿನ್ನುತ್ತಿದ್ದದ್ದು ನಾನೊಬ್ಬನೆ. ಹಾಗಾಗಿ ದಡ್ಡ ಎಂಬ ಹಣೆಪಟ್ಟಿ ಸುಲಭವಾಗಿ ನನ್ನ ತಲೆಯ ಮೇಲೆ ಬಂದು ಕುಳಿತಿತ್ತು. ಮೇಡಂ ಇಂಗ್ಲೀಷನ್ನು ಕನ್ನಡದ ಮೂಲಕ ಕಲಿಸಿದ್ದರೆ ಸಹಾಯವಾಗುತ್ತಿತ್ತೊ ಏನೋ? ಆದರೆ ಮೇಡಂ ಇಂಗ್ಲೀಷ್
ಪಾಠವನ್ನು ಇಂಗ್ಲೀಷಿನಲ್ಲೇ ಹೇಳಲು ಪ್ರಯತ್ನಿಸುತ್ತಿದ್ದರು. ಅವರ ಅಭಿಪ್ರಾಯದಲ್ಲಿ, ಹಾಗೆ ಮಾಡುವುದರಿಂದ ಹೆಚ್ಚು ಹೆಚ್ಚು ಚೆನ್ನಾಗಿ ಇಂಗ್ಲೀಷನ್ನು ಗ್ರಹಿಸಬಹುದು ಎಂಬುದಾಗಿತ್ತು. ಇಂಗ್ಲೀಷ್ ಅನ್ನು ಕನ್ನಡದ ಮೂಲಕ ಕಲಿಸುವುದು ಅವರ ಮಟ್ಟಕ್ಕೆ ತಕ್ಕುದಾಗಿರಲಿಲ್ಲ. ಹಾಗಾಗಿ ಅವರು ಇಂಗ್ಲೀಷ್ ಪಾಠವನ್ನು ಬೇರೆ ಬೇರೆ ಇಂಗ್ಲೀಷ್ ವಾಕ್ಯಗಳನ್ನು ರಚಿಸಿ ತಿಳಿಸಲು ಪ್ರಯತ್ನಿಸುತ್ತಿದ್ದರು. ನನಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. ನನಗೆ ಇಂಗ್ಲೀಷ್ ನ ಬಗ್ಗೆ ಮೂಡಿದ ನಿರಾಸಕ್ತಿ, ಎಲ್ಲಾ ವಿಷಯಗಳಲ್ಲಿ ವಿಸ್ತರಿಸಲು ಬಹಳ ಸಮಯ ಬೇಕಾಗಲಿಲ್ಲ. ಯಾವುದೇ ವಿಷಯದಲ್ಲಿ ಆಸಕ್ತಿ ಉಳಿಯಲಿಲ್ಲ. ಕಾಟಚಾರಕ್ಕೆ ದಿನಾಲೂ ಶಾಲೆಗೆ ಬರುವುದು, ಹೋಗುವುದು ನಡೆಯುತ್ತಿತ್ತು. ಕನ್ನಡ ಮಾಸ್ಟ್ರು ಕೂಡ "ಬಂದ ಪುಟ್ಟ, ಹೋದ ಪುಟ್ಟ" ಅಂತ ಆಡಿಕೊಳ್ಳುವ ಮಟ್ಟಕ್ಕೆ ಬೆಳೆಯಿತು.ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲಿ 35 ಅಂಕಗಳನ್ನು ಬೇರೆ ಗಳಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಂಕಪಟ್ಟಿಗೆ ಪೋಷಕರ ರುಜು ಹಾಕಿಸಿಕೊಂಡು ಬರಬೇಕಿತ್ತು.
ಅದನ್ನು ಅಪ್ಪನಿಗೆ ತೋರಿಸದೆ ನಾನೆ ಅಪ್ಪನ ಹಾಗೆ ಸಹಿ ಹಾಕಿ, ವಾಪಾಸು ಕೊಡುತ್ತಿದ್ದೆ. ಹಾಗೂ ಹೀಗೂ ಒಂದು ವರ್ಷ ದೂಡಿದೆ. ಐದನೇ ತರಗತಿಯ ಕೊನೆಯ ಮುಖ್ಯ ಪರೀಕ್ಷೆ ಬರೆದು, ಬೇಸಿಗೆ ರಜದ ಮಜಾ ಅನುಭವಿಸಿದೆ.
"ನಾಳೆಯಿಂದ ವಿಶ್ವನ ಸ್ಕೂಲು ಶುರುವಾಗುತ್ತೆ, ಅವ್ರ ಶಾಲೆಯಿಂದ ಬನ್ನಿ ಅಂತ ಯ್ಯಾಕೆ ಕಾಗದ ಬರೆದಿದ್ದು"
"ಆರನೇ ತರಗತಿಗೆ, ವಿಶ್ವನನ್ನ ಸೇರಿಸಿಕೊಳ್ಳೊದಿಲ್ವಂತೆ"
"ಯ್ಯಾಕೆ"
"ಅವನ ಕತೆ ಒಂದಾ.. ಎರಡಾ..."
"ಏನಾಯ್ತು"
"ಅವನ್ನ ಪಾಸು ಮಾಡುವುದಕ್ಕೆ ಆಗೋದಿಲ್ಲ, ಆದರೂ ಪಾಸು ಮಾಡಿ, ಟಿ.ಸಿ ಕೊಡ್ತೀವಿ ತೆಗೆದುಕೊಂಡು ಹೋಗಿ ಅಂತ ಹೇಳಿದ್ರು"
"ಅಷ್ಟು ಮಂಕಾದನೇನು ನನ್ಮಗ"
"ಅಲ್ಲಿ ಹೇಳಿದ C ಸೆಕ್ಷನ್ ನಲ್ಲಿ ಕುಳಿತಿದ್ದರೆ, ಯಾರ ಗಮನಕ್ಕೂ ಬರ್ತಿರ್ಲಿಲ್ಲ. ಹತ್ತರಲ್ಲಿ ಹನ್ನೊಂದು ಅಂತ ಸುಮ್ಮನಾಗುತ್ತಿದ್ದರು. ಹೋಗಿ, ಹೋಗಿ A ಸೆಕ್ಷನ್ ನಲ್ಲಿ ಕುಳಿತುಕೊಂಡರೆ  ದಡ್ಡತನ ಎದ್ದು ಕಾಣದೇ ಇರ್ತದ"
"ಇರ್ಲಿ ಬಿಡಿ"
"ಎಲ್ಲಾ ಅಂಕಪಟ್ಟಿಗೂ ನನ್ನ ಸಹಿ ಅವನೇ ಮಾಡಿಕೊಟ್ಟಿದ್ದಾನೆ. ನನಗೆ ಇವ್ನು ತೆಗೆದ ಮಾರ್ಕ್ಸು ಎಲ್ಲಾ ಗೊತ್ತಾಗುತ್ತೆ ಅಂತ""ಇಷ್ಟೊಂದು ಕೆಟ್ಟ ಬುದ್ಧಿ ಎಲ್ಲಿ ಕಲಿತ"
"ಇಂಗ್ಲೀಷ್ ಮೇಡಂ, ಇವನ ಇಸ್ರೀ ಇಲ್ಲದ ಶರ್ಟು, ಕೊಳೆಯಾದ ಬೂಟು, ಓದು, ತರಲೆ ಎಲ್ಲಾ ವರ್ಣಿಸಿದ್ರು"
"ಈಗೇನು ಮಾಡೊದು"
"ಇನ್ನೇನು, ಸರ್ಕಾರಿ ಶಾಲೆ ಇದೆಯಲ್ಲ. ಅಲ್ಲಿಗೆ ಟಿ.ಸಿ ಕೊಟ್ಟು ಸೇರಿಸಿ ಬಂದಿದ್ದೇನೆ"
"ಆಯ್ತು ಬಿಡಿ, ಅವನ ಮೇಲೆ ರೇಗಬೇಡಿ. ಕುದುರೆಗೆ ಬಲವಂತವಾಗಿ ನೀರು ಕುಡಿಸೊಕ್ಕಾಗಲ್ಲ"
"ಅವನ ಹಣೆ ಬರಹ, ಓದದೆ ಇದ್ರೆ ಹೊಲ ಹೂಳಬೇಕು ಅಷ್ಟೆ. ನಾವೇನು ಮಾಡೊದಿಕ್ಕಾಗುತ್ತೆ"
ಅಪ್ಪ ಅಮ್ಮ ಮಾತನಾಡುತ್ತಿದ್ದುದ್ದನ್ನು ಸುಮ್ಮನೆ ಮಲಗಿದ ಹಾಗೆ ನಟಿಸುತ್ತಿದ್ದ ನನ್ನ ಕಿವಿಗೆ ಬೀಳುತ್ತಿತ್ತು. ಖಾಸಗಿ ಸ್ಕೂಲಿನಿಂದ ಹೊರ ಹಾಕಿದುದ್ದಕ್ಕೆ ಬಹಳ ಸಂತೋಷವಾಗಿತ್ತು.
                                                (ಮುಂದುವರೆಯುವುದು)

2 ಕಾಮೆಂಟ್‌ಗಳು:

  1. ಬಾಲ್ಯಕಾಲದಲ್ಲಿ ಹುಡುಗರು ಅನುಭವಿಸುವ ಕಷ್ಟಗಳನ್ನು ಕಥಾನಾಯಕನ ಮೂಲಕ ಹೃದಯಂಗಮವಾಗಿ ವರ್ಣಿಸಿದ್ದೀರಿ. ಅವನ ಸಂಕಟವನ್ನು ನಾನೇ ಅನುಭವಿಸಿದಂತೆ ಭಾಸವಾಯಿತು.

    ಪ್ರತ್ಯುತ್ತರಅಳಿಸಿ
  2. Gurugale!

    Thumbaa chennagi baruttide.
    Aatura beda! Naavu kaayuvudakke siddha. Chennagiye munduvaresi

    Kiran

    ಪ್ರತ್ಯುತ್ತರಅಳಿಸಿ