ಗುರುವಾರ, ಸೆಪ್ಟೆಂಬರ್ 6, 2012

ಸತ್ಯಮೇವ ಜಯತೆ (ಕಾದಂಬರಿ -6)


                                                              I-ಹೊಳೆ

ಆರು ಮತ್ತು ಏಳನೇ ತರಗತಿಯ ದಿನಗಳು ನನ್ನ ಜೀವನದ ಸಂತೋಷದ ದಿನಗಳು. ವಿದ್ಯಾರ್ಥಿಯ ದಿನಗಳು, ಸುವರ್ಣ ದಿನಗಳು, ಎನ್ನುವ ನಾಣ್ಣುಡಿಯ ಹಾಗೆ.ಮದ್ದೂರು ಸರ್ಕಾರಿ ಶಾಲೆಯಲ್ಲಿ ಎರಡು ವರ್ಷಗಳು, ಎರಡು ದಿನಗಳಂತೆ ಉರುಳಿದ್ದವು. ಐದನೇ ತರಗತಿಯ ಗಾಯಗಳೆಲ್ಲಾ ವಾಸಿಯಾಗಿದ್ದವು.

ನಾನು ಆರನೇ ತರಗತಿಗೆ ಸೇರಿದಾಗ ಅಲ್ಲಿ ಆಗ A B C D ಕಲಿಸುತ್ತಿದ್ದರು. ಅದನ್ನು ನಾನು ನಾಲ್ಕನೇ ಕ್ಲಾಸು ಪಾಸಾದಾಗಲೇ ಕಲಿತಿದ್ದರಿಂದ, ನನ್ನನ್ನು ಇಂಗ್ಲೀಷ್ ಮೇಷ್ಟ್ರು ಬುದ್ಧಿವಂತರ ಸಾಲಿಗೆ ಸೇರಿಸಿದ್ದರು. ಇಂಗ್ಲೀಷ್ ಮೇಷ್ಟ್ರು, ಬೆನ್ನು ತಟ್ಟಿದ ಮೇಲೆ ನನ್ನನ್ನು ಹಿಡಿಯುವವರೇ ಇರಲಿಲ್ಲ. ಸಿಗುವ ಸಮಯದಲ್ಲಿ ಆದಷ್ಟು ಓದಿಕೊಳ್ಳುತ್ತಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ. ಇಂಗ್ಲೀಷ್ ಪಾಠಗಳು ಕನ್ನಡದ ಮೂಲಕವೇ ನಡೆಯುತ್ತಿದ್ದವು. ಬಹಳಷ್ಟು ಹುಡುಗರು ಬಡವರ ಹುಡುಗರೇ ಆಗಿದ್ದರಿಂದ, ನಮ್ಮ ಉಡುಗೆ ತೊಡುಗೆ ಬಗ್ಗೆ ಯಾವ ಮೇಷ್ಟ್ರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಉಡುಗೆ-ತೊಡುಗೆ ಇರಲಿ, ನಾವು ಹೇಗೆ ಓದುತ್ತಿದ್ದೇವೆ ಎಂದು ಅವರು ಪರೀಕ್ಷಿಸುತ್ತಿರಲಿಲ್ಲ.ತಮಗೆ ತಿಳಿದಿದ್ದನ್ನು ಪಾಠ ಮಾಡಿ ಮುಗಿಸಿ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಓದಿದಷ್ಟು ಓದು, ಆಡಿದಷ್ಟು ಆಟ ಹೀಗೆ ಸಾಗಿತ್ತು. ಅಪರೂಪಕೊಮ್ಮೆ ವಿಶ್ವನನ್ನು ನೋಡಿ ಕಲಿತುಕೊಳ್ಳಿ ಅಂತಲೂ,ಅವನ ಕಾಲಿನ ಕೆಳಗೆ ನುಗ್ಗಿ ಬುದ್ದಿ ಬರುತ್ತೆ ಅಂತಲೂ, ಬೇರೆ ಹುಡುಗರನ್ನು ಬೈದಾಗ ಉತ್ತೇಜಿತನಾಗುತ್ತಿದ್ದೆ.

ಏಳನೇ ತರಗತಿಯ ಪರೀಕ್ಷೆ ಮುಗಿದಿತ್ತು. ಬೇಸಿಗೆ ರಜೆ ಇನ್ನೂ ಕಳೆದಿರಲಿಲ್ಲ. ಅಮ್ಮ ಅಡುಗೆ ಮನೆಯಲ್ಲಿ ಬಹಳಷ್ಟು ಅಡುಗೆ ಸಾಮಾನುಗಳನ್ನು ಇಟ್ಟುಕೊಂಡು ಅಡುಗೆ ಮಾಡುತ್ತಿದ್ದಳು.ಬಹಳಷ್ಟು ರೀತಿಯ ಗಮಗಮ ಅನ್ನುವ ತಿಂಡಿ ತಿನಿಸುಗಳು ನಾಸಿಕವನ್ನು ಅರಳಿಸುತ್ತಿದ್ದವು. ಯಾವ ಹಬ್ಬಕ್ಕೂ ಅಮ್ಮ ಇಷ್ಟೊಂದು ರೀತಿಯ ಅಡುಗೆ ಮಾಡಿದ್ದನ್ನು ನೋಡಿರಲಿಲ್ಲ.ಅವಳಿಗೆ ಇಷ್ಟು ತರಹದ ಅಡುಗೆ ಮಾಡುವುದಕ್ಕೆ ಬರುತ್ತದೆ ಅಂತ ಗೊತ್ತಾಗಿದ್ದೆ ಅವತ್ತು.


"ಅವ್ವ ಒಂದೇ ಒಂದು ವಡೆ ಕೊಡೆ"
"ಈಗ್ಲೇ ಬೇಡ, ಆಮೇಲೆ ಎಷ್ಟು ಬೇಕಾದರೂ ತಿನ್ನುವೆಯಂತೆ"
"ಆಮೇಲೆ ಅಂದ್ರೆ"
"ರಾಮಣ್ಣನವ್ರು ಊಟ ಮಾಡಿದ ಮೇಲೆ, ಇವತ್ತು ನಮ್ಮ ಮನೆಗೆ ರಾಮಣ್ಣನವ್ರು ಬರ್ತಾ ಇದಾರೆ"
"ರಾಮಣ್ಣ ಅಂದ್ರೆ ಯ್ಯಾರು? ತಿಥಿ ಎಡೆಗೆ ಪೂಜೆ ಮಾಡೋ ಪೂಜಾರಯ್ಯನಾ..? ಇದೆಲ್ಲಾ ಎಡೆ ಪ್ರಸಾದನಾ...?"
"ಥೂ, ಬಿಡ್ತು ಅನ್ನು, ಆ ರಾಮಣ್ಣ ಅಲ್ಲ, ನಮ್ಮ ಶಾಸಕರು. ಓದ್ ಸಲ ಎಲೆಕ್ಷನ್ ನಲ್ಲಿ ಗೆದ್ದಿದ್ರಲ್ಲ ಅವ್ರು"


ಊರಿನಲ್ಲಿ ಓದಿದವರು ಕಡಿಮೆಯೇ, ಬರೆಯಲು ಬಾರದ ಬಹಳ ಜನ. ಅರ್ಜಿ ಬರೆಯಿಸಿಕೊಳ್ಳುವುದಕ್ಕೆ ಅಪ್ಪನ ಬಳಿ ಬರುತ್ತಿದ್ದರು. ಅಪ್ಪ ಅರ್ಜಿ ಬರೆದು ಕೊಡುವುದಷ್ಟೆ ಅಲ್ಲದೇ,ಅಲ್ಪ-ಸ್ವಲ್ಪ ಸರ್ಕಾರಿ ರೀತಿ ನಿಯಮಗಳ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಸರ್ಕಾರಿ ಕೆಲಸವಿದ್ದಲ್ಲಿ ಕೆಲವೊಂದು ಸಲ ಜೊತೆಗೂಡಿ ಮಾಡಿಸುತ್ತಿದ್ದರು. ಅಲ್ಲದೇ ಅಪ್ಪನ ರಾಜಕೀಯ ಜ್ಞಾನ, ಊರ ಜನರಲ್ಲಿ ಗೌರವ ಭಾವನೆ ಮೂಡಿಸಿದ್ದವು. ಒಟ್ಟಿನಲ್ಲಿ ಅಪ್ಪನ ಮಾತು ಊರಿನಲ್ಲಿ ನಡೆಯುತ್ತಿತ್ತು. ಹೀಗಾಗಿ ಚುನಾವಣಾ ದಿನಗಳಲ್ಲಿ ಮನೆಯಲ್ಲಿ ಬಿರುಸಿನ ಚಟುವಟಿಕೆ ಇರುತ್ತಿತ್ತು.


"ರಾಮಣ್ಣನವ್ರು ಬರಬೇಕು ಬಡವರ ಮನೆಗೆ. ಕುಚೇಲನ ಮನೆಗೆ ಕೃಷ್ಣ ಬಂದಹಾಗೆ ಆಯ್ತು ನೋಡಿ"
"ಸ್ವಲ್ಪ ಬದಲಾವಣೆ ಇದೆ, ಆ ಕೃಷ್ಣ ಕುಚೇಲನಿಗೆ ಸಹಾಯ ಮಾಡಲು ಮನೆಗೆ ಬಂದ್ರೆ, ಈ ರಾಮಣ್ಣ ನಿಮ್ಮ ಸಹಾಯ ಯಾಚಿಸಿ ಬಂದಿದ್ದಾನೆ"
"ಅದಿರ್ಲಿ ಬನ್ನಿ, ಕೈ ಕಾಲು ತೊಳೆದುಕೊಳ್ಳಿ, ಊಟ ಮಾಡುತ್ತ ಮಾತಾಡೋಣ"

ಶಾಸಕರು ಮತ್ತು ಅವರ ಕಡೆಯವರು ಊಟ ಮಾಡುತ್ತ ಕುಳಿತಿದ್ದರು. ನಾನು ಯಾವಾಗ ಇವರ ಊಟ ಮುಗಿಯುತ್ತದೆ ಅಂತ ಕಾಯುತ್ತಾ ಅಲ್ಲೇ ನಿಂತಿದ್ದೆ.


"ಬಡವರ ಮನೆ ಊಟ ಚಂದ, ಸಿರಿವಂತರ ಮನೆ ಮಾತು ಚಂದ ಅಂತ ಯ್ಯಾಕೆ ಅಂತಾರೆ ಅಂತ ಇವತ್ತು ಗೊತ್ತಾಯ್ತು ನೋಡಿ ಅಕ್ಕಾವ್ರೆ. ಇಂಥಾ ಊಟ ಬೆಂಗಳೂರಿನಲ್ಲೂ ಸಿಗೊದಿಲ್ಲ ನೋಡಿ"

"ನೀವು ನಮ್ಮ ಮನೆಗೆ ಬರುತ್ತಿರುವುದು ಇದೇ ಮೊದಲ ಸಲ, ನಮ್ಮೂರಿನ ಶಾಸಕರಿಗೆ, ನಾವು ದಿನಾ ತಿನ್ನೋ ಗೊದ್ಡು ಸಾರು ತಿನ್ನಿಸಿ ಕಳಿಸುವುದಕ್ಕೆ ಆಗ್ತದೆಯಾ ?"

"ಇನ್ಮುಂದೆ, ಈ ಊರಿಗೆ ಬಂದರೆ ನಿಮ್ಮ ಮನೆಯಲ್ಲೇ ಊಟ ನೋಡಿ. ಮನೆ ಯಜಮಾನರು ಒಪ್ಪಿದ್ರೆ.ಏನಂತೀರಿ ಮನೆಯ ಯಜಮಾನರು "
"ಎಂಥಾ ಮಾತು, ನೀವು ಬರೋದು ಹೆಚ್ಚೋ, ನಾವು ಬಡಿಸೋದು ಹೆಚ್ಚೋ"
"ಕಳೆದ ಎಲೆಕ್ಷನ್ ನಲ್ಲಿ ನೀವು ನಮಗೆ ಹೆಚ್ಚಿನ ಸಹಾಯ ಮಾಡಲಿಲ್ಲ. ಈ ಸಲ ಆದ್ರೂ ಪೂರ್ಣ ಮನಸ್ಸಿನಿಂದ ಸಹಾಯ ಮಾಡಬೇಕು"
"ರಾಮಣ್ಣೋರೆ, ನಮಗೆ ಈ ಪಕ್ಷ, ಆ ಪಕ್ಷ ಅಂತ ಇಲ್ಲ. ನಮ್ಮ ಊರಿಗೆ ಉಪಕಾರ ಮಾಡೋರು ಯ್ಯಾರದ್ರೂ ಪರವಾಗಿಲ್ಲ ಓಟಾಕ್ತಿವಿ"
"ಈ ಊರಿಗೆ ಕುಡಿಯೋಕೆ ನೀರಿನ ಟ್ಯಾಂಕ್ ಕಟ್ಟಿಸಿದ್ದು ನಮ್ಮ ಪಕ್ಷದವರೆ ಅಲ್ವ. ನಮ್ಮ ಸರ್ಕಾರ ಕರೆಂಟ್ ಕೊಟ್ಟಿದೆ, ಸ್ಕೂಲು ಕೊಟ್ಟಿದೆ, ವಿಧವೆಯರಿಗೆ ಮಾಸಾಶನ ಕೊಡ್ತಾ ಇಲ್ವ.ನಿಮಗೆ ಏನಾದ್ರು ಬೇಕಿದ್ರೆ ಅರ್ಜಿ ಕೊಡಿ, ಸರ್ಕಾರದಿಂದ ಕೊಡ್ಸೊಣ"

"ನಮ್ಮೂರಿಗೆ ಒಂದು ಬಸ್ಸು ಬೇಕು ನೋಡಿ. ಇದನ್ನು ಎಲ್ಲಾ ಶಾಸಕರಿಗೂ ಕೇಳ್ತಾ ಬಂದಿದ್ದೇವೆ. ಇನ್ನೂ ಆ ಕಾಲ ಬಂದಿಲ್ಲ"

"ನಿಮ್ಮ ಯಜಮಾನರು ಬಹಳ ಬುದ್ಧಿವಂತರು ಕಣಮ್ಮ, ಇವರ ಮಾತು ನೋಡಿದ್ರೆ ನಮ್ಮ ಅಜ್ಜಿ ಹೇಳಿದ್ದ ಕತೆ ಜ್ಞಾಪಕ ಬರ್ತಿದೆ, ಹೇಳ್ತಿನಿ ಕೇಳಿ. ಒಂದೂರಿನಲ್ಲಿ ಒಂದು ಬಡ ಸಂಸಾರ ಇತ್ತಂತೆ, ಅದರಲ್ಲಿ ಗಂಡ, ಹೆಂಡತಿ ಮತ್ತು ಅತ್ತೆ ಇದ್ದರಂತೆ. ಆ ಗಂಡ-ಹೆಂಡತಿಗೆ ಮಕ್ಕಳಾಗಿರಲಿಲ್ಲವಂತೆ.ಕಡು ಬಡತನ ಬೇರೆ, ಗಂಡನಿಗೆ ಚೆನ್ನಾಗಿ ಹಣ ಸಂಪಾದಿಸಿ ಮನೆ ಕಟ್ಟಬೇಕು ಅಂತ ಆಸೆ. ಹೆಂಡತಿಗೆ ಚಿನ್ನದ ಮೇಲಿನ ಆಸೆ. ಅಜ್ಜಿಗೆ ಮೊಮ್ಮಕ್ಕಳು ಬೇಕು ಅಂತ ಆಸೆ.ಸರಿ ಒಂದು ದಿನ ಅವರೆಲ್ಲಾ ಕುಳಿತು ಬೇಡಿಕೊಂಡರಂತೆ. ತಕ್ಷಣ ದೇವ್ರು ಪ್ರತ್ಯಕ್ಷ ಆಗಿ ನಿಮಗೆ ಒಂದೇ ಒಂದು ವರ ಕೊಡುತ್ತೇನೆ ಬೇಡಿಕೊಳ್ಳಿ ಅಂತ ಹೇಳಿದನಂತೆ.ಅಜ್ಜಿ ಯೋಚನೆ ಮಾಡಿ ಹೇಳಿದರಂತೆ, ನನಗೆ ನ್ನ ಮೊಮ್ಮಗ ಅರಮನೆಯಂತಹ ನಮ್ಮ ಮನೆಯಲ್ಲಿ ಕೂತುಕೊಂಡು, ಚಿನ್ನದ ತಟ್ಟೆಯಲ್ಲಿ ಊಟ ಮಾಡುವುದನ್ನು ನೋಡಬೇಕು ಅಂತ ಆಸೆ,ಅಂತ ಬೇಡಿಕೊಂಡರಂತೆ. ಅಂದ್ರೆ ಅವರ ಮೊಮ್ಮಗನೂ ಬಂದ ಹಾಗೆ ಆಯ್ತು, ಅರಮನೆಯಂತಹ ಮನೆನೂ ಬೇಡಿದ ಹಾಗೆ ಆಯ್ತು, ಚಿನ್ನದ ತಟ್ಟೆನೂ ಸಿಕ್ಕ ಹಾಗೆ ಆಯ್ತು.ಅದೇ ರೀತಿ ನಿಮ್ಮ ಯಜಮಾನರು ಹೊಳೆಗೆ ಸೇತುವೆ ಬೇಕು ಅಂತ ಕೇಳದೆ, ಬಸ್ಸು ಬೇಕು ಅಂತ ಕೇಳಿದರು. ಬಸ್ಸು ಬಿಡಬೇಕಾದರೆ ಸೇತುವೆಯನ್ನು ಕಟ್ಟಲೇಬೇಕಲ್ಲಾ ಹ್ಹ... ಹ್ಹ...."

"ನೀವು ಏನೇ ಹೇಳಿ, ಈ ಹೊಳೆಯಿಂದ ನಮ್ಮೂರು ದ್ವೀಪದ ತರಹ ಆಗಿಬಿಟ್ಟಿದೆ. ಸೇತುವೆ ಇಲ್ಲದೆ ಬಸ್ಸು ಇಲ್ಲಾ. ಗಾಡಿಯಲ್ಲಿ ಕಬ್ಬು ತುಂಬಿ ಹೊಳೆಯನ್ನು ದಾಟಿಸುವುದು ಎಷ್ಟು ಕಷ್ಟ ಅಂತೀರಿ.ಹೆಂಗಸರು, ಮಕ್ಕಳು ಬೇರೆ ಊರಿಗೆ ಹೊಗಬೇಕಾದರೆ ಮೊದಲು ಹೊಳೆಯಲ್ಲಿ ಎಷ್ಟು ನೀರಿದೆ ಅಂತ ಯೋಚನೆ ಮಾಡಿ ಹೊರಡುತ್ತಾರೆ. ನಮ್ಮೂರಿನಲ್ಲಿ ಮದುವೆ ಸಂಬಂಧಗಳನ್ನು ಬೆಳೆಸೊದು ಬಹಳ ಕಷ್ಟ ಆಗಿಬಿಟ್ಟಿದೆ. ಬಸ್ಸಿಲ್ಲದ ಊರಿಗೆ ಯಾರು ಹೆಣ್ಣು ಕೊಡುತ್ತಾರೆ ಹೇಳಿ. ಒಂದಾ..... ಎರಡಾ............ ಈ ಹೊಳೆಯಿಂದ ನಮಗೆ ಎಷ್ಟು ಉಪಕಾರ ಆಗಿದೆಯೋ, ಅಷ್ಟೆ ಕಷ್ಟನೂ ಆಗಿದೆ"

"ಒಂದು ಸೇತುವೆ ಅಂದ್ರೆ, ಕೋಟಿಗಟ್ಟಲೆ ಟೆಂಡರಿನ ಮಾತು. ಒಂದೇ ಊರಿಗೆ ಕೋಟಿಗಟ್ಟಲೆ ಹಣ ಸುರಿಯುವುದಕ್ಕೆ ಸರ್ಕಾರದವರು ಒಪ್ಪುವುದಿಲ್ಲ. ಸಾವಿರಾರು ಬಸ್ಸು, ಲಾರಿ ಒಡಾಡ್ತ ಇದ್ರೆ,ಈ ಕೆಲಸಕ್ಕೆ ಸರ್ಕಾರ ತಕ್ಷಣ ಹಣ ಮಂಜೂರು ಮಾಡ್ತದೆ. ಇಲ್ಲಿ ಎಷ್ಟು ವಾಹನ ಓಡಾಡುತ್ತವೆ ಹೇಳಿ. ಒಂದು ಊರಿನ ಜನ ಓಡಾಡುವುದಕ್ಕೆ ಕೋಟಿಗಟ್ಟಲೆ ಬೆಲೆಬಾಳುವ ಸೇತುವೆ ಕಟ್ಟಿಸುವುದು,ತೆರಿಗೆ ಕೊಟ್ಟ ಹಣ ವ್ಯರ್ಥ ಮಾಡ್ದ ಹಾಗೆ ಅಲ್ವೆ...?"

"ನೀವು ಹಣ ಹಾಕಿ, ಹಣ ತೆಗೆಯೋ ವ್ಯಾಪಾರಸ್ಥರ ತರಹ ಮಾತಾಡ್ತ ಇದ್ದೀರಾ. ಜನಕ್ಕೆ ಉಪಯೋಗ ಆಗೋದಿದ್ರೆ, ಸರ್ಕಾರ ಲಾಭ ನಷ್ಟ ನೋಡಬಾರದು.ನಮ್ಮೂರು ಇಷ್ಟು ಹಿಂದೆ ಉಳಿಯುವುದಕ್ಕೆ ಸಂಪರ್ಕ ಇಲ್ಲದೇ ಇರೋದೆ ಕಾರಣ. ಮಕ್ಕಳು ಸ್ಕೂಲಿಗೆ ಹೋಗುವುದಕ್ಕೆ ಆಗಲ್ಲ, ಹೆಂಗಸರು ಹೊಳೆದಾಟುವುದು ಕಷ್ಟ. ಬೆಳೆದ ಫಸಲು ದಾಟಿಸುವುದು ಕಷ್ಟ.ಈ ಊರಿನಲ್ಲಿ ಮನೆ ಕಟ್ಟೋಕೆ ಎಷ್ಟು ಕಷ್ಟ ಅಂತೀರಿ. ಮನೆ ಕಟ್ಟುವ ಸಾಮಾನನ್ನು ಮದ್ದೂರಿನಿಂದ ಹೇಗೆ ಈ ಕಡೆ ಸಾಗಿಸುವುದು ನೀವೆ ಹೇಳಿ"

"ಸ್ಕೂಲು ಅಂದಾಗ ಜ್ಞಾಪಕ ಬಂತು ನೋಡಿ. ಕಾನ್ವೆಂಟ್ ನವರು ನಿಮ್ಮ ಹುಡುಗನಿಗೆ ಟಿ.ಸಿ ಕೊಟ್ಟು ಕಳಿಸಿದರಂತೆ. ಆಗ ನೀವು ನನಗೆ ಒಂದು ಮಾತು ಹೇಳಿದ್ರೆ ಅವರ ಗ್ರಹಚಾರ ಬಿಡಿಸ್ತಿದ್ದೆ"

"ಇರ್ಲಿ ಬಿಡಿ, ಅವರು ಹೇಳುವುದಲ್ಲೂ ನ್ಯಾಯ ಇದೆ. ನಮ್ಮ ಮಗನೂ ಅವರ ಶಾಲೆಗೆ ತಕ್ಕಂತೆ ಓದುತ್ತಿರಲಿಲ್ಲ"

"ನಿಮಗೆ ಗೊತ್ತಾಗಲ್ಲ ಬಿಡಿ. ಇದು ಹೊಸದೇನಲ್ಲ. ಯಾರಾದರೂ ಅವರಿಗೆ ಬೇಕಾದವರನ್ನು ಸೇರಿಸಿಕೊಳ್ಳುವುದಕ್ಕೆ ಇಂತಹದೆಲ್ಲಾ ನಾಟಕ ಮಾಡ್ತಾ ಇರ್ತಾರೆ. ಚನ್ನಾಗಿ ಓದಲ್ಲ ಅಂತ ಯಾರಿಗಾದರೂ ಟಿ.ಸಿ ಕೊಟ್ಟು ಕಳಿಸುವುದು, ತಮಗೆ ಬೇಕಾದವರನ್ನು ಆ ಜಾಗಕ್ಕೆ ಸೇರಿಸಿಕೊಳ್ಳುವುದು. ಅದನ್ನು ಅವ್ರು ನೇರವಾಗಿ ಮಾಡುವುದಿಲ್ಲ.ಚೆನ್ನಾಗಿ ಓದೋ ಹುಡುಗರನ್ನು ತೆಗೆದುಕೊಂಡು ಓದಿಸೋಕೆ ಅವ್ರೇ ಯ್ಯಾಕೆ ಬೇಕು. ಅವ್ರು ನಿಜವಾದ ಕಸುಬುದಾರರಾಗಿದ್ರೆ ನಿಮ್ಮ ಮಗನಂತಹ ಹುಡುಗರನ್ನು ತೆಗೆದುಕೊಂಡು ಬೆಳೆಸಬೇಕು.ಚನ್ನಾಗಿ ಓದೋರು ಎಲ್ಲಿದ್ರೂ ಓದ್ತಾರೆ. ಒಳ್ಳೆ ಸ್ಕೂಲು ಬೇಕಾಗಿರೋದು ಸುಮಾರಾಗಿರೋ ಹುಡುಗರಿಗೆ"

"ಬೇರೆ ಯ್ಯಾರನ್ನೊ ಸೇರಿಸಿಕೊಳ್ಳುವುದಕ್ಕೆ ನಮಗೆ ಟಿ.ಸಿ ಕೊಡೋ ವಿಷಯ ನನಗೆ ಗೊತ್ತಿರಲಿಲ್ಲ. ನಮ್ಮ ವಿಶ್ವ ಅವರ ಸ್ಕೂಲಿಗೆ ಹೊಂದಿಕೆ ಆಗಲ್ಲ ಅಂತ ಹೇಳಿ ಬಿಡಿಸಿದ್ರು"

"ಅವ್ರು ಕೊಟ್ರು, ನೀವು ಒಂದು ಮಾತನಾಡದೆ ಟಿ.ಸಿ ಇಸ್ಕೊಂಡು ಬಂದ್ರಿ. ನಿಮ್ಮಂತಹ ಒಳ್ಳೆ ಜನಕ್ಕೆ ಈ ಕಾಲದಲ್ಲಿ ಬೆಲೆ ಇಲ್ಲ. ಇರ್ಲಿ ಬಿಡಿ, ಈಗ ಏನು ಓದುತ್ತಾ ಇದಾನೆ"

"ಏಳು ಮುಗೀತು"

"ಒಳ್ಳೆ ಸಮಯಕ್ಕೆ ನಾನು ನಿಮ್ಮ ಮನೆಗೆ ಬಂದಿದ್ದೀನಿ. ಹೈಸ್ಕೂಲಿಗೆ ನಿಮ್ಮ ಹುಡುಗನಿಗೆ ಇಂಗ್ಲೀಷ್ ಮೀಡಿಯಂ ನಲ್ಲಿ ಸೀಟು ಕೊಡಿಸೋ ಜವಬ್ದಾರಿ ನಂದು. ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೆ ನಿಮ್ಮ ಮಗನ ಜೀವನವೇ ಬದಲಾಗುತ್ತೆ ನೋಡಿ ಯೋಚಿಸಿ"

"ನಮ್ಮ ಹುಡುಗನ್ನು ಒಂದು ಮಾತು ಕೇಳ್ತಿನಿ"

"ಸಣ್ಣ ಮಕ್ಕಳಿಗೆ ಏನು ಗೊತ್ತಾಗುತ್ತೆ. ಬಹಳ ಊರಿನ ನೀರು ಕುಡಿದೋರು ನಾವು, ನಾವು ಅವರಿಗೆ ಮಾರ್ಗದರ್ಶನ ಮಾಡಿ ಬೆಳೆಸಬೇಕು. ಎಲ್ಲದಕ್ಕೂ ಮಕ್ಕಳನ್ನು ಕೇಳಿ ಮಾಡುವುದಕ್ಕೆ ಆಗುವುದಿಲ್ಲ.ಅವರಿಗೆ ನಿರ್ಧಾರ ತಕ್ಕೊಳ್ಳೊ ಅನುಭವ ಇರುತಾ ಹೇಳಿ"

"ನೀವು ಹೇಳಿದ್ದು ಸರಿ ಬಿಡಿ"

"ಮತ್ತೆ ಈಗ ಎಲೆಕ್ಷನ್ ನಲ್ಲಿ ನಿಮ್ಮ ಊರಿನ ಓಟು ನಮಗೆ ಬೀಳೋ ಹಾಗೆ ನೋಡ್ಕೊ ಬೇಕು. ನೀವು ಬೆಳೆಯಿರಿ, ನಾವೂ ಬೆಳೆಯೋಣ"

"ಮತ್ತೆ ನಮ್ಮೂರಿಗೆ ಬಸ್ಸು....."

"ಸೇತುವೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಮಾಡೋಣ.ಇಲ್ಲ ಅಂತ ಹೇಳುದ್ನೆ ?ನೋಡಿ ನಾವು ಜನರ ಹಿತದ ಜೊತೆ ,ನಮ್ಮ ಹಿತವನ್ನು ನೋಡ್ಕೊಬೇಕು. ರಾಜಕೀಯ ಭಾಷೆಯಲ್ಲಿ ಹೇಳೂದಾದರೆ,ನೆಹರೂರವರ ತರ ಬದುಕಬೇಕು ,ಗಾಂಧಿಜಿ ಅವರ ಹಾಗೆ ಅಲ್ಲ .ನೋಡಿ ನೆಹರು ದೇಶಾ ದೇಶಾ ಅಂತ ,ಯಾವತ್ತು ಮನೆಯವರನ್ನ ಕಡೆಗಣಿಸಲಿಲ್ಲ.ನೆಹ್ರುರವರ ಮಕ್ಕಳು ,ಮೊಮ್ಮಕ್ಕಳು ಎಲ್ರು ಪ್ರದಾನ ಮಂತ್ರಿಗಳಾದರು .ಗಾಂಧೀಜಿ ಅವ್ರನ್ನ ನೋಡಿ.ಮನೆ ಕಡೆ ಗಮನ ಕೊಡದೆ ಇದ್ದುದ್ಕೆ ಮಕ್ಕಳು ಮೂರು ಮದ್ಯೆ ಮತ್ತೊಂದು ಅನ್ನೋ ಆಗೇ ಬದುಕ್ತಾ ಇದ್ದಾರೆ . ನಿಮ್ಮ ಮಗನಿಗೆ ಇಂಗ್ಲಿಷ್ ಮೀಡಿಯಂನಿಂದ ಜೀವನವೇ ಬದಲಾಗುತ್ತೆ .ನಿಮಗೇ ಗೊತ್ತು ,ಇಂಗ್ಲಿಷ್ ಗೊತ್ತಿದ್ರೆ ,ಅಮೆರಿಕದಲ್ಲೂ ಬೇಕಾದರೂ ಹೋಗಿ ಬದುಕಬಹುದು.ಬರಿ ಕನ್ನಡ ಅಂತಂದ್ರೆ ಬೆಂಗಳೂರಿನಲ್ಲೂ ಕೆಲಸ ಸಿಗೋದು ಕಷ್ಟವೆ............. "

ಅಲ್ಲೇ ನಿಂತಿದ್ದ ನನಗೆ ಎತ್ತಿ ಒಗೆದ ಹಾಗಾಯ್ತು. ಅಪರೂಪಕ್ಕೆ ಅಮ್ಮ ಮಾಡಿದ ಯಾವ ತಿನಿಸುಗಳು ರುಚಿಸಲಿಲ್ಲ.



(ಮುಂದುವರೆಯುವುದು )

ಶನಿವಾರ, ಆಗಸ್ಟ್ 25, 2012

ಸತ್ಯಮೇವ ಜಯತೆ (ಕಾದಂಬರಿ -5)

                                                      ಬಿಸಿಲೇ ಇರಲಿ .. sunlight let come.. 

ಶಾಂತಾ ಮೇಡಂದು ಐದನೇ ತರಗತಿಗೆ ಮೊದಲ ಪೀರಿಯಡ್. ಅವರು ಆವತ್ತಿನ ಪಾಠ ಮಾಡುವ ಮುಂಚೆ, ಹಿಂದಿನ ದಿನದ ಪಾಠದ ಬಗ್ಗೆ ಇಂಗ್ಲೀಷ್ ಉಕ್ತ ಲೇಖನ (Dictation) ಕೊಡುತ್ತಾರೆ.ಅವರು ಉಚ್ಚರಿಸುವ ಹತ್ತು ಪದಗಳನ್ನು ಬರೆದಾದ ನಂತರ ಅದನ್ನು ಪಕ್ಕದಲ್ಲಿರುವ ವಿದ್ಯಾರ್ಥಿಗಳಿಂದ ಮೌಲ್ಯಮಾಪನ ಮಾಡಿಸಿಕೊಳ್ಳಬೇಕು. ಪಕ್ಕದವರ ಉಕ್ತಲೇಖನವನ್ನು ನಾವು ಮೌಲ್ಯಮಾಪನ ಮಾಡುವುದು ರೂಢಿ. ಇದು ಪ್ರತಿದಿನದ ದಿನಚರಿ.
ಅವತ್ತಿನ ಉಕ್ತಲೇಖನ ಮುಗಿಯಿತು.
ಶಾಂತಾ ಮೇಡಂ "ಎಂಟಕ್ಕಿಂತ ಹೆಚ್ಚು ಸರಿ ಉತ್ತರ ಬರೆದವರು ಕೈ ಮೇಲೆತ್ತಿ"
ಪಕ್ಕದಲ್ಲಿರುವ ನಳಿನಿ ಸೇರಿ, ಇಬ್ಬರು-ಮೂವರು ಕೈ ಎತ್ತಿದರು.
"Good"
"ಎರಡಕ್ಕಿಂತ ಕಡಿಮೆ ಬಂದವರು ಕೈ ಮೇಲೆತ್ತಿ"
ನಾನು ಎಲ್ಲಾ ಕಡೆ ತಿರುಗಿ ನೋಡಿದೆ. ಯಾರೂ ಕೈ ಎತ್ತಿರಲಿಲ್ಲ. ನಾನು ಅಳುಕುತ್ತಲೆ ಕೈ ಎತ್ತಿದೆ.
"ಹತ್ತಕ್ಕೆ ಎಷ್ಟು ಸರಿ ಇದೆ"
"ಯಾವುದು ಇಲ್ಲಾ ಮೇಡಂ, ಮಿಸ್"
"ಇವತ್ತು ಮೊದಲ Dictation ಅಂತ ಬಿಡ್ತಾ ಇದ್ದೇನೆ. ನಾಳೆಯಿಂದ ಸರಿಯಾಗಿ ಓದಿಕೊಂಡು ಬರಬೇಕು"
ಮದ್ದೂರಿನ ಶಾಲೆಯಲ್ಲಿ ಹುಡುಗರು ಒಂದು ಕಡೆ, ಹುಡುಗಿಯರು ಒಂದು ಕಡೆ ಕೂಡುವ ಸಂಪ್ರದಾಯವಿರಲಿಲ್ಲ. ಗಲಾಟೆ ಮಾಡಬಾರದು ಎಂದು, ಒಬ್ಬ ಹುಡುಗನ ಪಕ್ಕ ಒಂದು ಹುಡುಗಿಯ ಹಾಗೆ ಪರ್ಯಾಯವಾಗಿ ಕೂರಿಸುತ್ತಿದ್ದರು. ಹಾಗಾಗಿ ನಮ್ಮ ಬೆಂಚಿನಲ್ಲಿ ನಾನು, ನಳಿನಿ, ಹರೀಶ, ಗೀತ ಮತ್ತು ದೀಪಕ್ ಕುಳಿತುಕೊಳ್ಳುತ್ತಿದ್ದೆವು. ನಮಗೆ ಆ ವಯಸ್ಸಿನಲ್ಲಿ ಮಾತನಾಡುವುದಕ್ಕೆ ಹುಡುಗರೆ ಬೇಕೆನಿಸುತ್ತಿತ್ತು. ಮಾತನಾಡಲು ಪ್ರಯತ್ನಿಸಿದರೆ, ಮಧ್ಯ ಇರುವ ಹುಡುಗಿ ತನಗೆ ತೊಂದರೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಳು. ಆಗಾಗಿ ಹೆಚ್ಚು ಮಾತನಾಡಲು ಅವಕಾಶವಿರಲಿಲ್ಲ.
"ಆರಕ್ಕಿಂತ ಹೆಚ್ಚು ಸರಿ ಇರುವವರು ಕೈ ಎತ್ತಿ"
ನಮ್ಮ ಬೆಂಚಿನ ಎಲ್ಲರೂ ಕೈ ಎತ್ತಿದರು. ತಕ್ಷಣ ಶಾಂತಾ ಮೇಡಂನ ಗಮನ ಸಹಜವಾಗಿ ನನ್ನ ಮೇಲೆ ಬಿತ್ತು.
"ಇವತ್ತು ಎಷ್ಟು ಸರಿ ಇದೆ"
"ಎಲ್ಲಾ ತಪ್ಪು ಮೇಡಂ, ಅಲ್ಲ ಮಿಸ್"
"ಬಾ ಇಲ್ಲಿ"
ಹತ್ತಿರ ಹೋಗಿ ನಿಂತೆ
"ಒಂದರಿಂದ ನಾಲ್ಕನೇ ತರಗತಿಯವರೆಗೆ ಎಲ್ಲಿ ಓದಿದ್ದು"
ಹೇಳಿದೆ.
"ಇಂಗ್ಲೀಷ್ ಅರ್ಥವಾಗದೆ ಹೋದರೆ, ಇಂದಿನ ಪಾಠವನ್ನು ತಂದೆ ತಾಯಿಗಳ ಸಹಾಯದಿಂದ ಓದಿಕೊಂಡು ಬರಬೇಕು"
"ಆಯ್ತು ಮಿಸ್"
"ನಿನ್ನ ಸಮವಸ್ತ್ರ ಬೇರೆ ಬಣ್ಣ ಇದೆಯಲ್ಲಾ, ಯಾವ ಅಂಗಡಿಯಲ್ಲಿ ತೆಗೆದುಕೊಂಡಿದ್ದು"
"ನೀವು ಕೊಟ್ಟ ಅಂಗಡಿಯ ವಿಳಾಸ ಸಿಗಲ್ಲಿಲ್ಲ, ಅದಕ್ಕೆ ಬೇರೆ ಅಂಗಡಿಯಲ್ಲಿ ತಕ್ಕೊಂಡ್ವಿ ಮಿಸ್. ಬಟ್ಟೆ ತೆಗೆದುಕೊಳ್ಳುವಾಗ ಗೊತ್ತಾಗಲಿಲ್ಲ" ಸುಳ್ಳು ಹೇಳಿದೆ.
"ಈಗ ಆಗಿದ್ದು ಆಗಿ ಹೋಗಿದೆ, ಮುಂದಿನ ವರ್ಷ ಸರಿಯಾದ ಬಣ್ಣದ ಸಮವಸ್ತ್ರ ಧರಿಸಬೇಕು"
"ಆಯ್ತು ಮಿಸ್"

ಮೊದಮೊದಲು ಅಪ್ಪ ಶಾಲೆಯವರೆಗೂ ಸೈಕಲ್ಲಿನಲ್ಲಿ ಕೂರಿಸಿಕೊಂಡು ಬಂದು ಬಿಡುತ್ತಿದ್ದರು. ಅದು ಆಗುವ ಕೆಲಸವಲ್ಲ ಅಂತ ಅವರಿಗೂ ಮನಸ್ಸಿಗೆ ಬಂತು. ನನಗೆ ಒಂದು ಸೈಕಲ್ ಕೊಡಿಸಿದರು.ದಿನವೂ, ಹೊಳೆಯವರೆಗೆ ಬಂದು ಸೈಕಲ್ ದಾಟಿಸಿಕೊಡುತ್ತಿದ್ದರು. ನಂತರ ಸುಮಾರು ಐದು ಮೈಲು ಸೈಕಲ್ ಒಬ್ಬನೆ ತುಳಿದು ಶಾಲೆ ತಲುಪುತ್ತಿದ್ದೆ. ಹೊಳೆಯ ನೀರು ಹೆಚ್ಚಾದ ದಿವಸ ಎಂಟು ಮೈಲು ಬಳಸಿಕೊಂಡು ಶಾಲೆ ತಲುಪಬೇಕು.

"ಯ್ಯಾಕೆ ಇವತ್ತು ಲೇಟು"
"ನಮ್ಮೂರಿನ ಹೊಳೆಯ ನೀರು ಹೆಚ್ಚಾಗಿತ್ತು ಮಿಸ್, ಬಳಸಿಕೊಂಡು ಬರೊದು ತಡವಾಯ್ತು"
"ಕಾರಣ ಹೇಳುವುದನ್ನು ಬಿಟ್ಬಿಡು, ಹೊಳೆಯ ನೀರು ಹೆಚ್ಚಾಗಿದ್ದರೆ ಮನೆಯನ್ನು ಒಂದು ಗಂಟೆ ಬೇಗ ಬಿಡಬೇಕು. Dictation ಕೊಡುವ ಮುಂಚೆ ಶಾಲೆ ತಲುಪದಿದ್ದರೆ, ಒಳಗೆ ಬರುವ ಅಗತ್ಯವಿಲ್ಲ"
ಶಾಲೆ ಮುಗಿಸಿ, ಸೈಕಲ್ ಹೊಡೆದುಕೊಂಡು ಹೊಳೆಯ ಬಳಿ ಕಾದಿರುತ್ತಿದ್ದೆ. ಅಪ್ಪ ಒಬ್ಬನೆ ಹೊಳೆ ದಾಟಬೇಡ ಅಂತ ಕಟ್ಟಾಜ್ಞೆ ಮಾಡಿದ್ದರು. ಅವರು ಬಂದ ಮೇಲೆ, ಹೊಳೆ ದಾಟಿ ಮನೆಗೆ ಬರುವಷ್ಟರಲ್ಲಿ ಕತ್ತಲಾಗಿಬಿಡುತ್ತಿತ್ತು. ಮನೆಗೆ ಬಂದ ಮೇಲೆ ಅಲ್ಪಸ್ವಲ್ಪ ಶಾಲೆಯ ಮನೆಗೆಲಸ (home work) ಮಾಡಿ ಮಲಗುತ್ತಿದ್ದೆ. ಅಪ್ಪನಿಗೆ ನಾನು ಹೇಗೆ ಓದುತ್ತಿದ್ದೇನೆ ಎಂದು ಕೇಳಲು ಪುರುಷೊತ್ತು ಇರಲಿಲ್ಲ. ಅಮ್ಮನಿಗೆ ನಮ್ಮ ಪುಸ್ತಕಗಳನ್ನು ಅರ್ಥ ಮಾಡಿಕೊಳ್ಳುವಷ್ಟು ತಿಳುವಳಿಕೆ ಇರಲಿಲ್ಲ. ನಾನು ಓದಿದ್ದೆ ಓದು, ನಡಿದಿದ್ದೆ ದಾರಿ.
"ಎಂಟಕ್ಕಿಂತ ಮೇಲೆ ಸರಿಯಿದ್ದವರು ಕೈ ಮೇಲೆತ್ತಿ"
ನಳಿನಿ ಮತ್ತು ದೀಪಕ್ ಮೈ ಮೇಲೆತ್ತಿದರು
"Good"
"ಐದಕ್ಕಿಂತ ಕೆಳಗೆ ಸರಿಯಿದ್ದವರು ಕೈ ಮೇಲೆತ್ತಿ"
ಮತ್ತೆ ಸುತ್ತ ಮುತ್ತ ಯಾರಾದರೂ ಜೊತೆಗಿರುವರೊ ಎಂದು ನೋಡಿದೆ. ಯಾರು ಜೊತೆಗಾರರಿಲ್ಲದೆ, ಒಬ್ಬನೇ ಕೈ ಮೇಲೆತ್ತಬೇಕಾಗಿ ಬಂತು.
"ಎಷ್ಟು ಸರಿ ಇದೆ"
"ಎರಡು ಮಿಸ್"
"ಬಾ ಇಲ್ಲಿ"
"ದಿನಾ ಮನೆಯಲ್ಲಿ ಇಂದಿನ ಪಾಠವನ್ನು ಓದಿಕೊಂಡು ಬರುವುದಕ್ಕೆ ಏನು ದಾಡಿ?"
"    "
"ಬೂಟು ನೋಡು ಹೇಗೆ ಹಾಕ್ಕೊಂಡಿದ್ದೀಯ"
"   "
"ಯಾವ ಕಾಲಿನ ಶೂ, ಯಾವ ಕಾಲಿಗೆ ಅಂತ ಅಷ್ಟು ಗೊತ್ತಾಗಲ್ವ. ಎಡಗಾಲಿನ ಶೂ ಬಲಗಾಲಿನಲ್ಲಿದೆ, ಬಲಗಾಲಿನ ಶೂ ಎಡಗಾಲಿನಲ್ಲಿದೆ"
ಎಲ್ಲರೂ ನಕ್ಕರು. ಅವಮಾನದಿಂದ ಕಣ್ಣಲ್ಲಿ ನೀರು ಬಂದಿದ್ದೆ ಗೊತ್ತಾಗಲಿಲ್ಲ. ನನಗೆ ನೆನಪಿರುವ ಹಾಗೆ ಅತ್ತದ್ದು ಅದೇ ಮೊದಲ ಸಲ.ನಮ್ಮೂರಿನಲ್ಲಿದ್ದಾಗ ಕಾಲಿಗೆ ಚಪ್ಪಲಿಯೇ ಹಾಕುತ್ತಿರಲಿಲ್ಲ. ಶಾಲೆಗೆ ಸೇರಿದ ನಂತರ ನೇರವಾಗಿ ನಾನು ಬೂಟು ಧರಿಸಲು ಆರಂಭಿಸಿದೆ. ಬಲದ ಕಾಲಿನಲ್ಲಿನ ಬೂಟು ಯಾವುದು,ಎಡದ ಕಾಲಿನಲ್ಲಿನ ಬೂಟು ಯಾವುದು ಅಂತ ತಿಳಿಯುತ್ತಿರಲಿಲ್ಲ. ಅಪ್ಪ ಗಮನಿಸಿದರೆ ಹೇಳುತ್ತಿದ್ದರು, ಇಲ್ಲವಾದರೆ ಇಲ್ಲ.ಹರೀಶನನ್ನು ಕೇಳಿ, ಬಲದ ಕಾಲಿನ ಬೂಟಿನ ದಾರವನ್ನು ಗುರುತಿಗಾಗಿ ಸ್ವಲ್ಪ ಕತ್ತರಿಸಿಕೊಂಡೆ. ಆಮೇಲೆ ಬೂಟು ಬದಲಾವಣೆಯಾಗುವುದು ತಪ್ಪಿತು.

"ಎಂಟಕ್ಕಿಂತ ಮೇಲೆ ಸರಿಯಿದ್ದವರು ಕೈ ಮೇಲೆತ್ತಿ"
ನಳಿನಿ ಕೈ ಮೇಲೆತ್ತಿದಳು
"ವಿಶ್ವನಾಥ, ನಿನ್ನದು ಎಷ್ಟು ಸರಿ ಇದೆ"
"ಯಾವುದು ಇಲ್ಲಾ ಮಿಸ್"
"zero, come here. ನನ್ನ ತರಗತಿಗೆ ಇಂದು ಬರುವುದು ಬೇಡ, ಹೊರಗೆ ತರಗತಿ ಮುಗಿಯುವವರೆಗೂ ನಿಂತುಕೊ"

ಸುಮ್ಮನೆ ಹೊರಗೆ ಹೋದೆ. ದಿನವೂ ಮೊದಲ ಪೀರಿಯಡ್ ನಲ್ಲಿಯೇ ಮನಸ್ಸು ಕುಂದಿಹೋಗುತ್ತಿತ್ತು. ದಿನಪೂರ್ತಿ ಅವಮಾನವನ್ನು ನೆನೆದು ಉತ್ಸಾಹವೇ ಇರುತ್ತಿರಲಿಲ್ಲ.ಮೇಡಂ ಹೇಳುವ ಇಂಗ್ಲೀಷ್ ಪಾಠ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಮನಸ್ಸಿಗೆ ಎಷ್ಟು ಬೇಜಾರಾಗುತ್ತಿತ್ತು ಎಂದರೇ, ಮೊದಲನೇ ಪೀರಿಯಡ್ ಮುಗಿದ ನಂತರ,
ಅದೇ ನೆನಪಿನಲ್ಲಿ ಉಳಿದ ಪಾಠದ ಬಗ್ಗೆ ಅದು ಕನ್ನಡವೇ ಆಗಿದ್ದರೂ ಸರಿಯಾದ ಗಮನ ಕೊಡುವುದಕ್ಕೆ ಆಗುತ್ತಿರಲಿಲ್ಲ.
ಮೊದಮೊದಲು ಶಾಂತಾ ಮೇಡಂ ಕೈಲಿ ಬೈಸಿಕೊಳ್ಳಬಾರದು ಅಂತ, ಮನೆಯಲ್ಲಿ ಓದಲು ಪ್ರಯತ್ನಮಾಡತೊಡಗಿದೆ. ಆದರೆ ಪಾಠ ಅರ್ಥವಾಗದೆ, ಐದು ನಿಮಿಷ ಓದುವುದರೊಳಗೆ ಬೇಸರವಾಗಿ ಪುಸ್ತಕ ಮುಚ್ಚಿಡುತ್ತಿದ್ದೆ. ತೀರಾ ಅತ್ಯಗತ್ಯವಾದ home work ಮಾಡಿ ಮಲಗಿಕೊಳ್ಳುತ್ತಿದ್ದೆ.
"ಎಂಟಕ್ಕಿಂತ ಮೇಲೆ ಸರಿಯಿದ್ದವರು ಕೈ ಮೇಲೆತ್ತಿ"
ನಳಿನಿ ಮತ್ತು ದೀಪಕ್ ಕೈ ಮೇಲೆತ್ತಿದರು.
"ವಿಶ್ವನಾಥನನ್ನು ಕೇಳುವ ಅಗತ್ಯವೇ ಇಲ್ಲ, ಇಲ್ಲಿ ಬಾ, ಕೈ ನೀಡು"
"   "
"ಎಷ್ಟು ಸರಿ ಇದೆ"
"ಒಂದು ಮಿಸ್"
"ಹಾಗದರೆ ಎಡ ಕೈಗೆ ಐದು, ಬಲದ ಕೈಗೆ ನಾಲ್ಕು ಏಟು"
ಬಹಳ ಜೋರಾಗಿ ಕೊಲಿನಲ್ಲಿ ಏಟು ಬಾರಿಸಿದರು, ಆ ಏಟಿಗೆ ಅಂಗೈ ಕೆಂಪಾಗಿ ಹೋಗಿತ್ತು, ಕಣ್ಣಲ್ಲಿ ನೀರು ತುಂಬಿ ಬಂತು.
"ನಿನಗೆ ಎಷ್ಟು ಹೊಡೆದರು ಕಮ್ಮಿಯೇ, ಓದಿಕೊಂಡು ಬಾ ಅಂತ ಹೇಳಿ, ಹೇಳಿ ಸಾಕಾಗಿ ಹೋಗಿದೆ. ನಿನ್ನ ಬಟ್ಟೆ ನೋಡು ಇದಕ್ಕೆ ಇಸ್ತ್ರಿ ಹಾಕಿ ಎಷ್ಟು ದಿನವಾಯ್ತು ಹೇಳು, ಇದನ್ನು ಒಗೆದು ಎಷ್ಟು ದಿನವಾಯ್ತು"
ಅಪ್ಪ ತೆಗೆದುಕೊಟ್ಟಿದುದು ಒಂದೇ ಜೊತೆ ಸಮವಸ್ತ್ರ ಮಾತ್ರ. ಎರಡು ಮೂರು ಜೊತೆ ಒಟ್ಟಿಗೆ ಹೊಲೆಸಿದರೆ, ಬೆಳೆಯುವ ಹುಡುಗನಿಗೆ ಆರು ತಿಂಗಳಲ್ಲಿ ಬಿಗಿಯಾಗುತ್ತದೆ ಎಂಬುದು ಅಪ್ಪನ ಇಂಗಿತ.ಆದ್ದರಿಂದ ಆರು ತಿಂಗಳಾದ ನಂತರ ಇನ್ನೊಂದು ಹೊಲೆಸಿಕೊಡುತ್ತೇನೆ ಅಂದಿದ್ದರು. ಒಂದೇ ಜೊತೆ ಬಟ್ಟೆಯನ್ನು ದಿನವೂ ಒಗೆಯುವುದಾದರೂ ಹೇಗೆ?
ಭಾನುವಾರ ಒಗೆದು ಒಣಗಿಸಬೇಕು. ಕರೆಂಟ್ ಇದ್ದರೆ ಇಸ್ತ್ರೀ, ಇಲ್ಲದಿದ್ದರೆ ಅದೂ ಇಲ್ಲ. ನಮ್ಮೂರಿನಲ್ಲಿ ದಿನಕ್ಕೆ ಆರುಗಂಟೆ ಮಾತ್ರ ಕರೆಂಟ್ ಕೊಡುತ್ತಿದ್ದರು.
"ವಿಶ್ವನಾಥ, ಇವತ್ತು ಏಟು Dictation ಹೇಳುವುದಕ್ಕೆ ಮೊದಲೇ ಕೊಡಲೋ ಅಥವಾ Dictation ಹೇಳಿದ ನಂತರ ಕೊಡಲೋ"
"  "  ಬೀಳುವ ಏಟು ನೆನಪಿಸಿಕೊಂಡು ಮೊದಲೆ ಅಳುಬಂತು.
"ನಿನ್ನನ್ನು A ಸೆಕ್ಷನ್ ಗೆ ಹಾಕಿದ್ದಾದರೂ ಹೇಗೆ ಅಂತ ಹೆಡ್ ಮಾಸ್ಟರನ್ನು ಕೇಳಬೇಕು"
"     " ಎದೆಯಲ್ಲಿ ಢವ ಢವ ಶುರುವಾಗಿತ್ತು. ಹರೀಶ ಕಡೆ ತಿರುಗಿ ನೊಡಿದೆ, ಅವನು ಏನೂ ಗೊತ್ತಿಲ್ಲದವನಂತೆ ಮೇಡಂ ಕಡೆ ನೋಡುತ್ತಿದ್ದ.
"ನಿಮ್ಮಂತವರು ಏಕಾದರೂ ಶಾಲೆಗೆ ಬರುತ್ತೀರಾ, ನಿಮ್ಮಿಂದ ನಮಗೂ ಕೆಟ್ಟ ಹೆಸರು, ಸರಿಯಾಗಿ ಪಾಠ ಹೇಳಿಕೊಡುವುದಿಲ್ಲ ಅಂತ"
ದಿನವೂ ಶಾಂತಾ ಮೇಡಂ ಕೈಲಿ ಅನ್ನಿಸಿಕೊಂಡು ರೂಢಿಯಾಗಿಬಿಟ್ಟಿತು.ಬೆಂಚಿನ ಮೇಲೆ ನಿಂತುಕೊಳ್ಳುವುದು ,ತಲೆ ಬಗ್ಗಿಸಿ ಕಾಲುಗಳ ನಡುವೆ ಕೈ ತೂರಿಸಿ ಕಿವಿ ಹಿಡಿದುಕೊಳ್ಳುವುದು  ಮತ್ತು ಇನ್ನು ಮುಂತಾದ ಪ್ರಯೋಗಗಳನ್ನು ಶಾಂತಾ ಮೇಡಂ ಮಾಡಿ ಮುಗಿಸಿದರು .ಏನು ಮಾಡಿದರು  ಅವರ ಪಾಠವನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಪಾಠ ಅರ್ಥವಾಗದೆ ಉರು ಹಚ್ಚಲು ಪ್ರಯತ್ನಿಸೆದನಾದರು ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಕ್ರಮೇಣ ಇಂಗ್ಲೀಷ್ ಮೇಲೆ ದ್ವೇಷ ಭಾವನೆ ಬೆಳೆಯತೊಡಗಿತು. ಆ ವಿಷಯವನ್ನು ಆಲಕ್ಷ್ಯ ಮಾಡುವುದು ರೂಢಿಯಾಯಿತು. ಮೇಡಂನ ಬೈಗುಳ ಹೆಚ್ಚಾಯಿತು.
"ಯ್ಯಾಕೋ, ಮೇಡಂ ಹತ್ರ ದಿನಾ ಬೈಸಿಕೊಳ್ತೀಯಾ"
"ಅವ್ರು ಇಂಗ್ಲೀಷ್ ಅನ್ನು ಇಂಗ್ಲೀಷ್ ನಲ್ಲಿ ಪಾಠ ಮಾಡಿದರೆ ತಲೆಗೆ ಹೋಗಲ್ಲ"
"ನಿನ್ನ ಅಪ್ಪ ಪಾಠ ಹೇಳಿ ಕೊಡಲ್ವಾ?"
"ಅಪ್ಪನಿಗೆ ಅವರದೇ ಆದ ಕೆಲಸ, ಇತ್ತೀಚೆಗೆ ಮನೆಗೆ ಬರೋದೆ ಲೇಟು, ನಿಂಗೆ ನಿಮ್ಮ ಮನೆಯಲ್ಲಿ ಪಾಠ ಹೇಳಿಕೊಡ್ತಾರ"
"ಅಮ್ಮ ಹೋಂ ವರ್ಕ್ ಮಾಡೋವರೆಗೂ ಊಟ ಬಡಿಸೊಲ್ಲ, ನಿದ್ರೆ ಮಾಡಿಬಿಡ್ತಿನಿ ಅಂತ"
"ದಿನಾಲೂ ಏಟು ತಿಂದೂ, ತಿಂದೂ ಅಳದೆ ಹೊಡೆಸಿಕೊಳ್ಳೋದು ರೂಢಿ ಆಗ್ತಾ ಇದೆ"
"ಮಿಸ್ Dictation ಹೇಳುವಾಗ, ನಾನು ತೋರಿಸ್ತೀನಿ ನೋಡಿಕೊಂಡೂ ಬರ್ಕೊ"
"ಬೇಡ"
"ಯಾಕೆ"
"ಕಾಪಿ ಮಾಡೋದು ತಪ್ಪು ಅಂತ, ನಮ್ಮೂರಿನ ಮೇಷ್ಟ್ರು ಹೇಳಿದ್ದಾರೆ"
"ಮತ್ತೆ ಸುಳ್ಳು ಹೇಳುತ್ತಿಯಾ, ಸುಳ್ಳು ಹೇಳೋದು ತಪ್ಪು ಅಂತ ನಿಮ್ಮ ಮೇಷ್ಟ್ರು ಹೇಳಲ್ವ"
"ಅದೇ ಬೇರೆ, ಇದೆ ಬೇರೆ, ನಿನಗೆ ಅರ್ಥವಾಗಲ್ಲ ಬಿಡು"
"ಸರಿ, ದಿನಾನೂ Dictation ಹೇಳುವಾಗ ಒಂದೆರಡು ಜಾಗ ಖಾಲಿ ಬಿಡು. ನಾನೇ ಸ್ಪೆಲ್ಲಿಂಗ್ ಬರೆದು ರೈಟ್ ಹಾಕ್ತಿನಿ, ಹೇಗಿದ್ರು ದಿನಾ ನಾನೇ ತಾನೆ ಕರೆಕ್ಷನ್ ಮಾಡೊದು"
"ಮೇಡಂ ಗೆ ಗೊತ್ತಾದ್ರೆ? ಬೇಡ, ಬೇಡ"
"ಎಲ್ಲಾನು ಸರಿ ಮಾಡೊದು ಬೇಡ, ನಾಲ್ಕೈದು ಸರಿಮಾಡಿದ್ರೆ ಮೇಡಂ ಹೊಡೆಯೊದಿಲ್ಲ, ಅನುಮಾನನೂ ಬರೊದಿಲ್ಲ. ನಂಗೆ ದಿನಾ ಮೇಡಂ ನಿನ್ನ ಹೊಡೆಯೊದನ್ನು ನೋಡೊಕಾಗೊದಿಲ್ಲ"
ನಾನು ಒಪ್ಪಲಿಲ್ಲ, ಅದಕ್ಕೆ ಬಲವಾದ ಕಾರಣವೂ ಇತ್ತು.ಆಗ ನಾನು ಮೂರನೇ ಕ್ಲಾಸಿನಲ್ಲಿದ್ದೆ. ನಮ್ಮೂರಿನ ಸ್ಕೂಲಿನಲ್ಲಿ ವರ್ಷಕ್ಕೆ ಒಂದೇ ಪರೀಕ್ಷೆ ನಡೆಯುವುದು. ನಮ್ಮ ಊರಿನ S.S.L.C ಓದುವ ಹುಡುಗರು ಪರೀಕ್ಷೆ ಯಲ್ಲಿ ನಕಲು
ಮಾಡುವುದಕ್ಕೆ, ಸಣ್ಣ ಸಣ್ಣ ಚೀಟಿ ತಯಾರುಮಾಡುವುದನ್ನು ನೋಡಿದೆ. ಅತ್ಯಂತ ಸಣ್ಣ ಅಕ್ಷರದಲ್ಲಿ, ಸಣ್ಣ ಹಾಳೆಯಲ್ಲಿ ಬರೆದುಕೊಂಡು, ಗುಪ್ತವಾಗಿರಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದರು. ನಾನು ಹಾಗೆ ಮಾಡಿದರೆ ಹೇಗೆ? ಎಂಬ ಉಪಾಯ ಹೊಳೆಯಿತು. ಹಾಗೆ ಬರೆದುಕೊಂಡು ಅಂಗಿಯ ಕಿಸೆಯಲ್ಲಿರಿಸಿಕೊಂಡು ಹೋದೆ. ಅದನ್ನು ತೆಗೆದುಕೊಂಡು ಬರೆಯುತ್ತಿರಬೇಕಾದರೆ ಮೇಷ್ಟ್ರು ಹಿಡಿದುಕೊಂಡರು.
"ವಿಶ್ವ ಏನಿದು?
"           "
"ಬೆಳೆಯುವ ಪೈರು ಮೊಳಕೆಯಲ್ಲಿ ಅಂತಾರೆ, ಇಷ್ಟು ಸಣ್ಣ ವಯಸ್ಸಿಗೆ ನಕಲು ಮಾಡುವ ನೀನು ಮುಂದೆ ಏನಾಗಬಹುದು. ನಿನಗೆ ಕಾಪಿ ಮಾಡುವುದಕ್ಕೆ ಏನಾಗಿತ್ತು. ನೀನು ಏನೂ ಬರೆಯದಿದ್ದರೂ ಪಾಸು ಮಾಡುತ್ತಿರಲಿಲ್ವಾ. ಏನೂ ಬಾರದ ದಡ್ಡ ವಿದ್ಯಾರ್ಥಿಗಳನ್ನು ಕ್ಷಮಿಸಬಹುದು, ಆದರೆ ನೀತಿಗೆಟ್ಟವರನ್ನ ಸಹಿಸುವುದಿಲ್ಲ. ಕಾಪಿ ಮಾಡಿ ಯಾರನ್ನು ಮೆಚ್ಚಿಸಬೇಕು ಅಂತ ಅಂದುಕೊಂಡಿದ್ದಿ.ನಿಮಗೆ ಪರೀಕ್ಷೆ ಕೊಡುವುದು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವುದಕ್ಕೆ, ನಮಗೋಸ್ಕರ ಅಲ್ಲ. ಉತ್ತರ ಗೊತ್ತಿರದ ಪ್ರಶ್ನೆಗಳು ನಿಮ್ಮನ್ನು ಇನ್ನು ಓದುವಂತೆ ಪ್ರೇರೇಪಿಸಬೇಕೇ ವಿನಃ,ಅಡ್ಡದಾರಿಯಲ್ಲಿ ಕೊಂಡೊಯ್ಯಬಾರದು.ಎಲ್ಲಾ ಸರಿ. ನೀನು ಈಗ ಕಾಪಿ ಮಾಡಿ ಬರೆದರೆ, ನಿನಗೆ ಏನು ಸಿಗುತ್ತದೆ, ಕೆಲಸವ? ಪದಕವ? ರ್ಯಾಂಕ?........"
ಅವತ್ತೇ ಕೊನೆ ಮತ್ತೆ ನಕಲು ಮಾಡುವ ಯೋಚನೆಯನ್ನೇ ಮಾಡಲಿಲ್ಲ. ಎಷ್ಟೇ ಅವಮಾನವಾದರೂ ಸರಿ, ನಕಲು ಮಾಡಬಾರದು ಅಂತ ತಿರ್ಮಾನ ಮಾಡಿಬಿಟ್ಟಿದ್ದೆ.

ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ ಅಂತಾರೆ. ಇಂಗ್ಲೀಷ್ ಪೀರಿಯಡ್ ನಲ್ಲಿ ಹೋದ ಮಾನ, ಬೇರೆ ವಿಷಯದಲ್ಲಿ ಬುದ್ಧಿವಂತ ಅನ್ನಿಸಿಕೊಂಡಿದ್ದರೆ ಬರುತ್ತಿತ್ತೊ ಏನೋ.ಆದರೆ ಪಟ್ಟಣದ ಖಾಸಗಿ ಶಾಲೆಯಲ್ಲಿ ಬುದ್ಧಿವಂತ ಎನ್ನಿಸಿಕೊಳ್ಳುವುದು ನನ್ನಂತಹ ಹಳ್ಳಿಹುಡುಗನಿಗೆ ಸುಲಭವಾಗಿರಲಿಲ್ಲ. ಇಡೀ ತರಗತಿಯಲ್ಲಿ ಇಂಗ್ಲೀಷ್ ಮೇಡಂನಿಂದ ಏಟು ತಿನ್ನುತ್ತಿದ್ದದ್ದು ನಾನೊಬ್ಬನೆ. ಹಾಗಾಗಿ ದಡ್ಡ ಎಂಬ ಹಣೆಪಟ್ಟಿ ಸುಲಭವಾಗಿ ನನ್ನ ತಲೆಯ ಮೇಲೆ ಬಂದು ಕುಳಿತಿತ್ತು. ಮೇಡಂ ಇಂಗ್ಲೀಷನ್ನು ಕನ್ನಡದ ಮೂಲಕ ಕಲಿಸಿದ್ದರೆ ಸಹಾಯವಾಗುತ್ತಿತ್ತೊ ಏನೋ? ಆದರೆ ಮೇಡಂ ಇಂಗ್ಲೀಷ್
ಪಾಠವನ್ನು ಇಂಗ್ಲೀಷಿನಲ್ಲೇ ಹೇಳಲು ಪ್ರಯತ್ನಿಸುತ್ತಿದ್ದರು. ಅವರ ಅಭಿಪ್ರಾಯದಲ್ಲಿ, ಹಾಗೆ ಮಾಡುವುದರಿಂದ ಹೆಚ್ಚು ಹೆಚ್ಚು ಚೆನ್ನಾಗಿ ಇಂಗ್ಲೀಷನ್ನು ಗ್ರಹಿಸಬಹುದು ಎಂಬುದಾಗಿತ್ತು. ಇಂಗ್ಲೀಷ್ ಅನ್ನು ಕನ್ನಡದ ಮೂಲಕ ಕಲಿಸುವುದು ಅವರ ಮಟ್ಟಕ್ಕೆ ತಕ್ಕುದಾಗಿರಲಿಲ್ಲ. ಹಾಗಾಗಿ ಅವರು ಇಂಗ್ಲೀಷ್ ಪಾಠವನ್ನು ಬೇರೆ ಬೇರೆ ಇಂಗ್ಲೀಷ್ ವಾಕ್ಯಗಳನ್ನು ರಚಿಸಿ ತಿಳಿಸಲು ಪ್ರಯತ್ನಿಸುತ್ತಿದ್ದರು. ನನಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. ನನಗೆ ಇಂಗ್ಲೀಷ್ ನ ಬಗ್ಗೆ ಮೂಡಿದ ನಿರಾಸಕ್ತಿ, ಎಲ್ಲಾ ವಿಷಯಗಳಲ್ಲಿ ವಿಸ್ತರಿಸಲು ಬಹಳ ಸಮಯ ಬೇಕಾಗಲಿಲ್ಲ. ಯಾವುದೇ ವಿಷಯದಲ್ಲಿ ಆಸಕ್ತಿ ಉಳಿಯಲಿಲ್ಲ. ಕಾಟಚಾರಕ್ಕೆ ದಿನಾಲೂ ಶಾಲೆಗೆ ಬರುವುದು, ಹೋಗುವುದು ನಡೆಯುತ್ತಿತ್ತು. ಕನ್ನಡ ಮಾಸ್ಟ್ರು ಕೂಡ "ಬಂದ ಪುಟ್ಟ, ಹೋದ ಪುಟ್ಟ" ಅಂತ ಆಡಿಕೊಳ್ಳುವ ಮಟ್ಟಕ್ಕೆ ಬೆಳೆಯಿತು.ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲಿ 35 ಅಂಕಗಳನ್ನು ಬೇರೆ ಗಳಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಂಕಪಟ್ಟಿಗೆ ಪೋಷಕರ ರುಜು ಹಾಕಿಸಿಕೊಂಡು ಬರಬೇಕಿತ್ತು.
ಅದನ್ನು ಅಪ್ಪನಿಗೆ ತೋರಿಸದೆ ನಾನೆ ಅಪ್ಪನ ಹಾಗೆ ಸಹಿ ಹಾಕಿ, ವಾಪಾಸು ಕೊಡುತ್ತಿದ್ದೆ. ಹಾಗೂ ಹೀಗೂ ಒಂದು ವರ್ಷ ದೂಡಿದೆ. ಐದನೇ ತರಗತಿಯ ಕೊನೆಯ ಮುಖ್ಯ ಪರೀಕ್ಷೆ ಬರೆದು, ಬೇಸಿಗೆ ರಜದ ಮಜಾ ಅನುಭವಿಸಿದೆ.
"ನಾಳೆಯಿಂದ ವಿಶ್ವನ ಸ್ಕೂಲು ಶುರುವಾಗುತ್ತೆ, ಅವ್ರ ಶಾಲೆಯಿಂದ ಬನ್ನಿ ಅಂತ ಯ್ಯಾಕೆ ಕಾಗದ ಬರೆದಿದ್ದು"
"ಆರನೇ ತರಗತಿಗೆ, ವಿಶ್ವನನ್ನ ಸೇರಿಸಿಕೊಳ್ಳೊದಿಲ್ವಂತೆ"
"ಯ್ಯಾಕೆ"
"ಅವನ ಕತೆ ಒಂದಾ.. ಎರಡಾ..."
"ಏನಾಯ್ತು"
"ಅವನ್ನ ಪಾಸು ಮಾಡುವುದಕ್ಕೆ ಆಗೋದಿಲ್ಲ, ಆದರೂ ಪಾಸು ಮಾಡಿ, ಟಿ.ಸಿ ಕೊಡ್ತೀವಿ ತೆಗೆದುಕೊಂಡು ಹೋಗಿ ಅಂತ ಹೇಳಿದ್ರು"
"ಅಷ್ಟು ಮಂಕಾದನೇನು ನನ್ಮಗ"
"ಅಲ್ಲಿ ಹೇಳಿದ C ಸೆಕ್ಷನ್ ನಲ್ಲಿ ಕುಳಿತಿದ್ದರೆ, ಯಾರ ಗಮನಕ್ಕೂ ಬರ್ತಿರ್ಲಿಲ್ಲ. ಹತ್ತರಲ್ಲಿ ಹನ್ನೊಂದು ಅಂತ ಸುಮ್ಮನಾಗುತ್ತಿದ್ದರು. ಹೋಗಿ, ಹೋಗಿ A ಸೆಕ್ಷನ್ ನಲ್ಲಿ ಕುಳಿತುಕೊಂಡರೆ  ದಡ್ಡತನ ಎದ್ದು ಕಾಣದೇ ಇರ್ತದ"
"ಇರ್ಲಿ ಬಿಡಿ"
"ಎಲ್ಲಾ ಅಂಕಪಟ್ಟಿಗೂ ನನ್ನ ಸಹಿ ಅವನೇ ಮಾಡಿಕೊಟ್ಟಿದ್ದಾನೆ. ನನಗೆ ಇವ್ನು ತೆಗೆದ ಮಾರ್ಕ್ಸು ಎಲ್ಲಾ ಗೊತ್ತಾಗುತ್ತೆ ಅಂತ""ಇಷ್ಟೊಂದು ಕೆಟ್ಟ ಬುದ್ಧಿ ಎಲ್ಲಿ ಕಲಿತ"
"ಇಂಗ್ಲೀಷ್ ಮೇಡಂ, ಇವನ ಇಸ್ರೀ ಇಲ್ಲದ ಶರ್ಟು, ಕೊಳೆಯಾದ ಬೂಟು, ಓದು, ತರಲೆ ಎಲ್ಲಾ ವರ್ಣಿಸಿದ್ರು"
"ಈಗೇನು ಮಾಡೊದು"
"ಇನ್ನೇನು, ಸರ್ಕಾರಿ ಶಾಲೆ ಇದೆಯಲ್ಲ. ಅಲ್ಲಿಗೆ ಟಿ.ಸಿ ಕೊಟ್ಟು ಸೇರಿಸಿ ಬಂದಿದ್ದೇನೆ"
"ಆಯ್ತು ಬಿಡಿ, ಅವನ ಮೇಲೆ ರೇಗಬೇಡಿ. ಕುದುರೆಗೆ ಬಲವಂತವಾಗಿ ನೀರು ಕುಡಿಸೊಕ್ಕಾಗಲ್ಲ"
"ಅವನ ಹಣೆ ಬರಹ, ಓದದೆ ಇದ್ರೆ ಹೊಲ ಹೂಳಬೇಕು ಅಷ್ಟೆ. ನಾವೇನು ಮಾಡೊದಿಕ್ಕಾಗುತ್ತೆ"
ಅಪ್ಪ ಅಮ್ಮ ಮಾತನಾಡುತ್ತಿದ್ದುದ್ದನ್ನು ಸುಮ್ಮನೆ ಮಲಗಿದ ಹಾಗೆ ನಟಿಸುತ್ತಿದ್ದ ನನ್ನ ಕಿವಿಗೆ ಬೀಳುತ್ತಿತ್ತು. ಖಾಸಗಿ ಸ್ಕೂಲಿನಿಂದ ಹೊರ ಹಾಕಿದುದ್ದಕ್ಕೆ ಬಹಳ ಸಂತೋಷವಾಗಿತ್ತು.
                                                (ಮುಂದುವರೆಯುವುದು)

ಶುಕ್ರವಾರ, ಆಗಸ್ಟ್ 17, 2012

ಸತ್ಯಮೇವ ಜಯತೆ (ಕಾದಂಬರಿ -4)

                                                                    A for 'A' ಸೆಕ್ಷನ್

ರಾತ್ರಿಯೆಲ್ಲಾ ನಿದ್ರೆ ಬಾರದೆ, ಯಾವಾಗ ಬೆಳಗಾಗುತ್ತದೋ ಎನ್ನುವಂತಾಗಿತ್ತು. ಗಣಿತದಲ್ಲಿ ಎಷ್ಟು ಅಂಕ ಬಂದಿರಬಹುದು ಎಂಬ ಯೋಚನೆ, ನಿದ್ರೆ ಮಾಡಲು ಬಿಡಲಿಲ್ಲ.ಬೇರೆ ಎಲ್ಲಾ ವಿಷಯದ ಪ್ರಶ್ನೆ ಪತ್ರಿಕೆ ನೋಡಿ ನನಗೆ, ಎಷ್ಟು ಅಂಕ ಬರಬಹುದು ಎಂದು ಲೆಕ್ಕ ಹಾಕಿದ್ರೆ. ಗಣಿತ ಮತ್ತು ಇಂಗ್ಲೀಷ್ ನಲ್ಲಿ ಎಷ್ಟು ಬರಬಹುದು ಎಂದು ಲೆಕ್ಕ ಹಾಕಲು ಮನಸ್ಸು ಒಪ್ಪಲಿಲ್ಲ,ಬರೆದಿದ್ದು ಹಾಗಿದೆ, ಬಂದಷ್ಟು ಬರಲಿ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದೆ. ಛೇ... ಸೂತ್ರಗಳನ್ನು ಗಣಿತ ಪರೀಕ್ಷೆಯ ದಿನ ಒಂದು ಸಲ, ಎಲ್ಲಾ ತಿರುವಿ ಹಾಕಿದ್ದರೆ...... ಛೇ.. ಛೇ..ಅವತ್ತು ಹಿಂದಿನ ದಿನವೆಲ್ಲಾ ಸರಿಯಾಗಿ ಒಮ್ಮೆ ಒದಿದ್ದನ್ನು,ಗಟ್ಟಿಮಾಡಿಕೊಂಡು,ಪರೀಕ್ಷೆ ಬರೆದಿದ್ದರೆ... ಛೇ.. ಛೇ... ಆಗಿದ್ದೆಲ್ಲ ಆಗಿಹೋಗಿದೆ ಎಂದು ನನಗೆ ನಾನೆ ಸಮಾಧಾನ ಹೇಳಿಕೊಂಡರೂ ಸಮಾಧಾನವಿಲ್ಲ. ಪದೇ ಪದೇ ನಿಟ್ಟುಸಿರು ಹೊರಬರುತ್ತಲೇ ಇದೆ. ಆದರೂ ಎದೆ ಯಾಕೋ ಭಾರ,ಮಲಗಲು ಆಗದೆ ಎದ್ದುಕೂತು,ಗಡಿಯಾರ ನೋಡಿದರೆ ಆಗಲೇ ಐದು ಗಂಟೆ!
ಅಮ್ಮ ಆಗಲೇ ಎದ್ದು ನೀರಿನ ಒಲೆಗೆ ಬೆಂಕಿ ಹಾಕುತ್ತಿದ್ದಾಳೆ.ಎದ್ದು ಸ್ನಾನಾದಿಗಳನ್ನು ಮುಗಿಸುವ ಹೊತ್ತಿಗೆ ಆರುಗಂಟೆಯಾಗಿತ್ತು.ಅಪ್ಪನು ಬೇಗ ಸಿದ್ದರಾದರು, ಅವರು ನಮ್ಮ ಊರಿನವರಂತೆ ವಾರಕ್ಕೊಂದೆ ಸಲ ಸ್ನಾನ. ದಿನಾ ಮುಖ ತೊಳೆದು ಹಲ್ಲುಜ್ಜುತ್ತಾರಷ್ಟೆ. ಮೊದಲು ನಾನೂ ಅಷ್ಟೆ ವಾರಕ್ಕೊಂದೇ ಸಲ ಸ್ನಾನ ಮಾಡುತ್ತಿದ್ದುದು, ಹಾಸ್ಟೆಲಿಗೆ ಸೇರಿದಾಗಿನಿಂದ ದಿನಾ ಸ್ನಾನ ಮಾಡುವುದು ರೂಢಿಯಾಗಿದೆ.ನಾನು ದಿನಾ ಪಟ್ಟಣದವರ ಹಾಗೆ ಸ್ನಾನ ಮಾಡಿದರೆ ಅಮ್ಮನಿಗೂ ಖುಷಿ.ಆದರೆ ಅವಳು ಅಷ್ಟೂ ನೀರನ್ನು ದಿನಾ ಬಾವಿಯಿಂದ ಸೇದಿ ತರಬೇಕು ಎಂಬುದಷ್ಟೆ ನನ್ನ ದುಃಖ.
ಇನ್ನೂ ಸ್ವಲ್ಪ ಕತ್ತಲೆ ಇರುವಾಗಲೆ, ಹೊಳೆ ಹತ್ತಿರ ತಲುಪಿದ್ದೆವು. ಬೆಳಗಿನ ಚಳಿಗೆ ಹೊಳೆಯ ನೀರು ತಣ್ಣಗಿತ್ತು. ಅಪ್ಪ ಪಂಚೆಯನ್ನು ಮೇಲಕ್ಕೆ ಕಟ್ಟಿಕೊಂಡು ದಾಟಿದರು.ನಾನು ಪ್ಯಾಂಟ್ ಮೇಲೆ ಮಾಡಲು ಪ್ರಯತ್ನ ಮಾಡಿದೆನಾದರೂ ಅದು ಮಂಡಿಯ ಮೇಲೆ ಹೋಗಲಿಲ್ಲ.ಸರಿ ಪ್ಯಾಂಟ್ ತೇವವಾಗುವುದನ್ನು ತಪ್ಪಿಸಲು, ಪ್ಯಾಂಟ್ ಬಿಚ್ಚಿ ತಲೆಮೇಲೆ ಇಟ್ಟುಕೊಂಡು,
ನಿಕ್ಕರಿನಲ್ಲಿ ಹೊಳೆ ದಾಟಿದೆ. ಹೊಳೆ ದಾಟಿದ ಮೇಲೆ, ಕಾಲು ಒಣಗುವವರೆಗೂ ನಡೆದು, ನಂತರ ಮಾರ್ಗದ ಮಧ್ಯೆ ಪ್ಯಾಂಟ್ ಹಾಕಿಕೊಂಡೆ. ಮದ್ದೂರಿನ ಮುಖ್ಯ ರಸ್ತೆ ತಲುಪುವ ಹೊತ್ತಿಗೆ ಬೆಳಗಾಗಿತ್ತು.ಹಾಗೆ ಮುಖ್ಯರಸ್ತೆ ಮೇಲೆ ಸ್ವಲ್ಪ ದೂರ ನಡೆದರೆ, ಸರ್ಕಾರಿ ಬಸ್ ಸ್ಟ್ಯಾಂಡ್, ಸರ್ಕಾರಿ ಬಸ್ಸ್ ನವರು ಮಧ್ಯ ನಿಲ್ಲಿಸುವುದಿಲ್ಲ. ಬಸ್ಸ್ ಸ್ಟ್ಯಾಂಡಿನವರೆಗೆ ನಡೆದು ಹೋಗದೆ ವಿಧಿ ಇಲ್ಲ.ಬಸ್ ಸ್ಟ್ಯಾಂಡಿನ ಪಕ್ಕ ಒಂದು ಗುಡಿಸಿಲಿನಲ್ಲಿ ಹೋಟೆಲ್ ನಡೆಸುತ್ತಾರೆ, ಅಪ್ಪ ಯಾವಾಗಲೂ ಅಲ್ಲೇ ಕರೆದುಕೊಂಡು ಹೋಗುವುದು.ಸ್ಟ್ಯಾಂಡಿನ ಹೋಟೆಲಿಗಿಂತ ಕಡಿಮೆ ಬೆಲೆ, ಹೆಚ್ಚು ರುಚಿ.ಒಂದು ಸಾದಾ ದೋಸೆಗೆ ಒಂದೇ ರೂಪಾಯಿ. ಅದೇ ಸ್ಟ್ಯಾಂಡಿನ ಹೋಟೆಲಿನಲ್ಲಿ ಮೂರು ರೂಪಾಯಿ. ತಿಂಡಿ ತಿಂದು ಬಸ್ಸು ಹಿಡಿದೆವು. ಪುಣ್ಯಕ್ಕೆ ಸೀಟು ಸಿಕ್ಕಿತು.
ನಾಲ್ಕೈದು ನಿಲ್ದಾಣ ಬರುವಷ್ಟರಲ್ಲಿ, ಬಸ್ಸು ತುಂಬಿದ ಬಸುರಿಯಂತಾಯ್ತು. ಎರಡು ಕಾಲು ಇಟ್ಟು ನಿಲ್ಲಲು ಸ್ಥಳವಿಲ್ಲದಷ್ಟೂ ತುಂಬಿತು. ಆದರೂ ಎಲ್ಲಾ ಹಳ್ಳಿಗಳಲ್ಲೂ ನಿಲ್ಲಿಸದೇ ಹೋಗುವ ಹಾಗಿಲ್ಲ.ಇಲ್ಲದಿದ್ದರೆ, ವಾಪಾಸ್ಸು ಬರುವಾಗ ಆ ಜನರು ಅಡ್ಡ ಹಾಕಿ, ಚಾಲಕನ ಬೆವರಿಳಿಸುತ್ತಾರೆ.
"ಅಯ್ಯೋ ಚಪ್ಪಲಿ ಕಾಲಿನಲ್ಲಿ ತುಳಿದ್ಬಿಟ್ಟಿಯಲ್ಲೇ?" 
"ಗೊತ್ತಾಗಲಿಲ್ಲ ಕಣಜ್ಜಿ"
"ಗೊತ್ತಾಗಲಿಲ್ಲವಂತೆ, ಗೊತ್ತಾಗಲಿಲ್ಲ, ಕಣ್ಣಿಗೆ ಏನು ಇಟ್ಕಂಡಿದಿಯಾ?"
ಮುದುಕಿ ಯಾವುದೋ ಹೆಂಗಸನ್ನು ಬೈಯುತಿತ್ತು. ಆ ಹೆಂಗಸು ಅಜ್ಜಿಯ ಬೈಗುಳ ತಾಳಲಾರದೆ, ಹಿಂದೆ ಸರಿದು ನಮ್ಮ ಸೀಟಿನ ಹತ್ತಿರ ಬಂದು ನಿಂತರು. ಅರೇ ಎಲ್ಲೋ ನೋಡಿದ ಹಾಗೆ ಇದೆ.ಇವರನ್ನ ಅನ್ನಿಸಿತು. ಸರಿಯಾಗಿ ನೋಡಿದಾಗ ತಿಳಿಯಿತು, ಇವರು ನಮ್ಮ ಇಂಗ್ಲೀಷ್ ಟೀಚರ್, ಶಾಂತ ಮೇಡಂ ಅಂತ. ತಕ್ಷಣ ಮುಖವನ್ನು ಕಿಟಕಿಯ ಕಡೆ ಮಾಡಿಕೊಂಡೆ.ಒಂದು ಕ್ಷಣ ಎಲ್ಲಿ ನನ್ನನ್ನು ಕಂಡುಹಿಡಿದುಬಿಟ್ಟರೊ ಅಂತ ಭಯವಾಯಿತು. ಅವರಿಗೆ ಸೀಟು ಬಿಟ್ಟು ಕೊಡುವುದೋ, ಬೇಡವೋ ಅಂತ ಮನಸ್ಸಿನಲ್ಲೇ ತೊಳಲಾಟ ಶುರುವಾಯಿತು.ನಾನೇನೋ ಸೀಟು ಬಿಟ್ಟುಕೊಡಬಹುದು. ಆದರೆ ಅವರು, ಯಾರಪ್ಪ ನೀನು? ಅಂತ ಕೇಳಿ ಬಿಟ್ಟರೆ. ಅವರಾಗಿ ನನ್ನ ಕಂಡುಹಿಡಿಯುವುದು ಕಷ್ಟ. ಆಗಿನ ನನ್ನ ಮುಖಕ್ಕೂ,ಈಗಿನ ಚಿಗುರು ಮೀಸೆಯ ಮುಖಕ್ಕೂ ಬಹಳ ವ್ಯತ್ಯಾಸವಿದೆ. ನಾನಾಗೇ ನನ್ನ ಪರಿಚಯ ಹೇಳದೆ, ಕಂಡು ಹಿಡಿಯುವುದು ಕಷ್ಟ. ನಾನಾಗಿಯೇ ಪರಿಚಯ ಮಾಡಿಕೊಂಡರು ಅವರಿಗೆ ನೆನಪಿರುತ್ತದೋ, ಇಲ್ಲವೋ..... ನೆನಪಿರದೇ ಏನು, ಪ್ರತಿದಿನ ಗೋಳುಹೊಯ್ಯದೆ ಪಾಠ ಮಾಡುತ್ತಿರಲಿಲ್ಲ, ಅಂದ ಮೇಲೆ ನೆನಪಿರುತ್ತದೆ.ಮೂರು ಬಸ್ಸಿಗೆ ಆಗುವಷ್ಟು ಜನ ಒಂದೇ ಬಸ್ಸಿನಲ್ಲಿ ತುಂಬಿದ್ದರು. ಶಾಂತ ಮೇಡಂ ಹಿಡಿದುಕೊಳ್ಳಲು ಸ್ಥಳವಿಲ್ಲದೇ ಜೋಲಿ ಹೊಡೆಯುತ್ತಿದ್ದರು. ನನಗೆ ತಡೆದುಕೊಳ್ಳಲು ಆಗಲಿಲ್ಲ.
"ದಯವಿಟ್ಟು ಇಲ್ಲಿ ಕುಳಿತುಕೊಳ್ಳಿ ಮೇಡಂ" ಎಂದು ಹೇಳಿ ಎದ್ದು ನಿಂತೆ.ಬಲವಂತವಾಗಿ "ಮಿಸ್" ಅನ್ನುವ ಪದ ಉಪಯೋಗಿಸಲಿಲ್ಲ. ಇಲ್ಲದಿದ್ದರೆ ಯಾರೋ ಹಳೆಯ ಸ್ಟೂಡೆಂಟ್ ಅಂತ ಕಂಡುಹಿಡಿಯಬಹುದು ಎಂಬ ಹೆದರಿಕೆಯಿಂದ, ಯಾರೋ ಸೀಟು ಬಿಟ್ಟು ಕೊಟ್ಟಿದ್ದುದು ಅವರಿಗೆ ಆಶ್ಚರ್ಯವಾಗಿರಬೇಕು.ನನ್ನ ಮುಖವನ್ನು ನೋಡುವ ಪ್ರಯತ್ನವನ್ನು ಮಾಡಿದರಾದರೂ, ನಾನು ಬೇರೆ ಕಡೆ ಮುಖ ತಿರುಗಿಸಿ ನಿಂತಿದ್ದರಿಂದ,ಅವರಿಗೆ ಸರಿಯಾಗಿ ನೋಡಲಾಗುತ್ತಿರಲಿಲ್ಲ. ಬಸ್ಸು ಮುಂದಕ್ಕೊಡುತಿತ್ತು. ಮನಸ್ಸು ಹಿಂದಕ್ಕೊಡಿತು....
ಮದ್ದೂರಿನ ಸ್ಕೂಲಿಗೆ ಸೇರಿದ ಮೊದಲ ದಿನ, ಐದನೇ ತರಗತಿಯ ಮಕ್ಕಳನ್ನು ಸಾಲಾಗಿ ನಿಲ್ಲಲು ಹೇಳಿದರು. ಮುಖ್ಯೋಪಾಧ್ಯಾಯರು ಎಲ್ಲರ ಹಿನ್ನಲೆ ಮತ್ತು ಮುಖ್ಯಸ್ಥರು ಗುರುತು ಮಾಡಿರುವ
ರೀತಿಯ ಮೇಲೆ A, B, C ಸೆಕ್ಷನ್ ಗೆ ಹೋಗಲು ಹೇಳುತ್ತಿದ್ದರು. ನಾನು ಹಿಂದಿರುವ ಹುಡುಗನಿಗೆ -
"ನೀನು ಇದೇ ಸ್ಕೂಲಾ ಓದಿದ್ದು"
"ಹ್ಮೂ.."
"A, B, C ಸೆಕ್ಷನ್ ಅಂದ್ರೇನು"
"A ಸೆಕ್ಷನ್ ನಲ್ಲಿ ಎಲ್ಲಾ ಚೆನ್ನಾಗಿ ಓದೋರು, B ನಲ್ಲಿ ಸುಮಾರಾಗಿ ಓದೋರು, C ಸೆಕ್ಷನ್ ನಲ್ಲಿ ಉಳಿದವರು"
"ನಾಲ್ಕನೇ ಕ್ಲಾಸಿನಲ್ಲಿ ನಿಂದು ಯಾವ ಸೆಕ್ಷನ್"
"ನಾನು ಯಾವಾಗಲು A ಸೆಕ್ಷನ್,ಈಗಲೂ ಅಲ್ಲಿಗೆ ಕಳಿಸ್ತಾರೆ"
ನನ್ನ ಸರದಿ ಬಂದಾಗ, ಮುಖ್ಯೋಪಾಧ್ಯಾಯರು ಕಾಗದಗನ್ನು ಪರಿಶೀಲಿಸಿ "ನೀನು C ಸೆಕ್ಷನ್" ಅಂದ್ರು.
ಬಹಳ ಅವಮಾನ ಮಾಡಿದ ಹಾಗೆ ಅನ್ನಿಸಿತು. ನಮ್ಮೂರಿನ ಸ್ಕೂಲಿನಲ್ಲಿ ಮೇಷ್ಟ್ರು, ಆಲೆಮನೆ ನಂಜಪ್ಪನ ಮಗಳಿಗೆ "good, good" ಅನ್ನುತ್ತಿದ್ದರೇ ಹೊರತು, ಯಾರನ್ನು ದಡ್ಡ ಅನ್ನುತ್ತಿರಲಿಲ್ಲ.ನಂಜಪ್ಪನ ಮಗಳು ಗೌರಿಯ ಅಕ್ಷರ ಬಹಳ ದುಂಡಾಗಿದ್ದುದರಿಂದ ಹಾಗೆ ಹೇಳುತ್ತಾರೆ ಅಂತ ತಿಳಿದುಕೊಂಡಿದ್ದೆ. ಅಷ್ಟು ಬಿಟ್ಟರೆ ಯಾರು ಚೆನ್ನಾಗಿ ಓದೋರು, ಯಾರು ಓದದೆ ಇರೋರು ಅಂತ ನಮ್ಮಲ್ಲಿ ವಿಂಗಡಣೆ ಇರಲಿಲ್ಲ. ನಾನು ಚೆನ್ನಾಗಿ ಓದುತ್ತಿದ್ದೆನೋ, ಇಲ್ಲವೋ ಗೊತ್ತಿರಲಿಲ್ಲ. ಮೇಷ್ಟ್ರು ಯಾವಾಗಲೂ ಅದರ ಬಗ್ಗೆ ಹೇಳಿರಲಿಲ್ಲ.ಎಲ್ಲರೂ ಪಾಸಾಗುತ್ತಿದ್ದೆವು, ಅಂದರೆ ಎಲ್ಲರೂ ಚೆನ್ನಾಗಿ ಓದುತ್ತಿದ್ದೆವು ಅಂತ ತಿಳಿದುಕೊಂಡಿದ್ದೆ.
"ಯಾವ ಸೆಕ್ಷನ್ ಅಂದ್ರು" ಜವಾನ ಕೇಳಿದ.
"A ಸೆಕ್ಷನ್"
"ಸರಿ, ಮೊದಲ ಕೊಠಡಿ ಕಡೆ ಹೋಗು" ಅಂತ ಹೇಳಿದ.
ಸೀದಾ A ಸೆಕ್ಷನ್ ಗೆ ಹೋಗಿ ಎರಡನೇ ಬೆಂಚಿನ ಮೇಲೆ ಕುಳಿತುಕೊಂಡೆ. ನನ್ನ ಹಿಂದೆ ನಿಂತಿದ್ದ ಹುಡುಗ ಬಂದು ನನ್ನ ಪಕ್ಕ ಕುಳಿತುಕೊಂಡ. ನಾನು A ಸೆಕ್ಷನ್ ನಲ್ಲಿ ಕುಳಿತುಕೊಂಡಿರುವುದನ್ನು ಕಂಡು ಅವನಿಗೆ ಆಶ್ಚರ್ಯ.
"ನೀನು C ಸೆಕ್ಷನ್ ಅಲ್ವಾ"
"                      "
"ಸರ್ ಗೆ ಗೊತ್ತಾದ್ರೆ ಬೈತಾರೆ"
"ನಾನೇನು ದಡ್ಡ ಅಲ್ಲ"
"ನಿನ್ನ ಹೆಸರೇನು?"
"ವಿಶ್ವ, ನಿನ್ನ ಹೆಸರು?"
"ಹರೀಶ್"
"ಯಾರಿಗೂ ಹೇಳ್ಬ್ಯಾಡ್ವೊ ಹರೀಶ"
"ಸರಿ"
ಮೊದಲ ದಿನ,ಮೊದಲ ತರಗತಿ ಶಾಂತಾ ಮೇಡಂ ಹಾಜರಾತಿ ಪುಸ್ತಕ ತೆಗೆದುಕೊಂಡು ಬಂದು "ಒಂದರಿಂದ ನಾಲ್ಕನೇ ತರಗತಿಯವರೆಗೆ ಇಲ್ಲಿಯೇ ಓದಿದ ವಿದ್ಯಾರ್ಥಿಗಳ ಹೆಸರು ಆಗಲೇ ದಾಖಲಾಗಿದೆ.ಹೊಸದಾಗಿ ಬಂದವರು ಹೆಸರು ಹೇಳಿ" ಎಂದರು.ನಾಲ್ಕು ಐದು ಹುಡುಗ ಹುಡುಗಿಯರು ಎದ್ದು ನಿಂತರು. ನಾನೂ ಎದ್ದು ನಿಂತೆ.'ಹೆಸರು ಹೇಳಿ' ಎಂದು ಹಾಜರಾತಿ ಪುಸ್ತಕದಲ್ಲಿ ಬರೆದುಕೊಳ್ಳತೊಡಗಿದರು. ಎದೆ 'ಢವ್ ಢವ್' ಅಂತ ಬಡಿದುಕೊಳ್ಳುತ್ತಿತ್ತು. ಧೈರ್ಯ ಮಾಡಿಕೊಂಡು ಹೆಸರು ಹೇಳಿದೆ, ಬರೆದುಕೊಂಡರು.ಹರೀಶ ಏನೂ ಗೊತ್ತಿಲ್ಲದವನಂತೆ ಸುಮ್ಮನಿದ್ದ.ಮೊದಲ ದಿನ ಪಾಠವೇನು ನಡೆಯಲಿಲ್ಲ. ಎಲ್ಲರೂ ಬಂದು ಎಷ್ಟು ಪುಟದ ಬರೆದುಕೊಳ್ಳುವ ಪುಸ್ತಕ ಬೇಕು, ಓದಲು ಯಾವ ಯಾವ ಪುಸ್ತಕ ತೆಗೆದುಕೊಳ್ಳಬೇಕು
ಎಂಬ ವಿವರವನ್ನಷ್ಟೆ ಹೇಳಿದರು. ಪ್ರತಿಗಂಟೆಗೊಮ್ಮೆ ಬೇರೆ ತರಗತಿ ಶುರುವಾದಾಗ "ಈ ಮೇಡಂ ನ ಹೆಸರೇನು" ಎನ್ನುತ್ತಿದ್ದೆ. ಹರೀಶ ಮೇಡಂ ಅನ್ನಬಾರದು "ಮಿಸ್" ಅನ್ನು ಎನ್ನುತ್ತಿದ್ದ.ಇಲ್ಲಿ ಮೇಡಂಗಳಿಗೆ "ಮಿಸ್" ಅನ್ನುತ್ತಾರೆ ಅಂತ ಗೊತ್ತಾಯ್ತು. ಮೇಡಂ ಅಂತ ಏಕೆ ಕರೆಯಬಾರದು ಎಂದು ಕೇಳಿದೆ. ಹರೀಶ ಹೇಳಲಿಲ್ಲ.
"ನಿನಗೆ A B C D ಬರುತ್ತಾ?" ಎನ್ನುತ್ತಾ ಹರಿಶನನ್ನು ಮಾತಿಗೆಳೆದೆ .
"ಅದು ಒಂದನೇ ಕ್ಲಾಸಿನಿಂದಲೇ ಗೊತ್ತು"
"ಕ್ಯಾಟ್, ಬ್ಯಾಟ್ ಸ್ಪೆಲ್ಲಿಂಗ್ ಬರುತ್ತಾ"
"ಓ, ಓ ಬರುತ್ತೆ"
"ಎಲ್ಲಾ ವಾರಗಳನ್ನು ಇಂಗ್ಲೀಷಿನಲ್ಲಿ ಹೇಳಲು ಬರುತ್ತಾ"
"ಬರುತ್ತೆ, ಬರುತ್ತೆ"
ಹರೀಶನನ್ನು ಮಾತನಾಡಿಸುತ್ತ, ನನ್ನ ಓದು ಎಷ್ಟರ ಮಟ್ಟಿಗೆ ಇದೆ ಎಂದು ಮೊದಲ ಸಲ ಗೊತ್ತಾಗಿತ್ತು. ಅವನ ಜೊತೆ ಸರಿಸಮಾನನಾಗುವುದಕ್ಕೆ ಮೂರು, ನಾಲ್ಕು ವರ್ಷವಾದರು ಬೇಕು ಅನ್ನಿಸತೊಡಗಿತು.ಪ್ರತಿಸ್ಟೆಗೆ A ಸೆಕ್ಷನ್ ಗೆ ಬಂದು ತಪ್ಪು ಮಾಡಿದಿನೇನೋ, C ಸೆಕ್ಷನ್ ಗೆ ಹೋಗಿದ್ದರೆ ನನ್ನ ಮಟ್ಟದ ಹುಡುಗರು ಇರುತ್ತಿದ್ದರೋ ಏನೋ, ಆದರೆ ಹಿಂದಿರುಗುವ ಹಾಗಿಲ್ಲ.
ಮೊದಲ ದಿನ ಶಾಲೆಯಿಂದ ಕರೆದುಕೊಂಡು ಹೋಗಲು ಅಪ್ಪ ಬಂದಿದ್ದರು.
"ಹೇಗಿದೆ ಹೊಸ ಶಾಲೆ"
"ಎಷ್ಟೊಂದು ದೊಡ್ಡ ಶಾಲೆ ಗೊತ್ತಾ ಅಪ್ಪ, ಒಂದೊಂದು ತರಗತಿಗೂ, ಮೂರು-ಮೂರು ಗುಂಪು ಇದೆ"
"ನಿನ್ನದು ಯಾವ ಗುಂಪು"
"A" (A ಗೆ ಬಂದಿರುವ ಗುಟ್ಟು ಅಪ್ಪನ ಬಳಿ ಹೇಳಲಿಲ್ಲ, ಅಪ್ಪನೂ ಕೇಳಲಿಲ್ಲ)
"ಮತ್ತೆ"
"ಯಾರೂ ನೆಲದ ಮೇಲೆ ಕೂರುವ ಹಾಗಿಲ್ಲ, ಎಲ್ಲರಿಗೂ ಕುಳಿತುಕೊಳ್ಳುವುದಕ್ಕೆ ಬೆಂಚಿದೆ"
"ಮತ್ತೆ"
"ಒಂದೊಂದು ವಿಷಯಕ್ಕೂ ಒಬ್ಬೊಬ್ಬರು ಮಿಸ್ಸು/ಮೇಷ್ಟ್ರು. ನಮ್ಮ ಊರಿನ ಶಾಲೆಯ ಹಾಗಲ್ಲ"
"ಹೌದಾ! ಮತ್ತೆ"
"ಒಂದು ದಿನಕ್ಕೆ ಏಳು ಪೀರಿಯಡ್ ಗಳು, ಆಟಕ್ಕೆ ಒಂದೇ ಗಂಟೆ, ನಮ್ಮ ಶಾಲೆಯ ಹಾಗಲ್ಲ"
"ಹೌದಾ, ಮತ್ತೆ"
"ಎಲ್ಲಾ ವಿಷಯಕ್ಕೂ ಬೇರೆ, ಬೇರೆ ಪುಸ್ತಕ ಇಡಬೇಕಂತೆ. ನಮ್ಮ ಊರಿನ ಶಾಲೆಯ ಹಾಗೆ ಎಲ್ಲವನ್ನೂ ಒಂದೇ ಪುಸ್ತಕದಲ್ಲಿ ಬರೆಯುವ ಹಾಗಿಲ್ಲ"
"ಮತ್ತೆ"
"ನಮ್ಮ ಊರಿನ ಶಾಲೆಯ ಹಾಗೆ ಯುನಿಫಾರಂ ಅವರು ಕೊಡುವುದಿಲ್ಲ, ನಾವೇ ಕೊಂಡುಕೊಳ್ಳಬೇಕು. ಇಂದೇ ಅಂಗಡಿಯಲ್ಲಿ ಕೊಳ್ಳಬೇಕು ಅಂತ ವಿಳಾಸ ಕೊಟ್ಟಿದ್ದಾರೆ"
"ಮತ್ತೆ"
"ಬರೀ ಕಾಲಿನಲ್ಲಿ ಹೋಗುವ ಹಾಗಿಲ್ಲ, ಬೂಟು ಹಾಕಿಕೊಂಡು ಹೋಗಬೇಕಂತೆ. ಮತ್ತೆ ಎಲ್ಲಾ ತೆಗೆದುಕೊಳ್ಳುವುದಕ್ಕೆ ಒಂದೇ ವಾರ. ಮುಂದಿನವಾರದಿಂದ ಎಲ್ಲಾ ಹೊಂದಿಸಿಕೊಂಡು ಬನ್ನಿ ಅಂತ ಹೇಳಿದ್ದಾರೆ"
ಶಾಲೆಯವರು ಹೇಳಿದ ಅಂಗಡಿಗೆ ಹೋದೆವು. ಯ್ಯಾಕೋ ಅಪ್ಪನಿಗೆ ಅವರ ದರಗಳೆಲ್ಲಾ ದುಬಾರಿ ಎನಿಸಿದವು. ಚೌಕಾಸಿ ಮಾಡಿದಾಗ, ಅಂಗಡಿಯವನು ಬೇಕಾದ್ರೆ ತಕ್ಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದು ರೇಗಿಬಿಟ್ಟ.ಅಪ್ಪ ನನ್ನನ್ನು ಬೇರೆ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋದರು. ಅಲ್ಲಿ ಶಾಲೆಯ ಹೆಸರು ಹೇಳಿ, ಕಡಿಮೆ ಬೆಲೆಯ ಕಾಟನ್ ಸಮವಸ್ತ್ರ ಖರೀದಿಸಿದೆವು. ಅಂಗಡಿಯಲ್ಲಿ ನೋಡಿದಾಗ, ಬಟ್ಟೆಯ ಬಣ್ಣ ಶಾಲೆಯ ಸಮವಸ್ತ್ರವನ್ನು ಹೋಲುತ್ತಿದ್ದರೂ, ಸೂಕ್ಷ್ಮವಾದ ವ್ಯತ್ಯಾಸವಿತ್ತು. ಆದರೆ ಅದು ತೆಗೆದುಕೊಳ್ಳುವಾಗ ಗಮನಕ್ಕೆ ಬರಲಿಲ್ಲ. ಬಟ್ಟೆ ಹೊಲಿಸಿ, ಪ್ರಾರ್ಥನೆಗಾಗಿ ಸಾಲಿನಲ್ಲಿ ನಿಂತಾಗ,
ನನ್ನ ಬಟ್ಟೆಯ ಬಣ್ಣದಲ್ಲಿ ವ್ಯತ್ಯಾಸ ಸುಲಭವಾಗಿ ಗುರುತಿಸಬಹುದಿತ್ತು.

                                                           (ಮುಂದುವರೆಯುವುದು)

ಬುಧವಾರ, ಆಗಸ್ಟ್ 8, 2012

ಸತ್ಯಮೇವ ಜಯತೆ (ಕಾದಂಬರಿ -3)


                                                         ಹಳ್ಳಿ ಮೇಸ್ಟ್ರೆ... ಹಳ್ಳಿಮೇಸ್ಟ್ರೆ.

ಮಂಗಳವಾರ ಬೆಳಗ್ಗೆ ಕರಿಯನ ಕೈಲಿ ಗಾಡಿ ಕಟ್ಟಿಸಿ, ಮನೆ ಬಾಗಿಲಿಗೆ ತಂದು ನಿಲ್ಲಿಸಿದರು. ಅಮ್ಮ ಅದರ ಮೇಲೆ ಸ್ವಲ್ಪ ಒಣ ಹುಲ್ಲು ಹಾಕಿ, ಮೇಲೆ ಚಾಪೆ ಹಾಕಿದರು.ನಾನಾಗಿ ಗಾಡಿಯಲ್ಲಿ ಹೋಗಿ ಮಲಗಲು ಸಾಧ್ಯ ಆಗದಷ್ಟು ಸುಸ್ತು. ಕೊನೆಗೆ ಅಮ್ಮ, ಅಪ್ಪನೆ ಕೈ ಹಿಡಿದುಕೊಂಡು ಗಾಡಿಯಲ್ಲಿ ಚಾಪೆಯ ಮೇಲೆ ಮಲಗಿಸಬೇಕಾಯ್ತು. ದೊಡ್ಡ ಕಂಬಳಿ ಮುಖದ ಮೇಲೆ ಹೊಚ್ಚಿಕೊಂಡು ಮಲಗಿಬಿಟ್ಟೆ.ಗಾಡಿ ಮುಂದೆ ಹೋಗುತಿದ್ದುದು ಅಲುಗಾಟದಿಂದ ಅರಿವಾಗುತ್ತಿತ್ತು.


"ಒಂದು ಎರಡು ಬಾಳೆಲೆ ಹರಡು"
"ಒಂದು ಎರಡು ಬಾಳೆಲೆ ಹರಡು"
"ಮೂರು ನಾಲ್ಕು ಅನ್ನ ಹಾಕು"
"ಮೂರು ನಾಲ್ಕು ಅನ್ನ ಹಾಕು"


ಮೇಷ್ಟ್ರು ಹುಡುಗರಿಗೆ ಪಾಠ ಹೇಳಿ ಕೊಡ್ತ ಇದ್ದುದು ಕೇಳಿ, ಗಾಡಿ ನಮ್ಮೂರಿನ ಸ್ಕೂಲು ಹಿಂದಿನ ರಸ್ತೆಯನ್ನು ತಲುಪಿದೆ ಎಂದು ಮುಖದ ಮೇಲೆ ಮುಸುಕು ಹಾಕಿದ್ದರು ಗೊತ್ತಾಯ್ತು.


"ನಮಸ್ಕಾರ ಮೇಷ್ಟ್ರೇ"
"ಗೌಡರಿಗೆ ನಮಸ್ಕಾರ"
"ನಮ್ಮ ಮಗನಿಗೆ ಹುಷಾರಿಲ್ಲ, ಅದಕ್ಕೆ ಡಾಕ್ಟ್ರುಗೆ ತೋರಸಣಾ ಅಂತ ಕರಕೊಂಡು ಹೋಗ್ತಾಯಿದೀನಿ"
"ಹೋ.. ಹಾಗೇನು? ಮತ್ತೇ ರಿಸಲ್ಟು?"
"ಇನ್ನೂ ನೋಡಿಲ್ಲ ಸಾ, ಇವನಿಗೆ ಹುಷಾರಾದ ಮೇಲೆ ಇವನನ್ನೆ ಕರಕೊಂಡು ಹೋಗಿ ನೋಡಿ ಬರಬೇಕು"
"ನೋಡಿ ನಮ್ಮೂರ ಪಟೇಲರ ಮಗನ ಬಿಟ್ಟು ಯ್ಯಾರು ಈ ಸಲ ಸೈನ್ಸ್ ನಲ್ಲಿ PUC ಪಾಸಾಗಿಲ್ಲ. ಆರ್ಟ್ಸ್ ನಲ್ಲಿ ಇಬ್ರು ಪಾಸಾಗಿದ್ದಾರಂತೆ ಪುಣ್ಯಕ್ಕೆ, ನಮ್ಮ ಸ್ಕೂಲಲ್ಲಿ ಪಾಠ ಕಲಿತವರು, ಒಳ್ಳೆ ಡಿಗ್ರಿ ಮಾಡುದ್ರೆ ನಮಗೆ ಸಂತೋಷ ನೋಡಿ"


ನಾನು ಕಂಬಳಿ ಸರಿಸಿ, ಕಿಟಕಿ ಪಕ್ಕದಲ್ಲಿ ನಿಂತು ಮಾತನಾಡುತಿದ್ದ ಮೇಷ್ಟ್ರುಗೆ 'ನಮಸ್ಕಾರ ಸಾರ್' ಎಂದೆ. 'ಇರಲಿ ಇರಲಿ ಮಲಿಕ್ಕೊ' ಅಂದ್ರು.


"ನೀವು ಹೋಗಿ ಬನ್ನಿ ಗೌಡ್ರೆ, ರಿಸಲ್ಟು ಏನಾಯ್ತು ಅಂತ ತಿಳಿಸುವುದ ಮರಿಬ್ಯಾಡ್ರಿ, ಯಾಕಂದ್ರೆ ವಿಶ್ವ ನಮ್ಮ ಸ್ಟೂಡೆಂಟ್. ನಮಗೂ ಕೂತೂಹಲ ಇರುತ್ತೆ ನೋಡಿ"
"ನಿಮಗೆ ಹೇಳದೆ ಇರುತ್ತೇವೆನು ಮೇಷ್ಟ್ರೇ?. ಕರಿಯ ನಡಿ"

"ಐದು ಆರು ಬೇಳೆಯ ಸಾರು"
"ಐದು ಆರು ಬೇಳೆಯ ಸಾರು"
"ಏಳು ಎಂಟು ಪಲ್ಯಕೆ ದಂಟು"
"ಏಳು ಎಂಟು ಪಲ್ಯಕೆ ದಂಟು".......


ನಮ್ಮೂರಿನಲ್ಲಿ ಇದ್ದಿದು ಒಂದರಿಂದ ನಾಲ್ಕನೇ ತರಗತಿಯ ಪ್ರೈಮರಿಸ್ಕೂಲು ಮಾತ್ರ. ನಾಲ್ಕು ತರಗತಿಗಳಿದ್ದರೂ, ಇರುವುದೊಬ್ಬರೆ ಮೇಷ್ಟ್ರು. ನಾಲ್ಕು ಮೇಷ್ಟ್ರುಗಳನ್ನು ನೇಮಿಸಿದರೂ, ಪಾಠ ಮಾಡುವುದಕ್ಕೆ ಸಾಧ್ಯವಾಗುವುದು ಒಬ್ಬರಿಗೆ ಮಾತ್ರ. ಯಾಕೆಂದರೆ ಅಲ್ಲಿರುವುದು ಒಂದೇ ಕೊಠಡಿ. ಆ ಕೊಠಡಿಯೊಳಗೆ ನಾಲ್ಕು ಗೆರೆಯನ್ನು ಎಳೆದು, ನಾಲ್ಕು ಭಾಗವನ್ನಾಗಿ ಮಾಡಿ, ಒಂದೊಂದು ಮೂಲೆಗೂ ಒಂದೊಂದು ತರಗತಿಯ ಹುಡುಗರನ್ನು ಕೂರಿಸಿದ್ದಾರೆ. ಒಂದನೇ ತರಗತಿಯ ಪಾಠವನ್ನು ಎರಡು, ಮೂರು ಮತ್ತು ನಾಲ್ಕನೇ ತರಗತಿಯವರು ಕೇಳಬಹುದು. ಎಲ್ಲ ಪಾಠವನ್ನು ಎಲ್ಲಾ ತರಗತಿಯವರು ಕೇಳದೆ ವಿಧಿ ಇಲ್ಲ. ಗಲಾಟೆ ಹೆಚ್ಚಾದರೆ, ಯಾವುದಾದರು ಮೂರು ತರಗತಿಯವರನ್ನು ಆಟಕ್ಕೆ ಬಿಟ್ಟು, ಒಂದು ತರಗತಿಗೆ ಮಾತ್ರ ಪಾಠ ಮಾಡುತ್ತಾರೆ. ಆಗಾಗಿ ನಮಗೆ ಬಹಳ ಆಟದ ವಿರಾಮವಿರುತ್ತಿತ್ತು ಈ ಸ್ಕೂಲಿನಲ್ಲಿ ನಾವು ಓದುವಾಗ. ಈಗೆಲ್ಲಾ ಹೆಚ್ಚಿಗೆ ಆಟಕ್ಕೆ ಬಿಡುವುದಿಲ್ಲವಂತೆ, ಯಾಕೆಂದರೆ ಕಳೆದ ವರ್ಷ ಮೂರು ತರಗತಿಯವರನ್ನು ಆಟಕ್ಕೆ ಬಿಟ್ಟಿದ್ದರಂತೆ. ಮೂರು ತರಗತಿಯವರು ಆಟ ಆಡುವಷ್ಟು ಜಾಗ ಸ್ಕೂಲಿನ ಮುಂದೆ ಇಲ್ಲ. ಅದಕ್ಕೆ ಹುಡುಗರು ರೋಡಿನಲ್ಲಿ ಕಳ್ಳ-ಪೋಲಿಸ್ ಆಟ ಆಡುವಾಗ, ಸರ್ಕಾರಿ ಜೀಪು ಗುದ್ದಿ ತಲೆಗೆ ಪೆಟ್ಟಾಗಿತ್ತಂತೆ. ಪಾಪ ಮೇಷ್ಟ್ರುನ್ನ ಎಲ್ರು ವಿಚಾರಣೆ ಮಾಡಿ ಬಯ್ದಿದ್ದಾರೆ. "ಯಾವಾಗಲೂ ಹುಡುಗ್ರು, ಆಟ ಆಡುತ್ತಲೆ ಇರುತ್ತವೆ, ನೀವು ಯಾವಾಗ ಪಾಠ ಮಾಡ್ದೀರೋ ಗೊತ್ತಿಲ್ಲ" ಅಂತ ಪಂಚಾಯ್ತಿ ಮಾಡಿದ್ದಾರೆ. ಅದಕ್ಕೆ ಮೇಷ್ಟ್ರು ಸ್ಕೂಲಿಗೆ ಕಾಂಪೌಂಡ್ ಇಲ್ಲ, ಕಾಂಪೌಂಡ್ ಕಟ್ಟಿಸಿದರೆ ಮಕ್ಕಳು ರಸ್ತೆಗೆ ಹೋಗುವುದಿಲ್ಲ ಅಂತ ಸಮಜಾಯಷಿ ಕೊಟ್ಟಿದ್ದಾರೆ.


ಕೊನೆಗೆ ಸರ್ಕಾರದಿಂದ ಕಾಂಪೌಂಡ್ ಕಟ್ಟುವುದಕ್ಕೆ ಹಸಿರು ನಿಶಾನೆ ಬಂತು. ಆದರೆ ಒಂದೇ ಕಡೆ ಮಾತ್ರ ಕಾಂಪೌಂಡ್ ಕಟ್ಟಿ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದಾರೆ. ಮುಂದೆ ಕಟ್ಟುವುದಕ್ಕೆ ದುಡ್ಡು ಬಂದಿಲ್ಲವೊ ಅಥವಾ ಕಂಟ್ರಾಕ್ಟರು ದುಡ್ಡು ನುಂಗಿ ಅರ್ಧ ಮಾತ್ರ ಕಟ್ಟಿಸಿದ್ದಾನೊ ಗೊತ್ತಿಲ್ಲ. ಆಮೇಲೆ ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂತ ಕಾಣುತ್ತೆ. ಯಾಕೆಂದರೆ ಇಲ್ಲಿ ಬಹುಪಾಲು ಹೊಸತಲೆಮಾರಿನ ಜನಗಳೆ ಇಲ್ಲ, ಇನ್ನೂ ಮಕ್ಕಳು ಎಲ್ಲಿಂದ ಬರಬೇಕು.


ಇದ್ದರೂ ಅವರ ನೆಂಟರ ಮನೆಗಳಿಗೊ ಅಥವಾ ಮದ್ದೂರಿನ ಖಾಸಗಿ ಶಾಲೆಗಳಿಗೊ ಹಚ್ಚುತ್ತಾರೆ. ಅವರಿಗೆ ಕಡಿಮೆ ಅಂದರೂ ಇಂಗ್ಲೀಷ್ ಕಲಿಸುವ ಕನ್ನಡ ಶಾಲೆಯಾದರೂ ಬೇಕು. ಇಂಗ್ಲೀಷ್ ಮೀಡಿಯಂ ಸಿಕ್ಕರಂತೂ ಒಳ್ಳೆಯದೇ. ಸರ್ಕಾರಿ ಕನ್ನಡ ಶಾಲೆಯಲ್ಲಿ ೬ ನೇ ತರಗತಿಯವರೆಗೂ ಇಂಗ್ಲೀಷ್ ಹೇಳಿಕೊಡುವುದಿಲ್ಲ ಅಂತ ಎಲ್ಲರಿಗೂ ಗೊತ್ತು, ಅದಕ್ಕೆ ನಮ್ಮೂರ ಶಾಲೆ ಬಗ್ಗೆ ಅಷ್ಟಕಷ್ಟೆ.


ನಾನು ೪ ನೇ ಇಯತ್ತೆಯವರೆಗೂ ಇಲ್ಲಿಯೇ ಕಲಿತಿದ್ದು. ಆಮೇಲೆ ಕಲಿಯಬೇಕಾದರೆ ಮದ್ದೂರಿಗೆ ಹೋಗಬೇಕು. ನಮ್ಮಪ್ಪನಿಗೆ ನನ್ನನ್ನು ಇಂಗ್ಲೀಷ್ ಮೀಡಿಯಂಗೆ ಹಾಕಬೇಕು ಅಂತ ಬಹಳ ಆಸೆ ಇತ್ತು. ಬೇಸಿಗೆ ರಜೆಯಲ್ಲಿ ಮೇಷ್ಟರ ಮನೆಗೆ ಹೋಗಿ ಕಷ್ಟ ಪಟ್ಟು A B C D ಕಲಿತಿದ್ದು ಆಯ್ತು. ಮದ್ದೂರಿನ ಖಾಸಗಿ ಸ್ಕೂಲಿನಲ್ಲಿ ಇಂಗ್ಲೀಷ್ ಮೀಡಿಯಂಗೆ ಅರ್ಜಿ ಹಾಕಿ, ಸಂದರ್ಶನ ಕೊಟ್ಟಿದ್ದು ಇನ್ನೂ ನೆನಪಿದೆ.


ಅಲ್ಲಿನ ಮುಖ್ಯೋಪಾಧ್ಯಾಯರು ಕೇಳಿದ ಮೊದಲ ಪ್ರಶ್ನೆ ಹ್ಹ.. ಹ್ಹ...೯ ರ ಮಗ್ಗಿ, ಚಕಚಕನೆ ಹೇಳಿ ಮುಗಿಸಿದೆ.


ಎರಡನೇ ಪ್ರಶ್ನೆ ೧೯ ರ ಮಗ್ಗಿ. "ಹೇಳು ಮರಿ?".


"ಹತ್ತೊಂಬತ್ತೊಂದ್ಲ ಹತ್ತೊಂಬತ್ತು, ಹತ್ತೊಂಬತ್ತೆರಡ್ಲ ಮುವತ್ತೆಂಟೂ, ಹತ್ತೊಂಬತ್ಮೂರ್ಲ ಐವತ್ತೇಳು, ಹತ್ತೊಂಬತ್ನಾಲ್ಕ್ಲ ಎಪ್ಪಾತ್ತಾರು, ಹತ್ತೊಂಬತ್ತೈದ್ಲ .....ಹತ್ತೊಂಬತ್ತೈದ್ಲ..... ಹತ್ತೊಂಬತ್ತೈದ್ಲ......" ಬರಲೇ ಇಲ್ಲ.


ಬಹಳ ಪ್ರಯತ್ನ ಮಾಡುತ್ತಿದ್ದುದ್ದನ್ನು ನೋಡಿ ಮುಖ್ಯೋಪಾಧ್ಯಾಯರು "ಇರಲಿ ಬಿಡು ಮರಿ. ಕ್ಯಾಟ್ ಗೆ ಸ್ಪೆಲ್ಲಿಂಗ್ ಹೇಳು ಮರಿ ಅಂದ್ರು".


ನಾನು "A B C D ಮಾತ್ರ ಬರೋದು ಸಾರ್, ಅದೂ ಮೊನ್ನೆ ಮೊನ್ನೆ ಕಲಿತಿದ್ದು ಸಾರ್" ಎಂದೆ.

"ಇರಲಿ ಬಿಡು" ಅಂತ ನನ್ನ ಕೆನ್ನೆ ಸವರಿ ಅಪ್ಪನ ಕಡೆ ತಿರುಗಿದರು.

"ಹುಡುಗ ತುಂಬಾ ಚೂಟಿ ಇದ್ದಾನೆ, ಸೇರಿಸಿಕೊಳ್ಳಲು ಅಭ್ಯಂತರ ಏನೂ ಇಲ್ಲ"


ಅಪ್ಪನ ಮುಖ ಅರಳಿತ್ತು "ಇಂಗ್ಲೀಷ್ ಮೀಡಿಯಂ ಗೆ ತಿಂಗಳಿಗೆ ಎಷ್ಟು ಶುಲ್ಕ ಇದೆ ಸಾರ್"


"ನೋಡಿ ಗೌಡ್ರೆ, ನೀವೇನು ತಪ್ಪಾಗಿ ತಿಳಿದುಕೊಳ್ಳದಿದ್ದರೆ ಒಂದು ಮಾತು ನಮ್ಮ ಶಾಲೇಲಿ ಒಂದನೇ ತರಗತಿಯಿಂದಲೇ ಎಲ್ಲರಿಗೂ ಇಂಗ್ಲೀಷ್ ಹೇಳಿ ಕೊಡ್ತೇವೆ.೫ ನೇ ತರಗತಿಗೆ ಬರುವಷ್ಟರಲ್ಲಿ ಕನ್ನಡ ಮೀಡಿಯಂ ಹುಡುಗ್ರುಗೆ ವಾಕ್ಯ ರಚನೆ ಮಾಡುವಷ್ಟು ಇಂಗ್ಲೀಷ್ ಗೊತ್ತಿರುತ್ತೆ, ಇನ್ನೂ ಇಂಗ್ಲೀಷ್ ಮೀಡಿಯಂ ಹುಡುಗ್ರು ನೀರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಾರೆ. ಅವರ ಜೊತೆ ಏನಾದರು ನಿಮ್ಮ ಹುಡುಗ ಸೇರಿದ್ರೆ, ನಿಮ್ಮ ಹುಡುಗನಿಗೆ ಬಹಳ ಕಷ್ಟ ಆಗುತ್ತೆ ನೋಡಿ, ಕೆಲವೊಮ್ಮೆ ಚೂಟಿ ಹುಡುಗ್ರು ಇಂಗ್ಲೀಷ್ ಅರ್ಥ ಆಗ್ದೇ ಮಂಕಾಗಿ ಹೋಗ್ತಾರೆ.ನಿಮ್ಮ ಹುಡುಗನಿಗೆ ಇಂಗ್ಲೀಷ್ ಮೀಡಿಯಂ ಹುಡುಗರ ಜೊತೆ ಬಿಡುವ ಮಾತಿರಲಿ, ನಮ್ಮ ಶಾಲೆಯ ಕನ್ನಡ ಮೀಡಿಯಂ ಹುಡುಗರ ಜೊತೆ ಹೊಂದಿಕೊಳ್ಳೊದು ಕಷ್ಟ.ಆದರೂ "C" ಸೆಕ್ಷನ್ ಗೆ ಸೇರಿಸಿಕೊಳ್ಳುತ್ತೀವಿ, "C" ಸೆಕ್ಷನ್ ನಲ್ಲಿ ಸ್ವಲ್ಪ ಮುತುವರ್ಜಿ ವಹಿಸಿ ಹೆಚ್ಚಿನ ಗಮನದಿಂದ ಪಾಠಮಾಡುತ್ತೀವಿ."


"ಹಾಗಾದರೆ ಇಂಗ್ಲೀಷ್ ಮೀಡಿಯಂ ಕೊಡುವುದಿಲ್ಲ ಅಂತೀರಾ"


"ನೋಡಿ ಗೌಡ್ರೆ, ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತೇ, ಅವರಿಗೆ ಅತಿ ಒತ್ತಡದಿಂದ ಹಾಕಿದರೆ ಮಂಕಾಗೋದೆ ಹೆಚ್ಚು. ಹುಡುಗನ ತಾಯಿ ಕೂಡ ಹೆಚ್ಚಿಗೆ ಓದಿಲ್ಲ,ಹಾಗಾಗಿ ಅವರು ಮನೆಯಲ್ಲಿ ಹೇಳಿಕೊಡಲು ಸಾಧ್ಯವಿಲ್ಲ. ಆದ್ದರಿಂದ ನೀವು ಹುಡುಗನಿಗೆ ಅರ್ಥವಾಗುವ ಮಾತೃ ಭಾಷೆಯಲ್ಲಿ ಕಲಿಯಲು ಬಿಡಿ, ಮುಂದೆ ೮ ನೇ ತರಗತಿಗೆ ನೋಡೋಣ"

"ನಾನು ಮಗನಿಗೆ ಪಾಠ ಹೇಳಿಕೊಡ್ತೀನಿ ಸಾರ್, ಇಂಗ್ಲೀಷ್ ಮೀಡಿಯಂ ಕೊಡಿ"

"ದುಡಿಯೋ ಗಂಡಸರು ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡೊದು ಕಷ್ಟದ ಕೆಲಸ, ಅಲ್ಲದೇ ನಿಮ್ಮ ಹುಡುಗನ್ನ ದಿನಾ ಕರೆದುಕೊಂಡು ಹೋಗಿ, ಕರೆದುಕೊಂಡು ಬರುವುದಕ್ಕೆ ಬಹಳ ಸಮಯ ಬೇಕು. ಸಿಗೋ ಸಮಯದಲ್ಲಿ ಕನ್ನಡದಲ್ಲಿರೋ ಪಾಠಗಳನ್ನು ಅರಗಿಸಿಕೊಳ್ಳುವುದು ಕಷ್ಟ, ಇನ್ನೂ ಇಂಗ್ಲೀಷ್ ಪಾಠ ಎಂದರೇ ಇನ್ನೂ ಕಷ್ಟ.ಕನ್ನಡದಲ್ಲಿ ಕಲಿತವರೆಲ್ಲಾ ಹಾಳಾಗಿಲ್ಲ, ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದವರೆಲ್ಲಾ ಉದ್ದಾರ ಆಗಿಲ್ಲ, ಒಟ್ಟಿನಲ್ಲಿ ಓದೋದು ಮುಖ್ಯ ನೋಡಿ".

"ಸರಿ ಸಾರ್, ದೊಡ್ಡ ಉಪಕಾರವಾಯ್ತು"

"ಆಯ್ತು ಬನ್ನಿ"

ಗಾಡಿ ನಿಂತ ಹಾಗೆ ಆಯ್ತು, ಡಾಕ್ಟ್ರು ಶಾಪಿನೊಳಕ್ಕೆ ಅಪ್ಪ ಕೈ ಹಿಡಿದು ನಡೆಸಿಕೊಂಡು ಹೋದರು. ಕೂರಲಿಕ್ಕೂ ಜಾಗ ಇಲ್ಲ, ನನ್ನ ಸ್ಥಿತಿ ನೋಡಿ ರೋಗಿಯ ಸಂಬಂಧಿಕರೊಬ್ಬರು ಜಾಗ ಬಿಟ್ಟುಕೊಟ್ಟರು. ಅರ್ಧ ಗಂಟೆ ಕಳೆದ ಮೇಲೆ ಡಾಕ್ಟರು ಒಳಗೆ ಕರೆದರು.


"ವಿಶ್ವ ಅಂತ ಅಲ್ವೇ ನಿಮ್ಮ ಹುಡುಗನ ಹೆಸರು"
"ಹೌದು ಡಾಕ್ಟ್ರೇ"
"ಕೆಮ್ಮು, ನೆಗಡಿ ಏನಾದರೂ ಇದೆಯೇನು?"
"ಇಲ್ಲ ಸಾರ್"
"ಹೊಟ್ಟೆ ನೋವು?'
"ಬರೀ ಜ್ವರ ಮತ್ತು ಸುಸ್ತು ಸಾರ್"


ಸ್ಟೆತಾಸ್ಕೋಪ್ ಇಟ್ಟು ಎದೆ ಪರೀಕ್ಷಿಸಿದರು. ಕಣ್ಣು, ಬಾಯಿ, ಮೂಗು ಎಲ್ಲಾ ನೋಡಿ, ಹೊಟ್ಟೆ ಮೇಲೆ ಒತ್ತಿ ನೋಡಿದ ಮೇಲೆ ಥರ್ಮೋಮೀಟರ್ ಬಾಯಲ್ಲಿ ಇಟ್ಟು 'ಇದನ್ನು ಕಡಿಯಬಾರದು ಮರಿ.ಹಾಗೆ ಸುಮ್ಮನೆ ಬಾಯಲ್ಲಿ ಇಟ್ಟುಕೊಂಡಿರಬೇಕು' ಎಂದರು.


ನಾನು ಥರ್ಮೋಮೀಟರ್ ಬಾಯಲ್ಲಿಟ್ಟುಕೊಂಡು ಪಕ್ಕದಲ್ಲಿ ಕುದಿಯುತ್ತಿದ್ದ ನೀರನ್ನು ನೋಡುತ್ತಿದ್ದೆ. ಅದರೊಳಗೆ ನಾಲ್ಕೈದು ಗಾಜಿನ ಸೂಜಿ ಹಾಕುವ ಸಿರಿಂಜುಗಳು, ಸುಮಾರು ಸೂಜಿಗಳು ಕುದಿಯುತ್ತಿದ್ದವು.ಎಷ್ಟು ಸಲ ಚುಚ್ಚಿದ ಸೂಜಿಗಳೋ ಅವು. ಹೊಸ ಸೂಜಿಗಳಾದರೆ ಹೆಚ್ಚು ನೋವಾಗುವುದಿಲ್ಲ ಅಂತ ಗೊತ್ತಿತ್ತು. ಹಳೆಯ ಸೂಜಿಗಳು ಉಪಯೋಗಿಸಿ, ಉಪಯೋಗಿಸಿ ಮೊಂಡಾಗಿರುತ್ತವೆ. ಹಳೆಯ ಸೂಜಿಗಳ ಇಂಜಕ್ಷನ್ ಬಹಳ ನೋವು ಕೊಡುತ್ತವೆ. ಹೊಸ ಸೂಜಿ ಕೇಳಿದರೆ ಹೆಚ್ಚು ದುಡ್ಡು ಕೊಡಬೇಕಾಗುತ್ತೋ ಎನೋ?.


"ಸಾರ್"
"ಹೇ ಮಾತನಾಡಬೇಡ, ಬಾಯಲ್ಲಿರುವ ಥರ್ಮೊಮೀಟರ್ ಕಡಿದು ಮುರಿದರೆ ಕಷ್ಟ, ತಾಳು ಅದನ್ನು ಹೊರಗೆ ತೆಗೆಯುತ್ತೇನೆ.... ಈಗ ಹೇಳು"
"ಬರೀ ಗುಳಿಗೆ ಕೊಡಿ ಸಾರ್, ಇಂಜೆಕ್ಷನ್ ಬೇಡ"
"ಎಲ್ಲಾರು ಸರ್ಕಾರಿ ಆಸ್ಪತ್ರೆಯಲ್ಲಿ ಬರಿ ಗುಳಿಗೆ ಕೊಡ್ತಾರೆ, ಇಂಜೆಕ್ಷನ್ ಹಾಕಲ್ಲ ಅಂತ ಇಲ್ಲಿಗೆ ಬರ್ತಾರೆ, ನೀನು ಬರಿ ಗುಳಿಗೆ ಕೊಡಿ ಅಂತ ಹೇಳ್ತಾಯಿದ್ದಿಯಲ್ಲಪ್ಪ"
"ನನಗೆ ಸೂಜಿ ಕಂಡರೆ ಭಯ ಸಾರ್"
"ಏನೂ ಭಯ ಪಡಬೇಡ, ಸಣ್ಣ ಸೊಳ್ಳೆ ಕಡಿದ ಹಾಗೆ ಆಗುತ್ತೆ ಅಷ್ಟೆ"


ಹಾಕಿದ್ದ ಚಡ್ಡಿ ಸ್ವಲ್ಪ ಕೆಳಗೆ ಮಾಡಿ, ಬಿಗಿಯಾಗಿ ಕಣ್ಣು ಮುಚ್ಚಿ ಗೋಡೆ ಕಡೆ ಮುಖ ಮಾಡಿದೆ.


"ನಡು ಸ್ವಲ್ಪ ಸಡಿಲ ಮಾಡು ಮರಿ" ಎಂದು ಚುಚ್ಚಿದರು.


ಸೊಳ್ಳೆ ಇರಲಿ, ಡಾಕ್ಟರೆ ಹಲ್ಲಿನಿಂದ ಕಡಿದಿದ್ದರೂ ಇಷ್ಟು ನೋವಾಗುತ್ತಿರಲಿಲ್ಲ. ಹಳೆ ಸೂಜಿ ಇಂಚು ಅಂತೂ ಒಳಗೆ ಹೋಗುತ್ತಿರುವುದು ಗೊತ್ತಾಗುತ್ತಿತ್ತು, ಹಲ್ಲು ಕಚ್ಚಿ ತಡೆದುಕೊಂಡೆ.ಸೂಜಿ ತೆಗೆದ ಮೇಲೂ, ಉಜ್ಜಿದರೂ ಸಣ್ಣದಾಗಿ ನೋಯುತ್ತಿತ್ತು.


"ಎರಡು ತರಹದ ಗುಳಿಗೆ ಇದೆ, ಊಟದ ನಂತರ ತಲಾ ಮೂರು ತಕೋ ಬೇಕು; ಏಳು ದಿನ"
"ಸರಿ ಡಾಕ್ಟ್ರೆ"
ನನ್ನನ್ನ ಗಾಡಿಯಲ್ಲಿ ಕೂರಿಸಿ, ಮಾತ್ರೆ ತರಲು ಕರಿಯನ್ನ ಅಪ್ಪ ಕಳುಹಿಸಿದರು. ಮಾತ್ರೆ ತಂದ ಕರಿಯ ಅಪ್ಪನ ಕೈಲಿ ಕೊಟ್ಟ.


"ಗಾಡಿಯಲ್ಲಿ ಕೂತಿರು, ಡಾಕ್ಟರ ಹತ್ರ ಮಾತ್ರೆ ಸರಿ ಇದೆಯಾ ಅಂತ ತೋರಿಸಿ ಬರ್ತೀನಿ"
"ಅದನ್ನ ಅವರಿಗೆ ತೋರಿಸೋದೇನಿದೆ ಗೌಡ್ರೆ"
"ಮೆಡಿಕಲ್ ಶಾಪಿನಲ್ಲಿರೋರೆಲ್ಲಾ, ಫಾರ್ಮಸಿ ಓದಿದೋರಲ್ಲ. ಮೊದಲೆ ಡಾಕ್ಟ್ರು ಬರೆದದ್ದು ಗೊತ್ತಾಗಕಿಲ್ಲ, ವಸಿ ಖಾತರಿ ಮಾಡಿ ಬರ್ತೀನಿ ತಡಿ. ಏನೋ ಓದಿ, ಏನೋ ಮಾತ್ರೆ ಕೊಟ್ರೆ ಕಷ್ಟ"


ಎರಡು ನಿಮಿಷದ ನಂತರ ಅಪ್ಪ ಬಂದ್ರು


"ಲೇ ಕರಿಯ, ಏಳು ದಿನಕ್ಕಲ್ವೇನೋ ಬರೆದಿರೊದು, ಎರಡು ದಿನಕ್ಕಷ್ಟೆ ತಕ್ಕೊಂಡು ಬಂದಿದ್ದೀಯ?"
"ಅವ್ರು ಬರಿತಾರೆ ಅಂತ, ಏಳು ದಿನಾನು ಮಾತ್ರೆ ತಕ್ಕೊಳ್ಳಕ್ಕೆ ಆಯ್ತದ. ಎರಡು ದಿನದ ಮೇಲೆ ಜ್ವರ ಕಮ್ಮಿ ಆದ್ರೆ, ಮುಂದುಕ್ಕೆ ಗುಳಿಗೆ ನುಂಗೋದ್ಯಾಕೆ"
"ಡಾಕ್ಟ್ರುಗಿಂತ ನೀನೆ ತಿಳಿದೋನ ಹಾಗೆ ಮಾತಾಡ್ತಿ ನೋಡು, ಜ್ವರ ಇಳಿದ ಮೇಲೂ ಮಾತ್ರೆ ಬರೆಯೋಕೆ ಅವರಿಗೆ ತೆವ್ಲ. ಏಳು ದಿನ ಮಾತ್ರೆ ತಕೊಬೇಕು ಅಂದ್ರೆ, ಅದರಲ್ಲೇನೊ ಅರ್ಥ ಇರ್ತದೆ.ಸುಮ್ಮನೆ ಅವ್ರು ಹೇಳಿದ್ದನ್ನ ಮಾಡಬೇಕು".
"ನಿಮಗೆ ತಿಳಿಯೋದಿಲ್ಲ ಬನ್ನಿ ಗೌಡ್ರೆ, ಮೆಡಿಕಲ್ ಶಾಪ್ ನವರು ತಿಂಗ್ಳ, ತಿಂಗ್ಳ ಡಾಕ್ಟ್ರುಗೆ ದುಡ್ಡು ಎಣಿಸೋದನ್ನ ಕಣ್ಣಾರೆ ನೋಡಿದಿನಿ. ಡಾಕ್ಟ್ರು ಕಮಿಷನ್ ಆಸೆಗೆ ಮೂರುದಿನ ಬದ್ಲು, ಏಳುದಿನಕ್ಕೆ ಗುಳಿಗೆ ಬರಿತಾರೆ. ನಮ್ಮ ಹುಷಾರಿನಲ್ಲಿ ನಾವಿರಬೇಕು"


"ಸುಮ್ಮನೆ ಏನೇನೋ ಮಾತನಾಡಬೇಡ, ಅವರ ಮಧ್ಯೆ ಬೇರೆ ಏನೋ ಹಣಕಾಸು ವ್ಯವಹಾರ ಇದ್ದರೂ ಇರಬಹುದು. ನಿನ್ನ ಪಕ್ಕದ ಮನೆ ಮಾಲಿಂಗ, ಜ್ಞಾಪ್ಕ ಇದೆಯಾ.ಟಿ.ಬಿ ಬಂದಿದೆ ಅಂತ ಡಾಕ್ಟ್ರು ೬ ತಿಂಗಳವರೆಗೂ ಮಾತ್ರೆ ಬರೆದಿದ್ರಂತೆ.ಅದೂ ಸರ್ಕಾರಿ ಆಸ್ಪತ್ರೆಲಿ ಚೀಟಿ ತೋರಿಸಿದ್ರು ತಿಂಗ್ಳ ತಿಂಗ್ಳ ಬಿಟ್ಟಿ ಮಾತ್ರೆ ಕೊಡ್ತಿದ್ರು.ಇವನು ಎರಡು ತಿಂಗ್ಳ್ ಮಾತ್ರೆ ತಿಂದ ಮೇಲೆ, ದಮ್ಮು, ಕೆಮ್ಮು ಎಲ್ಲಾ ಕಡಿಮೆಯಾಗಿ ಹೊಯ್ತಂತೆ. ಇವನು ಎಲ್ಲ ಕಮ್ಮಿಯಾಗಿದೆ ಅಂತ ಮುಂದೆ ಮಾತ್ರೆ ತಕ್ಕೊಳ್ಳದೆ ನಿಲ್ಲಿಸಿಬಿಟ್ಟ. ಒಂದು ತಿಂಗಳು ಬಿಟ್ಟು ಮತ್ತೆ ದಮ್ಮು, ಕೆಮ್ಮು ಶುರುವಾಗಿದೆ. ಮತ್ತೆ ಅದೇ ಮಾತ್ರೆ ೧೨ ತಿಂಗ್ಳು ತಕೊಬೇಕು ಅಂದ್ರಂತೆ. ಹಳೆ ಮಾತ್ರೆ ಅರ್ಧಂಬರ್ಧ ತಕ್ಕೊಂಡು ಬಿಟ್ಟಿದ್ರಿಂದ,ಅದು ಮತ್ತೆ ಕೆಲಸ ಮಾಡಲಿಲ್ಲವಂತೆ. ಅದಕ್ಕೆ ಡಾಕ್ಟ್ರು ಸ್ಟ್ರಾಂಗ್ ಆಗಿರೋ ಮಾತ್ರೆ ಬರೆದರಂತೆ. ಅದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗೊದಿಲ್ಲ, ಮಾಲಿಂಗ ಅದನ್ನು ಖರೀದಿ ಮಾಡಿ ನುಂಗಲಿಕ್ಕೆ ಆಗದೆ, ರಕ್ತ ಕಾರಿ ಸತ್ತ. ಇದೆಲ್ಲ ನಿಂಗೂ ಗೊತ್ತಿರಬೇಕು,. ನೀನೂ ಏನಾದ್ರು ಸ್ವಲ್ಪ ಉಪದೇಶ ಕೊಟ್ಟಿರ್ದೆ ಇರ್ತೀಯಾ?"


"ಏನ್ ಗೌಡ್ರೆ, ಮಾಲಿಂಗ ಸತ್ತಿದ್ದಕ್ಕೆ ನಾನೇ ಕಾರಣ ಅನ್ನೊ ಹಾಗೆ ಹೇಳ್ತಿದ್ದಿರಾ? ಅವನ ಖಾಯಿಲೆ ಡಾಕ್ಟ್ರುಗಳ ಕೈಲಿ ವಾಸಿ ಮಾಡೋಕೆ ಆಗ್ದೇ ಸತ್ತಿದ್ದು ಅಂತ ಊರೊರಿಗೆಲ್ಲ ಗೊತ್ತಿದೆ.ಈಗೇನು ಎರಡು ದಿನ ಗುಳಿಗೆ ತಿನ್ನಿಸಿ, ಕಡಿಮೆ ಆಗದೆ ಇದ್ರೆ, ಗುಳಿಗೆ ಬದಲಾಯಿಸಿ ಅಂತ ಡಾಕ್ಟ್ರುನ್ನ ಕೇಳಿದ್ರಾಯ್ತು. ಗುಣ ಆದ್ರೆ ನಾನೇ ಮಿಕ್ಕಿದ ನಾಲ್ಕು ದಿನದ ಮಾತ್ರೆ ತಂದು ಕೊಡ್ತಿನಿ.ನಿಮಗೇನು ಈಗ ನಷ್ಟ ಆಗಿಲ್ಲ"


"ನಷ್ಟ ಲಾಭದ ಪ್ರಶ್ನೆ ಅಲ್ಲ ಕಣ್ಲ. ನಾವು ಗುಳಿಗೆಯಿಂದ ವಾಸಿ ಆಗುತ್ತೊ, ಇಲ್ವೊ ಅಂತ ಅನುಮಾನ ಪಡ್ಕೊಂಡು ಗುಳಿಗೆ ತಿಂದ್ರೆ ವಾಸಿ ಆಗ್ತದೇನು. ಒಂದು ತಿಳ್ಕೋ ಅರ್ಧ ಖಾಯಿಲೆಗಳೆಲ್ಲ ಗುಳಿಗೆಗಿಂತ, ಡಾಕ್ಟ್ರುಗಳ ಮೇಲಿನ ನಂಬಿಕೆಯಿಂದಲೇ ವಾಸಿಯಾಗೊದು. ಇನ್ನರ್ಧ ಗುಳಿಗೆ, ಇಂಜೆಕ್ಷನಿಂದ ವಾಸಿಯಾಗೊದು. ಅದಕ್ಕೆ ಹೇಳೊದು ಡಾಕ್ಟ್ರುಗಳು ಒಂದು ರೀತಿ ದೇವ್ರು ಇದ್ದಂಗೆ. ಬೇಕಿದ್ದರೆ ನಂಬಿ ಕೆಡೊಣ, ನಂಬದೆ ಕೆಡೊದಿಕ್ಕಿಂತ ನಂಬಿ ಕೆಡೊದು ಉತ್ತಮ"


"ಆಯ್ತು ಬಿಡಿ ಗೌಡ್ರೆ, ಈಗೇನು ೪ ದಿನದ್ ಮಾತ್ರೆ ತಕೊಂಡು ಬರಬೇಕು ತಾನೆ. ಈಗ್ಲೆ ಬರ್ತೀನಿ"


ಗಾಡಿ ಮನೆ ಕಡೆ ಹೊರಟಿತು.ಡಾಕ್ಟ್ರು ಬಹಳ ಸ್ಟ್ರಾಂಗ್ ಇಂಜೆಕ್ಷನ್ ಕೊಟ್ಟಿರಬೇಕು. ಜ್ವರವೆಲ್ಲ ಆಗಲೇ ಇಳಿದು ಹೋಗಿದೆ. ಚಳಿ ಅಂತ ಮೈ ಮೇಲೆ ಹೊದಿಕೆ ಹಾಕಿದ್ದರಿಂದ ಸೆಕೆ ಆಗ್ತಾ ಇದೆ. ಗಾಡಿ ಸ್ವಲ್ಪ ಹೊರಟ ಮೇಲೆ, ಹೊದಿಕೆ ತೆಗೆದು ಬಿಟ್ಟೆ. ಸುಸ್ತು ಕಡಿಮೆಯಾಗಿ, ಸ್ವಲ್ಪ ಹೊತ್ತು ಕುಳಿತುಕೊಳ್ಳೋಣ ಅನಿಸ್ತು. ನಾನು ಕುಳಿತದ್ದು ನೋಡಿ ಅಪ್ಪನಿಗೆ ಸಂತೋಷವಾಗಿತ್ತು.


"ಹಿಂದೆ ಬಂದರೆ ಹಾಯ ಬೇಡಿ"
"ಹಿಂದೆ ಬಂದರೆ ಹಾಯ ಬೇಡಿ"
"ಮುಂದೆ ಬಂದರೆ ಒದೆಯ ಬೇಡಿ"
"ಮುಂದೆ ಬಂದರೆ ಒದೆಯ ಬೇಡಿ"
"ಕಂದ ನಿಮ್ಮವನೆಂದು ಕಾಣಿರಿ, ತಬ್ಬಲಿಯ ಈ ಕರುವನು"
"ಕಂದ ನಿಮ್ಮವನೆಂದು ಕಾಣಿರಿ, ತಬ್ಬಲಿಯ ಈ ಕರುವನು"


ಸ್ಕೂಲು ಹತ್ತಿರ ಬರುತ್ತಿದ್ದಂತೆ, ಮಾಸ್ಟ್ರು ಗೋವಿನ ಹಾಡು ಹೀಳಿಕೊಡುತ್ತಿದ್ದುದು ಕೇಳಿಸುತ್ತಿತ್ತು.


"ನಮಸ್ಕಾರ ಸಾರ್"
"ಓ ಆಗ್ಲೇ ಸರಿಯಾಗಿ ಬಿಟ್ಟಿದ್ದಿಯಲ್ಲಪ್ಪ"
"ಒಂದು ಇಂಜೆಕ್ಷನ್ಗೆ ಎಲ್ಲ ಎಲ್ಲಾ ಕಮ್ಮಿ ಆಯ್ತು ಸಾರ್, ಇವತ್ತೆ ಹೋಗಿ ರಿಸಲ್ಟ್ ನೋಡಿ ಬರ್ತೀನಿ"
"ಇವತ್ತು ಬೇಡ, ಮಂಗಳವಾರ ಬೇರೆ. ನಾಳೆ ಹೇಗಿದ್ರು ಅಂಕ ಪಟ್ಟಿನೂ ಬರುತ್ತೇ, ಇಲ್ಲಾಂದ್ರೆ ಮತ್ತೆ ನೀವು ಎರಡೆರಡು ಸಲ ಹೋಗಬೇಕಾಗುತ್ತೆ"
"ಸರಿ ಸಾರ್, ನಾಳೆ ಹೋಗ್ತಿವಿ"
"ಒಳ್ಳೆದಾಗಲಿ"


ಗಾಡಿ ಮುಂದೆ ಹೊರಟಿತು......


                                                  (ಮುಂದುವರೆಯುವುದು)

ಮಂಗಳವಾರ, ಜುಲೈ 31, 2012

ಸತ್ಯಮೇವ ಜಯತೆ (ಕಾದಂಬರಿ )-2

"ಯ್ಯಾಕೋ ಇನ್ನೂ ಮಲ್ಗಿದ್ದಿ?"
                                                              ನಮ್ಮೂರಲ್ಲಿ.. 



' ''

"ಏಳು ಆಗ್ಲೇ ಎಂಟು ಗಂಟೆ ಆಯ್ತು"


'' ''



"ಯ್ಯಾಕೆ ಅವನ್ನ ಎಬ್ಸ್ತೀರಿ, ಮಲಗಲಿ ಬಿಡಿ, ಹೇಗೂ ಕಾಲೇಜ್ ಮುಗಿದಿದೆ ಅಲ್ವಾ"

"ಅಲ್ವೇ, ನೆನ್ನೆ ಪೇಪರ್ ನೋಡಿದ್ಯೋ ಇಲ್ವೋ"

"ಏನಿತ್ತು ಅಂತದ್ದು, ನೆನ್ನೆ ಪೇಪರಿನಲ್ಲಿ"

"ಇವತ್ತು PUC ಪರಿಕ್ಷೇದು ರಿಸಲ್ಟ್ ಕಣೇ, ಹೋಗಿ ಕಾಲೇಜ್ನಲ್ಲಿ ನೋಡಿ ಬರೋದಲ್ವ.
ಪರೀಕ್ಷೇ ಬರೆದೋರೆಲ್ಲಾ ನಿದ್ರೆ ಇಲ್ದೆ ರಾತ್ರಿಯಿಡಿ ಹೊರಾಳಾಡಿದ್ರೆ,ನಿನ್ನ ಮಗ ಇನ್ನೂ ಮಲ್ಗಿದಾನೆ ನೋಡು"

"ಅವನಿಗೆ ಮೈ ಸ್ವಲ್ಪ ಬೆಚ್ಚಗಿದೆ, ನಾಳೆ ನೋಡಿ ಬಂದ್ರಾತು"

"ಹಾಗೆನು, ಸ್ವಲ್ಪ ಕಾಫಿ ಕಾಯ್ಸಿ ಕೊಡು, ಜ್ವರ ಇಳಿಲಿಲ್ಲ ಅಂತಂದ್ರೆ ಡಾಗುಟ್ರುಗೆ ತೋರ್ಸಾಣ"

"ಕಾಫಿಪುಡಿ ಮುಗಿದು ಹೋಗಿದೆ, ಹೋಗಿ ರಾಮಣ್ಣನ ಅಂಗಡಿಲಿ ತಕ್ಕೊಂಡ್ ಬನ್ನಿ"

"ಅವನೆಲ್ಲಿ ಈಗ ಬಾಗ್ಲು ತೆಗೀತಾನೆ, ಅವನ ಅಂಗಡಿ ಎನಿದ್ರೂ ೧೦ ಗಂಟೆ ಮೇಲೆ"

"ಯಾಕೆ ಮೊದಲೆಲ್ಲ ೬ ಗಂಟೆಗೆಲ್ಲ ತೆಗೀತಿದ್ನಲ್ಲ?"

"ನಮ್ಮೂರಿಗೆ ಕಕ್ಕಸ್ಸು ಮನೆಗಳು ಬಂದಾದ ಮೇಲೆ ಜನಗಳೂ ಸೋಮಾರಿಗಳಾಗಿಬಿಟ್ಟಿದ್ದಾರೆ"

"ಸುಮ್ನೆ ಏನೇನೋ ಹುಚ್ಚು ಹಿಡಿದಿರೋತರ ಮಾತನಾಡಬೇಡಿ"

"ಇರೋದನ್ನೆ ನಾನು ಹೇಳಿದ್ದು"

"ಕಕ್ಕಸ್ಸು ಮನೆಗಳಿಗೂ, ಅಂಗಡಿ ಬಾಗಿಲಿಗೂ ಏನ್ರೀ ಸಂಬಂಧ?"

"ಈ ಇಡೀ ಊರಿಗೆ ಇರೋದೊಂದೆ ಅಂಗಡಿ, ಎಲ್ರೂ ಅಲ್ಲೇ ಹೋಗಿ ಸಾಮಾನು ತಕೊಣ್ದೆ ವಿಧಿ ಇಲ್ಲ
ಅಂತ ಅವನಿಗೂ ಗೊತ್ತು, ಮೊದ್ಲು ಬೆಳಕಾಗೂ ಮುಂಚೆ ಕೆರೆಕಡೆ ಹೋಗಿ, ಏಳು ಗಂಟೆಗೆಲ್ಲ ಬಾಗ್ಲು ತಗೀತಿದ್ದ.

ಈಗ ಮನೇಲೇ ಸರ್ಕಾದೋರು ಕಕಸ್ಸು ಮನೆ ಕಟ್ಟೋಕೆ ಸಹಾಯ ಮಾಡಿದಮೇಲೆ, ಬೆಳಗಾಗೋ ಮುಂಚೆ

ಬಯಲಿಗೆ ಹೋಗೊ ಅವಶ್ಯಕತೆ ಇಲ್ಲ ನೋಡು, ಎಷ್ಟೋತ್ತಿಗಾದರೂ ಎದ್ರು ನಡೆಯುತ್ತೆ ಅಂತ ೧೦ ಗಂಟೆಗೆ
ಬಾಗ್ಲು ತೆಗಿತಾನೆ ನೋಡು"

"ಸರಿ ಬಿಡಿ, ಟೀನೇ ಮಾಡ್ತಿನಿ"



ಟೀ ಕುಡಿದ ಮೇಲೆ, ಸ್ವಲ್ಪ ಆರಾಮು ಏನಿಸತೊಡಗಿತು, ಆದರೊ ಮೈ ಬಿಸಿ ಇಳಿದಿಲ್ಲ, ಇನ್ನೂ ಸ್ವಲ್ಪ ಹೊತ್ತು

ಮಲಗಿರೋಣ ಅನಿಸತೊಡಗಿತು. ಅಬ್ಬ ಎಷ್ಟು ದಿನ ಆದಮೇಲೆ ಈಗೇ ಆರಾಮವಾಗಿ ಮಲಗಿದ್ದೇನೆ.

ಕಳೆದ ಒಂದು-ಎರಡು ವರ್ಷದಿಂದ, ಅಂದರೆ PUC ಗೆ ಬಂದಾಗಿನಿಂದ ಸರಿಯಾಗಿ ನಿದ್ರೆ ಮಾಡಿಲ್ಲ.

ದಿನಾ ಏಳುತಿದ್ದುದು ಬೆಳಿಗ್ಗೆ ೩ ಗಂಟೆಗೆ, ಅಬ್ಬ ಎಷ್ಟು ಸುಖ ಇದೆ, ಜಗತ್ತಿನ ಸುಖ ಎಲ್ಲಾ ೯ ಗಂಟೆ ತನಕ

ಮಲಗಿಕೊಳ್ಳೋದ್ರಲ್ಲೆ ಇದೆ ಅನ್ನಿಸುತ್ತ ಇದೆ. ಇವತ್ತು ದಿನ ಪೂರ್ತಿ ಹೀಗೆ ಮಲಗೋಣ ಅನಿಸ್ತಾ ಇದೆ



"ಅಕ್ಕವ್ರ ಒಂದು ಗುದ್ಲಿ ಇದ್ರೆ ಕೊಡಿ, ಹೊಲಕ್ಕೆ ನೀರ್ ಹಾಯ್ಸಿ ಬರ್ತೀನಿ"

"ಕರಿಯ, ಕಾಲುವೆಯಲಿ ನೀರು ಬಂತೇನು"

"ಇನ್ನೂ ಇಲ್ಲ, ಇವತ್ತು ಬರುತ್ತೆ ಅಂತ ಹೇಳಿದ್ದಾರೆ. ರಾತ್ರಿ ಎಲ್ಲ ಇವತ್ತು ಜಾಗರಣೆ,
ನೀರು ಬರೋತನಕ"

"ಸರಿ ರಾತ್ರಿ ಊಟ ಗದ್ದೆಗೆ ಕಳಿಸ್ತೀನಿ'

"ಅಕ್ಕವ್ರ ಮಗಾವ್ರು ರಿಸಲ್ಟ್ ಭಯಕ್ಕೆ ಜ್ವರ ಬಂದು ಮಲಗ್ಬಿಟ್ಟಿದ್ದಾರೆ. ನನ್ನ ಮಗಾನು
PUC ಫೇಲ್ ಆಗಿದ್ ದಿನ ನಾಲ್ಕು ದಿನ ಪತ್ತೇನೆ ಇರಲಿಲ್ಲ ನೋಡಿ"

ಎದ್ದು ಕರಿಯನ ಮುಖಕ್ಕೆ ನಾಲ್ಕು ಬಾರಿಸೋಣ ಅನಿಸ್ತು. ಅವನತ್ರ ಏನ್ ಮಾತು ಅಂತ ಸುಮ್ಮನೆ ಮಲಗ್ದೆ.

"ಸುಮ್ನೆ ನಿನ್ನ ಕೆಲ್ಸ ನೋಡೊ ಕರಿಯ. ನನ್ನ ಮಗ ಗ್ಯಾರಂಟಿ ಪಾಸಾಗುತ್ತಾನೆ ನೋಡು"

"ತಮಾಷೆಗೆ ಹಂಗೆ ಅಂದೆ ನೋಡಿ, ಪಾಸಾದ್ರೆ ಕೋಳಿ ಊಟ ಕಳ್ಸಿ ಗದ್ದೆ ಹತ್ರ"

"ಸರಿ, ಸರಿ ನೀನು ಬೇಗ ಹೊರಡು"

ಕರಿಯನನ್ನು ಕಂಡರೆ ನಂಗೆ ಅಷ್ಟು ಆಗೋದಿಲ್ಲ. ಅವನು ಹೊರಗೆ ಬಹಳ ವಿನಯದಿಂದ ಮಾತನಾಡಿದರೂ,

ಸಮಯ ಸಿಕ್ಕಾಗಲೆಲ್ಲ ಕಾಲು ಎಳೆಯದೆ ಬಿಡೋನಲ್ಲ. ಮೊದಲೆಲ್ಲ ನಮ್ಮ ಮನೇಲಿ ಖಾಯಂ ಆಗಿ ಕೆಲ್ಸ ಮಾಡ್ತಿದ್ದ.

ಮೊದಲು ಅವನಿಗೆ ವರ್ಷಕ್ಕೆ ಇಷ್ಟು ಅಂತ ದುಡ್ಡು ಕೊಡ್ತಿದ್ವಿ, ಹೊಲದ ಕೆಲಸ ಇದ್ದಾಗಲೆಲ್ಲ ಬಂದು ಮಾಡೋನು,

ಹೊಲದ ಕೆಲಸ ಇಲ್ದೇ ಇರೋ ದಿನ ಮನೆ ಕೆಲಸ ಮಾಡ್ತಿದ್ದ.ಈಗ ಅವನನ್ನ ಹಿಡಿಯೋದೆ ಕಷ್ಟ ಅಂತ ಅಪ್ಪ ಹೇಳ್ತಾನೆ.

ದಿನಕ್ಕೆ 20 ರೂಪಾಯಿ ಕೂಲಿ ಮತ್ತು ಊಟ-ತಿಂಡಿ ಕೇಳ್ತಾನಂತೆ.ಅದಲ್ಲದೆ, ನೀರು ಹಾಯ್ಸೋ ರಾತ್ರಿ ಕೆಲಸ ಇದ್ರೆ

ಪಾಕೇಟ್ ಹೆಂಡ ಹೆಚ್ಚಿಗೆ ಕೊಡಬೇಕು, ಇಲ್ಲದಿದ್ರೆ ಕೆಲಸಕ್ಕೆ ಬರೋದಿಲ್ಲ. ಅಷ್ಟು ಕೊಡ್ತೀನಿ ಅಂದ್ರು ಯಾವಾಗಲು

ಬರೋದಿಲ್ಲ. ಜಾಸ್ತಿ ಸಿಗೋ ಕಡೆ ಹೋಗ್ತಾನೆ. ಮೊದಲಿನ ಹಾಗೆ ಅವನನ್ನ ಬಯ್ಯುವ ಹಾಗಿಲ್ಲ,ಏನಾದರು ಇವನ ರೇಗಿದರೆ ,

ಬೇರೆಯವರನ್ನು ಅಂದರೆ ಜೊತೆಗಾರರಿಗೆ ನಮ್ಮ ಮನೆ ಕೆಲಸಕ್ಕೆ ಹೋಗಬೇಡಿ ಅಂತ ಹೇಳಿ ಕೊಡ್ತಾನಂತೆ.

ಏನಂದ್ರೂ ಅನ್ನಿಸ್ಕೊಂಡು ಸುಮ್ಮನಿರಬೇಕು. ಈಗೆಲ್ಲಾ ನಮ್ಮ ಹಳ್ಳಿನಲ್ಲಿ ಹೊಸ ತಲೆಮಾರಿನ ಆಳುಗಳೇ ಸಿಕ್ಕೋದಿಲ್ಲ, ಇವರ
ಮಕ್ಕಳೆಲ್ಲಾ ಬೆಂಗಳೂರು ಸೇರಿಕೊಂಡಿದ್ದಾರೆ. ಯುನಿಫಾರಂ ಹಾಕಿಕೊಂಡು ನೆರಳಲ್ಲಿ ಯಾವುದಾದರೂ ಬಿಲ್ಡಿಂಗು ಕಾಯೋ

ಕೆಲಸ ಸಿಕ್ಕೇ ಸಿಗುತ್ತೆ, ಯಾರಿಗೆ ಬೇಕು ಬಿಸಿಲಲ್ಲಿ ಬೇಯುವ ಹೊಲದ ಕೆಲಸ ಅಂತಾರೆ. ವಿಧಿಯಿಲ್ಲದೆ ಈ ಹಳೆ
ತಲೆಮಾರಿನ ಜನರನ್ನೆ ಹಿಡಿದು ಗದ್ದೆ ಕೆಲಸ ಮಾಡಿಸಬೇಕು ನಮ್ಮಪ್ಪ ..

"ಇನ್ನೂ ವಿಶ್ವನಿಗೆ ಜ್ವರ ಇಳಿದಿಲ್ಲ ಕರಕೊಂಡೋಗಿ ಡಾಕ್ಟ್ರುಗೆ ತೋರಿಸ್ಬಾರ್ದ"

"ಸರಿ, ಹಿಂದೆ ಸೈಕಲ್ ಮೇಲೆ ಬಿಗಿಯಾಗಿ ಕೂತ್ಕೊತಾನ ಕೇಳ್ ನೋಡು"

"ಅವನನ್ನ ಕೂರಿಸೋದೆ ಕಷ್ಟ, ಇನ್ನು ಸೈಕಲಿನಲ್ಲಿ ಹಿಂದೆ ಹೇಗೆ ಕೂತ್ಕೊತಾನೆ"

"ಸರಿ, ಏನು ಮಾಡೋದು"

"ಏನು ಮಾಡೋದು ಅಂದ್ರೆ, ಗಾಡಿ ಕಟ್ಟಿ ಕರಕೊಂಡೋಗಿ"

"ಇವತ್ತು ಸೋಮವಾರ ಅಲ್ವೇನೆ"

"ಸೋಮವಾರ ಆದ್ರೇನು"

"ಬಹಳ ಕಾಲದಿಂದಲೂ, ಸೋಮವಾರ ಎತ್ತನ್ನ ಕೆಲಸಕ್ಕೆ ಹೂಡೋದಿಲ್ಲ, ಹಗಲು ರಾತ್ರಿ ದುಡಿಯೋ
ಎತ್ತಿಗೆ ಒಂದು ದಿನ ಆರಾಮು ಇರ್ಲಿ ಅಂತ ಹಿರಿಯೋರು ಸಂಪ್ರದಾಯ ಮಾಡಿದ್ದಾರೆ.

ನಾವು ಸೋಮವಾರನೂ ಹೀಗೆ ಅವುನ್ನ ಗಾಡಿಗೆ ಕಟ್ಟಿದ್ರೆ ದೇವ್ರು ಮೆಚ್ತಾನ. ಇದೆಲ್ಲ ಗೊತ್ತಿದ್ದೂ ಗಾಡಿ ಕಟ್ಟು

ಅನ್ತಿಯ್ಯಲ್ಲ "

"ನೋಡಿ, ಜ್ವರ ಒಂದುಕ್ಕೆ ಹೋಗಿ, ಇನ್ನೊಂದಕ್ಕೆ ತಿರುಗಿದರೆ ಕಷ್ಟ, ಏನಾದರೂ ಮಾಡಿ"

"ಡಾಕ್ಟ್ರನ್ನ ಇಲ್ಲಿಗೆ ಕರಕೊಂಡು ಬರ್ತೀನಿ"


"ಅವರು ಇಲ್ಲಿಗೆ ಬರ್ತಾರೇನು?"

"ಅವರ ಸ್ಕೂಟರ್ ಪೆಟ್ರೋಲ್ ಚಾರ್ಜ್, ಮನೆಗೆ ಬರೋಕೆ ಹೆಚ್ಚಿಗೆ ದುಡ್ಡು ಕೊಟ್ರೆ
ಬರ್ತಾರೆ. ನಮ್ಮ ಪಟೇಲರು, ಅವರ ತಾಯಿ ಹಾಸಿಗೆ ಹಿಡಿದಿದ್ದಾಗ ಹಾಗೆ ಕರ್ಕೊಂಡು ಬಂದಿದು"

"ಸರಿ ಹೋಗಿ ಬೇಗ ಬನ್ನಿ"

ಅಪ್ಪ ಇವತ್ತು ಹೊಲಕ್ಕೆ ಹೋಗಿಲ್ಲ, ಮನೇಲಿ ಕೂತಿದ್ದಾರೆ. ಮಗನ ಪರೀಕ್ಷೆಯ ಫಲಿತಾಂಶ
ಏನಾಗಬಹುದು ಅಂತ ಒತ್ತಡ ಇರಬಹುದು. ನನಗಂತೂ ಸ್ವಲ್ಪವೂ ಒತ್ತಡ ಇಲ್ಲ, ಗ್ಯಾರಂಟಿ ಪಾಸಾಗುತ್ತೆ.

ಅಮ್ಮನಿಗೆ ಪಾಸಾದರೆ ಅಷ್ಟೇ ಸಾಕು. ೩೫ ರ ಮೇಲೆ ಎಷ್ಟು ಬರುತ್ತೆ ಅಂತ ಅವರಿಗೆ ಕುತೂಹಲ ಇರೋದಿಲ್ಲ.
ನಮ್ಮೂರಿನಲ್ಲಿ PUC ಪಾಸಾಗುವುದೇ ಒಂದು ದೊಡ್ಡ ಸಾಧನೆ. ಬಿಎ ಗಿಯೇ ಮಾಡಿರೋರು
ಹುಡುಕಿದರೂ ೫ ಜನ ಸಿಗಬಹುದು, ನಮ್ಮ ಅಪ್ಪನನ್ನು ಸೇರಿಸಿ.ನಮ್ಮಪ್ಪ ಆಗಿನ ಕಾಲದಲ್ಲೇ ಬಿಎ ಮುಗಿಸಿದ್ರು.

ಎಲ್.ಎಲ್.ಬಿ ಹೋಗಬೇಕು ಅಂತ ಆಸೆ ಇತ್ತಂತೆ, ಆದರೆ ಅವರ ತಂದೆ ತೀರಿಹೋದ ಮೇಲೆ ಊರಿಗೆ ಬಂದು
ವ್ಯವಸಾಯ ಮಾಡ್ತಿದಾರೆ. ಬಿಎ ನಲ್ಲಿ ತುಂಬಾ ಕಡಿಮೆ ನಂಬರ್ ಬಂದಿದ್ದರಿಂದ ಅವರಿಗೆ ಒಳ್ಳೆ ಸಂಬಳದ ಕೆಲಸ

ಸಿಕ್ಕಿಲ್ಲ ಅಂತ ಹೇಳ್ತಾರೆ. ಬೇರೆಯವರ ಕೈ ಕೆಳಗೆ ಗುಮಾಸ್ತರಾಗಿರುವುದಕ್ಕಿಂತ ನಮಗೆ ನಾವು ಆಳಾಗಿರೋದು

ಒಳ್ಳೆದು ಅಂತ, ವ್ಯವಸಾಯ ಮಾಡಿಸುತ್ತಿದ್ದಾರೆ. ನಮ್ಮ ಜಾತಿಗೆ ಹೆಚ್ಚಿಗೆ ಖೋಟಾ ಇದ್ದಿದ್ದರೆ ನಮ್ಮಪ್ಪನಿಗೂ

ಸರ್ಕಾರಿ ನೌಕರಿ ಸಿಗುತ್ತಿತ್ತು ಅಂತ ಅಮ್ಮ ಹೇಳ್ತಾಳೆ.

"ಎಲ್ಲಿ ಡಾಕ್ಟ್ರು"

"ಮನೆ ಹತ್ರ ಬರೋಲ್ಲ ಅಂತ ಅಂದ್ರು"

"ಹೆಚ್ಚಿಗೆ ಕಾಸು ಕೊಟ್ರು ಬರೋದಿಲ್ಲ ಅಂದ್ರೆ"


"ಅವರ ಶಾಪಿನಲ್ಲಿ ತುಂಬಾ ರಷ್, ಅಲ್ಲಿಗೆ ಬಂದು ನೋಡೋ ಹೊತ್ತಿಗೆ ಇಲ್ಲಿ ೨೦ ಜನರನ್ನು
ನೋಡಿ ಕಳಿಸಬಹುದು ಅಂತ ಹೇಳಿದ್ರು, ಅವ್ರು ಹೇಳೋದು ಸರಿ. ನಾವು ಹೆಚ್ಚಿಗೆ ಕೊಡೋ

೨೦ ರೂಪಾಯಿ ಅವರಿಗೆ ಗೀಟೋದಿಲ್ಲ, ಇಲ್ಲಿಗೆ ಗಾಡಿ ಮೇಲೆ ಕರ್ಕೊಂಡು ಬನ್ನಿ ಅಂತ ಹೇಳಿದ್ರು"

"ಅದಕ್ಕೆ ನೀವು ಸೋಮವಾರದ ವಿಷ್ಯ ಹೇಳಿದ್ರೇನು"

"ಹುಂ, ಅದಕ್ಕೆ ಅವ್ರು ನನ್ನನ್ನೆ ಬೈದ್ರು, ನೀವು ನನ್ನ ದನಕ್ಕಿಂತ ಕಡೆಮಾಡಿಬಿಟ್ರಿ.ನಾನು

ಭಾನುವಾರ-ಸೋಮವಾರ, ರಾತ್ರಿ-ಹಗಲು ಅಂತ ನೋಡ್ದೆ ಕೆಲಸ ಮಾಡ್ತಿನಿ, ಇವತ್ತು
ದನಕ್ಕೆ ರಜ ನೀವೇ ಮನೆಗೆ ಬನ್ನಿ ಅಂತ ಹೇಳ್ತಿರಲ್ಲ ಅಂತ ಕೋಪ ಮಾಡಿಕೊಂಡ್ರು".

"ಅದಕ್ಕೆ ನೀವೇನು ಹೇಳಿದ್ರಿ?"

"ತಪ್ಪಾಯ್ತು ಸ್ವಾಮಿ ಅಂತ ಹೇಳ್ದೆ, ಆಯ್ತು ಅಂತ ಒಂದೆರಡು ಗುಳಿಗೆ ಕೊಟ್ಟಿದ್ದಾರೆ.
ಇವತ್ತು ಇದನ್ನು ಕೊಡಿ, ವಾಸಿ ಆಗಲಿಲ್ಲ ಅಂತಂದ್ರೆ ನಾಳೆ ಮಂಗಳವಾರ
ದನಕ್ಕೂ-ಡಾಕ್ಟ್ರುಗು ರಜ ಇಲ್ಲ ಅಂತ ಚುಚ್ಚುದ್ರು, ನನಗೆ ಗುಳಿಗೆ ಕೊಡುವಾಗ"

"ಪತ್ಯೆ ಏನಾದರೂ ಹೇಳಿದರೇನು"

"ಗಂಜಿ ಮಾತ್ರ ಕೊಡಿ ಅಂದ್ರು, ಗುಳಿಗೆನ ಗಂಜಿ ಕೊಟ್ಟ ಮೇಲೆ ಕೊಡಬೇಕಂತೆ, ಖಾಲಿ
ಹೊಟ್ಟೇಲಿ ತಕೋಬಾರ್ದು ಹೊಟ್ಟೆ ಹುರಿ ಬರುತ್ತೆ ಅಂತ ಹೇಳಿದ್ದಾರೆ"

ರವೆ ಗಂಜಿ ನನಗೆ ಆಗಿ ಬರೋದಿಲ್ಲ. ಏನು ವಿಚಿತ್ರ ಜ್ವರ ಬಂದಾಗ ಬೇರೆ ಯಾವ ಊಟದ ರುಚಿನೂ
ಹತ್ತಲ್ಲ, ಊಟ ಮಾಡಬೇಕು ಅಂತನೂ ಅನ್ನಿಸಲ್ಲ.ಇದ್ದುದ್ದರಲ್ಲಿ ಗಂಜಿ ಮಾತ್ರ ಪರವಾಗಿಲ್ಲ ಅನ್ಸುತ್ತೆ.

ಅದೇ ಎಲ್ಲಾ ಸರಿಯಾಗಿದ್ದಾಗ ರವೆ ಗಂಜಿ ಸ್ವಲ್ಪವೂ ರುಚಿಸುವುದಿಲ್ಲ, ಎಲ್ಲ ವಿಚಿತ್ರ !!

ಗುಳಿಗೆ ತೆಗೆದುಕೊಂಡ ಮೇಲೆ ಜ್ವರ ಇಳಿದರೂ, ನಾಲ್ಕು ತಾಸಿನ ನಂತರ ಮತ್ತೇ ಬಂತು.

ಗುಳಿಗೆ ತೆಗೆದುಕೊಂಡರೆ ಮತ್ತೇ ಕಡಿಮೆಯಾಗುತ್ತೆ.ಆಗಲೇ ಊರಿನಲ್ಲೇಲ್ಲಾ PUC ಫಲಿತಾಂಶ ಬಂದಿದೆ.

ಪಟೇಲರ ಮಗನ ಹೊರತು ಮತ್ಯಾರು ಪಾಸಾಗಿಲ್ವಂತೆ. ಇವರೆಲ್ಲಾ ಹೋಗುತ್ತಿದ್ದುದು ಮಂಡ್ಯ ಕಾಲೇಜಿಗೆ, ಅಲ್ಲಿಗೆ ದಿನಾ
ಹೋಗಿ ಬರೋಕೆ ಕಷ್ಟ. ಮಂಡ್ಯಕ್ಕೆ ಹೋಗಬೇಕೆಂದರೆ ಬೆಳಿಗ್ಗೆ ಎದ್ದು ಸೈಕಲ್ಲಿನಲ್ಲಿ ಹೊಳೆತನಕ
ಹೋಗಬೇಕು. ಸೈಕಲ್ಲನ್ನು ಎತ್ತಿಕೊಂಡು ಹೊಳೆ ದಾಟಬೇಕು, ನಂತರ ಒಂದು ಕಿಲೋಮಿಟರ್ ಸೈಕಲ್
ತುಳಿದು, ಮದ್ದೂರಿನ ಬಸ್ ಸ್ಟಾಪ್ ಹತ್ತಿರ ಸೈಕಲ್ ನಿಲ್ಲಿಸಿ ಬಸ್ ಹತ್ತಬೇಕು. ಮತ್ತೇ
ವಾಪಾಸ್ ಕಾಲೇಜ್ ಮುಗಿದ ನಂತರ ಬಸ್ಸು-ಸೈಕಲ್-ಹೊಳೆ-ಸೈಕಲ್ ಪಯಣ. ಹೋಳೆಲಿ ನೀರು ಹೆಚ್ಚಾದರೆ, 6 ಮೈಲು ಬಳಸಬೇಕು

ರಾತ್ರಿ ಬರೋದರ ಒಳಗೆ ಎಲ್ಲಾ ಸುಸ್ತು, ಓದುವುದಕ್ಕೆ ಎಲ್ಲರಿಗೂ ಎಲ್ಲಿ ಸಮಯ ಸಿಕ್ಕುತ್ತೆ,
ಅದಕ್ಕೆ ಓದುವ ಮನಿಸ್ಸಿರುವ ಬುದ್ದಿವಂತ ಹುಡುಗರೂ ಪಾಸಾಗುವುದಿಲ್ಲ ನಮ್ಮೂರಿನಲ್ಲಿ .

ಆದ ಕಾರಣದಿಂದ ನಾನು ಮಂಡ್ಯದ ಕಾಲೇಜಿಗೆ ಸೇರಿ ಕೊಳ್ಳಲಿಲ್ಲ. ಮಂಡ್ಯದಲ್ಲೇ ಹಾಸ್ಟೆಲ್ ನಲ್ಲಿ ಇರಬಹುದಾದರು, ಬಹಳ ದುಬಾರಿ ನಮ್ಮಂತವರಿಗಲ್ಲ. ಅದಕ್ಕೆ ನನ್ನನ್ನ ನಮ್ಮಪ್ಪ "ಭಾರತಿ" ಕಾಲೇಜಿನ ಹಾಸ್ಟೆಲಿನಲ್ಲಿ ಬಿಟ್ಟದ್ದು,
ಅದು ತಾಲೂಕು ಕೇಂದ್ರದಲ್ಲಿ ಇದ್ದುದ್ದರಿಂದ ಹಾಸ್ಟೆಲ್ ನ ಬಾಡಿಗೆ ಕಡಿಮೆ ಇತ್ತು. ಹೊಸ
ಕಾಲೇಜು ಬೇರೆ, ಸೀಟು ಸುಲಭವಾಗಿ ಸಿಕ್ತು. ಈಗ ರಿಸಲ್ಟ್ ನೋಡಬೇಕಾದರೆ, ಹೊಳೆ ದಾಡಿ
ಮದ್ದೂರಿನಿಂದ ಎರಡು ಬಸ್ಸು ಬದಲಿಸಿ ಕಾಲೇಜಿಗೆ ಹೋಗಿ ನೋಡಬೇಕು. ಮಂಡ್ಯದ
ಕಾಲೇಜಿನಲ್ಲಿ ಬೇರೆ ಕಾಲೇಜುಗಳ ರಿಸಲ್ಟ್ ಹಾಕುವುದಿಲ್ಲ. ಎಷ್ಟು ಮಾರ್ಕ್ಸು ಬಂದಿದಿಯೋ
ಏನೋ? ನಮ್ಮ ಕಾಲೇಜಿನಲ್ಲಿ ಓದಿದವರು ಯಾರು ಈ ಊರಿನಲ್ಲಿ ಇಲ್ಲ, ಇಲ್ಲದಿದ್ದರೆ ನಮ್ಮಪ್ಪ ರಿಸಲ್ಟು ನೋಡಲು

ಅವರಿಗೆ ಹೇಳಬಹುದಾಗಿತ್ತು .ರಾತ್ರಿ ಜ್ವರ ಕಮ್ಮಿಯಾಗಲೇ ಇಲ್ಲ. ಮಂಗಳವಾರ ಬೆಳಿಗ್ಗೆ ಎತ್ತಿನಗಾಡಿಯಲ್ಲಿ ಮುಂದಿನ
ಊರಿನಲ್ಲಿರುವ ಡಾಕ್ಟರ್ ಶಾಪಿಗೆ ಕರೆದುಕೊಂಡು ಹೋಗುವುದಾಗಿ ಅಪ್ಪ ಅಮ್ಮನ ಬಳಿ
ಹೇಳುತ್ತಿದ್ದುದು ಕೇಳಿಸುತ್ತಿತ್ತು. ರಾತ್ರಿಯಲ್ಲೂ ಅಪ್ಪನಿಗೆ ರಿಸಲ್ಟ್ ನ ಚಿಂತೆ,
ಅಮ್ಮನಿಗೆ ನನ್ನ ಆರೋಗ್ಯದ ಚಿಂತೆ, ನನಗೆ.......?......

(ಮುಂದುವರೆಯುವುದು )

ಶುಕ್ರವಾರ, ಜುಲೈ 27, 2012

ಸತ್ಯಮೇವ ಜಯತೆ (ಕಾದಂಬರಿ )-1

                                                                          ಮುನ್ನುಡಿ 

ರೋಗಿಗಳ ಸೇವೆಗಾಗಿ  ವೈದ್ಯರಾಗ ಬಯಸುವ ಕಾಲ ಎಂದೂ ಮುಗಿಯಿತು .ಈಗಿನ ವಿದ್ಯಾರ್ಥಿಗಳು ಸಮಾಜ ಸೇವೆಗೊಸ್ಕರ ವೈದ್ಯ ವೃತ್ತಿ ಆರಿಸಿಕೊಳ್ಳು ತಿದ್ದೇವೆ ಎಂದು ಹೇಳಲು  ಒಂದು ಕ್ಷಣ ಯೋಚಿಸುತ್ತಾರೆ .ಅಕಸ್ಮಾತಾಗಿ ಹೇಳಿದರೂ ಕೇಳುಗರು ಸಂಶಯ ಪಡುತ್ತಾರೆ ಇಲ್ಲವೇ ಲೋಕಾನುಭವ ವಿಲ್ಲದ ಮಕ್ಕಳು ಎಂದು ನಿರ್ಲಕ್ಷ ಮಾಡುತ್ತಾರೆ .ಇಂದು ವೈದ್ಯಕೀಯ ಎಂಬುದು  ಎಲ್ಲ ವೃತ್ತಿಗಳಂತೆ ,ಒಂದು ವೃತ್ತಿ ಮಾತ್ರ .
'ವೈದ್ಯೋ ನಾರಯಣೋ  ಹರಿ' ಎಂದು ಈಗಿನ ರೋಗಿಗಳು ಭಾವಿಸುವುದಿಲ್ಲ .ವೈದ್ಯರು ಸಮಾಜ ಸೇವೆಗೆ ಮಾತ್ರ ಚಿಕಿಸ್ಥೆ ನೀಡುವುದಿಲ್ಲ .ಪರಸ್ಪರ ಅಪನoಬಿಕೆಗಳು ಇದ್ದರೂ ,ಪರಸ್ವರ ಅವಲಂಬನೆ ನಮ್ಮನ್ನು ಹಿಡಿದಿಟ್ಟು ಕೊಂಡಿದೆ .
ಇದಕ್ಕೆ ಒಂದೇ ಕಾರಣ ಇದೇ  ಎಂದು ಹೇಳುವುದಕ್ಕೆ ಕಷ್ಟ ಸಾದ್ಯ .ಇದರಲ್ಲಿ ವೈದ್ಯರೂ ,ರೋಗಿಗಳು ,ಸರ್ಕಾರಗಳು ಮತ್ತು ಉದ್ಯಮಿಗಳು ಸಿಂಹ ಪಾಲು ಕಾರಣರು .
ಪರಸ್ಪರ ಅಪನಂಬಿಕೆ ನಡುವೆ ಸಾಗುತ್ತಿರುವ ನಾವು-ನೀವು ,ಪ್ರೀತಿ -ದ್ವೇಷ ಗಳನ್ನೂ ಒಟ್ಟಿಗೆ ಸಲಹುತ್ತಿದ್ದೇವೆ ..ಯಾವುದನ್ನು ಪ್ರೀತಿಸಬೇಕು ,ಯಾವುದನ್ನೂ ಖಂಡಿಸಬೇಕು ಎಂದು ನಮಗೆ ಸುಲಬದಿ ತಿಳಿಯುವುದಿಲ್ಲ .ಯಾಕೆಂದರೆ ಸರಿತಪ್ಪುಗಳು ನೋಡುವನ ಮನಸ್ತಿತಿಯನ್ನು ಅವಲಂಬಿಸಿರುತ್ತದೆ .ನಮಗೆ ಸರಿ ಎನಿಸಿದ್ದು ,ಬೇರೆಯವರಿಗೆ ತಪ್ಪಿರಬಹುದು .ನಮಗೆ ತಪ್ಪಾಗಿ ಕಂಡಿದ್ದು ,ಸರಿಯಿರಬಹುದು .ಈ ದ್ವಂದ ಗಳು ವೈದ್ಯ ವೃತ್ತಿಗಳಲ್ಲಿ ಹೆಚ್ಚು ಕಾಣುವಂತ ದ್ದು .ಇಲ್ಲಿ ಎರಡು ಮತ್ತು ಎರಡು ಯಾವಾಗಲು ನಾಲ್ಕಗಿರುವುದಕ್ಕೆ ಸಾದ್ಯವಿಲ್ಲ.

ವೈದ್ಯಕೀಯ ವೃತ್ತಿಯನ್ನು ಒಂದು ಉದ್ಯಮವಾಗಿ ಪರಿಗಣಿಸಬಾರದು ,ಸೇವಾ ಮನೂ ಭಾವದಿಂದ ಕೆಲಸ ಮಾಡಬೇಕು ಎಂದು ಹೇಳುವುದು ಸುಲಭ.ಮಠಗಳೇ ಉದ್ಯಮವಾಗಿರು ಈ ಕಾಲದಲ್ಲಿ ,ಬಹಳಷ್ಟು ಬೆವರು ಸುರಿಸಿ ವೈದ್ಯರಾಗುವರನ್ನ, ಸನ್ಯಾಸಿಗಳಂತೆ ಜೀವನ ಮಾಡಲು ನಿರೀಕ್ಷಿಸುವುದು ಸಂಮಂಜಸವಲ್ಲ.ಲೌಕಿಕ  ಕೆಸರಿನ ಜಗತ್ತಿನಲ್ಲಿ ಕಮಲವಾಗಿ ವೈದ್ಯರು ಇರಬಹುದೇ ಎಂಬುದು ಯಕ್ಷ ಪ್ರಶ್ನೆ .ವೈದ್ಯ ರೋಗಿ ಗಳ ನಡುವಿನ ಸಂಬಂದವನ್ನ ಧನಾತ್ಮಕವಾಗಿ ಬೆಳಸದಿದ್ದರೆ ,ಅದು ಮನುಕುಲದ ದೊಡ್ಡ ದುರಂತ ಕಂದಕ ವಾಗುವುದರಲ್ಲಿ  ಸಂಶಯವಿಲ್ಲ  .


                                                                                                               ದಯಾನಂದ ಅಂಕಣ್ಣನದೊಡ್ಡಿ

                                                                     ಸೂಚನೆ
ಕತೆಯ ನೈಜತೆಗಾಗಿ ಕೆಲವೊಂದು ನಿಜ ವ್ಯಕ್ತಿ ಗಳ ಹೆಸರುಗಳನ್ನೂ ಬಳಸಿಕೊಳ್ಳಲಾಗಿದೆ . ಆದರೆ ಈ  ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ .ಈ ಕಾದಂಬರಿಯ ಪಾತ್ರಗಳಿಗೂ ,ನಿಜ ವ್ಯಕ್ತಿಗಳಿಗೂ ಸಾಮ್ಯ ವಿದ್ದರೆ ಅದು ಕಾಕತಾಳಿಯ ಮಾತ್ರ. ಯಾರ ಮನಸ್ಸಿಗೂ ನೋವುಂಟು ಮಾಡುವುದು ಲೇಖಕರ ಉದ್ದೇಶವಲ್ಲ.
                                                                                                                       (ಮುಂದುವರೆಯುವುದು )