ಮಂಗಳವಾರ, ನವೆಂಬರ್ 8, 2011

ನ್ಯಾನೋ ಕಥೆಗಳು -ಭಾಗ 2


ತಪ್ಪೊಪ್ಪಿಗೆ

"ನನ್ನ ಆಹ್ವಾನವನ್ನು ಮನ್ನಿಸಿ ಬಂದಿದ್ದಕ್ಕೆ ಧನ್ಯವಾದ. ನಾಳೆ ನನ್ನನ್ನು ನೇಣಿಗೇರಿಸುತ್ತಾರೆ. ಸಾಯುವ ಮುನ್ನ ನಿಮ್ಮ ಬಳಿ ಹೇಳುವ ವಿಷಯವೊಂದಿತ್ತು."
"ಕೇಳುತ್ತಿದ್ದೇನೆ" ಎಂಬಂತೆ ಅವನು ತಲೆಯಾಡಿಸಿದ.
"ನಿಮ್ಮ ಹೆಂಡತಿಯನ್ನು ನಾನು ಕೊಲೆ ಮಾಡಲಿಲ್ಲ. ಸಾಯಲಿರುವ ಮನುಷ್ಯ ಸುಳ್ಳಾಡಬೇಕಿಲ್ಲ. ಆದರೆ ನಿಮ್ಮ ದ್ವೇಷದ ಹೊರೆ ಹೊತ್ತು ಸಾಯುವುದು ನನಗೆ ಬೇಕಿಲ್ಲ. ಅದಕ್ಕೆ ನಿಮ್ಮನ್ನು ಕರೆಸಿದೆ. ನಿಜವಾಗಿಯೂ ನಾನು ನಿಮ್ಮ ಪತ್ನಿಯನ್ನು ಕೊಂದಿಲ್ಲ. ನನ್ನನ್ನು ನಂಬಿ."
ಕ್ರೌರ್ಯ ಮಡುಗಟ್ಟಿದ ಮುಖಭಾವದೊಡನೆ ಅವನೆಂದ, "ಅದು ನಿನಗಷ್ಟೇ ಅಲ್ಲ, ನನಗೂ ಗೊತ್ತು."
ಮಂದಸ್ಮಿತನಾಗಿ, ಬೆರಳಲ್ಲಿ ಕಾರಿನ ಕೀಲಿ ತಿರುವುತಾ,್ತ ಗೋಡೆಯಾಚೆ ಕಾದಿದ್ದ ತನ್ನ ಪ್ರೇಯಸಿಯತ್ತ ಬಿರಬಿರನೆ ನಡೆದ.
-----
ತಿಳಿವು - ಅಳಿಕೆ

"ಕೆಳಗೆ ಭೋರ್ಗರೆವ ನದಿ, ಮೇಲೆ ಈ ಅದ್ಭುತ ಸೇತುವೆ. ಮದುವೆಯ ಐವತ್ತನೇ ವಾರ್ಷಿಕೋತ್ಸವದ ಸಮಾರಂಭಕ್ಕೆ ಇಂತಹ ಸ್ಥಳದ ಆಲೋಚನೆ ಬಂದದ್ದಾದರೂ ಹೇಗೆ?"
"ನಮ್ಮ ಬಾಳಸೇತು, ಸ್ನೇಹಸೇತುಗಳಿಗೆ ಸಾಂಕೇತಿಕ ಸ್ಥಳ!"
ಅಜ್ಜ, ಅಜ್ಜಿ ಇಬ್ಬರೂ ಉಲ್ಲಾಸದಿಂದ ಓಡಾಡುತ್ತಿದ್ದರು.
ಅಕಸ್ಮಾತ್ತಾಗಿ ಅಜ್ಜಿ ಸೇತುವೆಯಂಚಿನಿಂದ ಆಯ ತಪ್ಪಿ ನೀರಲ್ಲಿ ಬಿದ್ದರು.
ವೈಕುಂಠ ಸಮಾರಾಧನೆ.
"ಅಷ್ಟು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಿದ್ದವರು ಉಳಿಯುವುದು ಕಷ್ಟ ಎಂಬುದು ಅವರಿಗೆ ತಿಳಿದಿರಬೇಕಿತ್ತು"
ಅಜ್ಜನಿಗೂ ಅದರ ಅರಿವಿತ್ತು.
ಅಜ್ಜ ಮತ್ತು ಅಜ್ಜಿಯ ಭಾವಚಿತ್ರಗಳಿಗೆ ಹಾಕಿದ್ದ ಮಲ್ಲಿಗೆಯ ಹಾರಗಳು ಅವರಂತೆಯೇ ನಗುತ್ತಿದ್ದವು.
---------
ಅದ್ವಿತೀಯ

"ಎಷ್ಟು?"
"ಅರವತ್ತು ಲಕ್ಷ"
ಅವನು ಮರು ಮಾತಾಡದೆ ಹಣದ ಚೀಲವನ್ನಿತ್ತ.
ಕರಾರುವಾಕ್ ಮೊತ್ತ.
"ಈ ಪುರಾತನ ಅತ್ಯಮೂಲ್ಯ ಹೂದಾನಿ ಈಗ ನಿಮ್ಮದು. ಕೇವಲ 2 ಹೂದಾನಿಗಳು ಮಾತ್ರ ಈ ಪ್ರಪಂಚದಲ್ಲಿವೆ. ಜೋಪಾನವಾಗಿ ಒಯ್ಯಿರಿ."
ಅವನು ಮಾತಾಡಲಿಲ್ಲ.
ಆ ಹೂದಾನಿಯನ್ನು ಕೈಗೆತ್ತಿಕೊಂಡು ನೆಲಕ್ಕೆ ಒಗೆದ.
ಸಾವಿರ ಚೂರಾಯಿತು ಆ ಅರವತ್ತು ಲಕ್ಷ!
"ಇಂತಹ ಅದ್ಭುತ ಪ್ರಪಂಚದಲ್ಲಿ ಒಂದು ಮಾತ್ರ ಇರಬೇಕು"
ಅಲ್ಲಿಂದ ಹೊರಟುಹೋದ.
ಅವಾಕ್ಕಾಗಿ ನೋಡುತ್ತಿದ್ದವರು ನಿಂತೇ ಇದ್ದರು.
----
ನಿಗದಿ

ನಿರ್ಜನ ಪ್ರದೇಶದಲ್ಲೊಬ್ಬ ಭವಿಷ್ಯ ಹೇಳುವ ಜ್ಯೋತಿಷಿ.
ಬಹಳ ಪ್ರಸಿದ್ಧ.
ಬಂದವನ ಕೈ ನೋಡುತ್ತಾ ನುಡಿದ.
"ತುಂಬಾ ಕೆಟ್ಟ ಗ್ರಹಗತಿ. ಕೇತು ಶಾಂತಿಯಾಗಬೇಕು. ಐವತ್ತು ಸಾವಿರ ಆಗುತ್ತೆ. ಬೇಗ ಮಾಡಿಸಿ"
ಕೈ ಹಿಂದೆಗೆಯದೆ ಅವನೆಂದ.
"ಪಿಂಡ ಇಡಲು ಎಷ್ಟು?"
"ಎರಡು ಸಾವಿರ" ಅಪ್ರಯತ್ನವಾಗಿ ಬಂತು ಜ್ಯೋತಿಷಿಯ ಬಾಯಿಂದ.
ಢಂ ..... ಢಂ
ಸಾವಿರದ ಎರಡು ನೋಟುಗಳು ಜ್ಯೋತಿಷಿಯ ಹೆಣದ ಮೇಲೆ ಬಿದ್ದಿದ್ದವು.
                                                                                                             ನ್ಯಾನೋ ಮಾಲೀಕರು
                                                                                                                   ಡಾ.  ಕಿರಣ್

-----