ಗುರುವಾರ, ಸೆಪ್ಟೆಂಬರ್ 6, 2012

ಸತ್ಯಮೇವ ಜಯತೆ (ಕಾದಂಬರಿ -6)


                                                              I-ಹೊಳೆ

ಆರು ಮತ್ತು ಏಳನೇ ತರಗತಿಯ ದಿನಗಳು ನನ್ನ ಜೀವನದ ಸಂತೋಷದ ದಿನಗಳು. ವಿದ್ಯಾರ್ಥಿಯ ದಿನಗಳು, ಸುವರ್ಣ ದಿನಗಳು, ಎನ್ನುವ ನಾಣ್ಣುಡಿಯ ಹಾಗೆ.ಮದ್ದೂರು ಸರ್ಕಾರಿ ಶಾಲೆಯಲ್ಲಿ ಎರಡು ವರ್ಷಗಳು, ಎರಡು ದಿನಗಳಂತೆ ಉರುಳಿದ್ದವು. ಐದನೇ ತರಗತಿಯ ಗಾಯಗಳೆಲ್ಲಾ ವಾಸಿಯಾಗಿದ್ದವು.

ನಾನು ಆರನೇ ತರಗತಿಗೆ ಸೇರಿದಾಗ ಅಲ್ಲಿ ಆಗ A B C D ಕಲಿಸುತ್ತಿದ್ದರು. ಅದನ್ನು ನಾನು ನಾಲ್ಕನೇ ಕ್ಲಾಸು ಪಾಸಾದಾಗಲೇ ಕಲಿತಿದ್ದರಿಂದ, ನನ್ನನ್ನು ಇಂಗ್ಲೀಷ್ ಮೇಷ್ಟ್ರು ಬುದ್ಧಿವಂತರ ಸಾಲಿಗೆ ಸೇರಿಸಿದ್ದರು. ಇಂಗ್ಲೀಷ್ ಮೇಷ್ಟ್ರು, ಬೆನ್ನು ತಟ್ಟಿದ ಮೇಲೆ ನನ್ನನ್ನು ಹಿಡಿಯುವವರೇ ಇರಲಿಲ್ಲ. ಸಿಗುವ ಸಮಯದಲ್ಲಿ ಆದಷ್ಟು ಓದಿಕೊಳ್ಳುತ್ತಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ. ಇಂಗ್ಲೀಷ್ ಪಾಠಗಳು ಕನ್ನಡದ ಮೂಲಕವೇ ನಡೆಯುತ್ತಿದ್ದವು. ಬಹಳಷ್ಟು ಹುಡುಗರು ಬಡವರ ಹುಡುಗರೇ ಆಗಿದ್ದರಿಂದ, ನಮ್ಮ ಉಡುಗೆ ತೊಡುಗೆ ಬಗ್ಗೆ ಯಾವ ಮೇಷ್ಟ್ರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಉಡುಗೆ-ತೊಡುಗೆ ಇರಲಿ, ನಾವು ಹೇಗೆ ಓದುತ್ತಿದ್ದೇವೆ ಎಂದು ಅವರು ಪರೀಕ್ಷಿಸುತ್ತಿರಲಿಲ್ಲ.ತಮಗೆ ತಿಳಿದಿದ್ದನ್ನು ಪಾಠ ಮಾಡಿ ಮುಗಿಸಿ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಓದಿದಷ್ಟು ಓದು, ಆಡಿದಷ್ಟು ಆಟ ಹೀಗೆ ಸಾಗಿತ್ತು. ಅಪರೂಪಕೊಮ್ಮೆ ವಿಶ್ವನನ್ನು ನೋಡಿ ಕಲಿತುಕೊಳ್ಳಿ ಅಂತಲೂ,ಅವನ ಕಾಲಿನ ಕೆಳಗೆ ನುಗ್ಗಿ ಬುದ್ದಿ ಬರುತ್ತೆ ಅಂತಲೂ, ಬೇರೆ ಹುಡುಗರನ್ನು ಬೈದಾಗ ಉತ್ತೇಜಿತನಾಗುತ್ತಿದ್ದೆ.

ಏಳನೇ ತರಗತಿಯ ಪರೀಕ್ಷೆ ಮುಗಿದಿತ್ತು. ಬೇಸಿಗೆ ರಜೆ ಇನ್ನೂ ಕಳೆದಿರಲಿಲ್ಲ. ಅಮ್ಮ ಅಡುಗೆ ಮನೆಯಲ್ಲಿ ಬಹಳಷ್ಟು ಅಡುಗೆ ಸಾಮಾನುಗಳನ್ನು ಇಟ್ಟುಕೊಂಡು ಅಡುಗೆ ಮಾಡುತ್ತಿದ್ದಳು.ಬಹಳಷ್ಟು ರೀತಿಯ ಗಮಗಮ ಅನ್ನುವ ತಿಂಡಿ ತಿನಿಸುಗಳು ನಾಸಿಕವನ್ನು ಅರಳಿಸುತ್ತಿದ್ದವು. ಯಾವ ಹಬ್ಬಕ್ಕೂ ಅಮ್ಮ ಇಷ್ಟೊಂದು ರೀತಿಯ ಅಡುಗೆ ಮಾಡಿದ್ದನ್ನು ನೋಡಿರಲಿಲ್ಲ.ಅವಳಿಗೆ ಇಷ್ಟು ತರಹದ ಅಡುಗೆ ಮಾಡುವುದಕ್ಕೆ ಬರುತ್ತದೆ ಅಂತ ಗೊತ್ತಾಗಿದ್ದೆ ಅವತ್ತು.


"ಅವ್ವ ಒಂದೇ ಒಂದು ವಡೆ ಕೊಡೆ"
"ಈಗ್ಲೇ ಬೇಡ, ಆಮೇಲೆ ಎಷ್ಟು ಬೇಕಾದರೂ ತಿನ್ನುವೆಯಂತೆ"
"ಆಮೇಲೆ ಅಂದ್ರೆ"
"ರಾಮಣ್ಣನವ್ರು ಊಟ ಮಾಡಿದ ಮೇಲೆ, ಇವತ್ತು ನಮ್ಮ ಮನೆಗೆ ರಾಮಣ್ಣನವ್ರು ಬರ್ತಾ ಇದಾರೆ"
"ರಾಮಣ್ಣ ಅಂದ್ರೆ ಯ್ಯಾರು? ತಿಥಿ ಎಡೆಗೆ ಪೂಜೆ ಮಾಡೋ ಪೂಜಾರಯ್ಯನಾ..? ಇದೆಲ್ಲಾ ಎಡೆ ಪ್ರಸಾದನಾ...?"
"ಥೂ, ಬಿಡ್ತು ಅನ್ನು, ಆ ರಾಮಣ್ಣ ಅಲ್ಲ, ನಮ್ಮ ಶಾಸಕರು. ಓದ್ ಸಲ ಎಲೆಕ್ಷನ್ ನಲ್ಲಿ ಗೆದ್ದಿದ್ರಲ್ಲ ಅವ್ರು"


ಊರಿನಲ್ಲಿ ಓದಿದವರು ಕಡಿಮೆಯೇ, ಬರೆಯಲು ಬಾರದ ಬಹಳ ಜನ. ಅರ್ಜಿ ಬರೆಯಿಸಿಕೊಳ್ಳುವುದಕ್ಕೆ ಅಪ್ಪನ ಬಳಿ ಬರುತ್ತಿದ್ದರು. ಅಪ್ಪ ಅರ್ಜಿ ಬರೆದು ಕೊಡುವುದಷ್ಟೆ ಅಲ್ಲದೇ,ಅಲ್ಪ-ಸ್ವಲ್ಪ ಸರ್ಕಾರಿ ರೀತಿ ನಿಯಮಗಳ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಸರ್ಕಾರಿ ಕೆಲಸವಿದ್ದಲ್ಲಿ ಕೆಲವೊಂದು ಸಲ ಜೊತೆಗೂಡಿ ಮಾಡಿಸುತ್ತಿದ್ದರು. ಅಲ್ಲದೇ ಅಪ್ಪನ ರಾಜಕೀಯ ಜ್ಞಾನ, ಊರ ಜನರಲ್ಲಿ ಗೌರವ ಭಾವನೆ ಮೂಡಿಸಿದ್ದವು. ಒಟ್ಟಿನಲ್ಲಿ ಅಪ್ಪನ ಮಾತು ಊರಿನಲ್ಲಿ ನಡೆಯುತ್ತಿತ್ತು. ಹೀಗಾಗಿ ಚುನಾವಣಾ ದಿನಗಳಲ್ಲಿ ಮನೆಯಲ್ಲಿ ಬಿರುಸಿನ ಚಟುವಟಿಕೆ ಇರುತ್ತಿತ್ತು.


"ರಾಮಣ್ಣನವ್ರು ಬರಬೇಕು ಬಡವರ ಮನೆಗೆ. ಕುಚೇಲನ ಮನೆಗೆ ಕೃಷ್ಣ ಬಂದಹಾಗೆ ಆಯ್ತು ನೋಡಿ"
"ಸ್ವಲ್ಪ ಬದಲಾವಣೆ ಇದೆ, ಆ ಕೃಷ್ಣ ಕುಚೇಲನಿಗೆ ಸಹಾಯ ಮಾಡಲು ಮನೆಗೆ ಬಂದ್ರೆ, ಈ ರಾಮಣ್ಣ ನಿಮ್ಮ ಸಹಾಯ ಯಾಚಿಸಿ ಬಂದಿದ್ದಾನೆ"
"ಅದಿರ್ಲಿ ಬನ್ನಿ, ಕೈ ಕಾಲು ತೊಳೆದುಕೊಳ್ಳಿ, ಊಟ ಮಾಡುತ್ತ ಮಾತಾಡೋಣ"

ಶಾಸಕರು ಮತ್ತು ಅವರ ಕಡೆಯವರು ಊಟ ಮಾಡುತ್ತ ಕುಳಿತಿದ್ದರು. ನಾನು ಯಾವಾಗ ಇವರ ಊಟ ಮುಗಿಯುತ್ತದೆ ಅಂತ ಕಾಯುತ್ತಾ ಅಲ್ಲೇ ನಿಂತಿದ್ದೆ.


"ಬಡವರ ಮನೆ ಊಟ ಚಂದ, ಸಿರಿವಂತರ ಮನೆ ಮಾತು ಚಂದ ಅಂತ ಯ್ಯಾಕೆ ಅಂತಾರೆ ಅಂತ ಇವತ್ತು ಗೊತ್ತಾಯ್ತು ನೋಡಿ ಅಕ್ಕಾವ್ರೆ. ಇಂಥಾ ಊಟ ಬೆಂಗಳೂರಿನಲ್ಲೂ ಸಿಗೊದಿಲ್ಲ ನೋಡಿ"

"ನೀವು ನಮ್ಮ ಮನೆಗೆ ಬರುತ್ತಿರುವುದು ಇದೇ ಮೊದಲ ಸಲ, ನಮ್ಮೂರಿನ ಶಾಸಕರಿಗೆ, ನಾವು ದಿನಾ ತಿನ್ನೋ ಗೊದ್ಡು ಸಾರು ತಿನ್ನಿಸಿ ಕಳಿಸುವುದಕ್ಕೆ ಆಗ್ತದೆಯಾ ?"

"ಇನ್ಮುಂದೆ, ಈ ಊರಿಗೆ ಬಂದರೆ ನಿಮ್ಮ ಮನೆಯಲ್ಲೇ ಊಟ ನೋಡಿ. ಮನೆ ಯಜಮಾನರು ಒಪ್ಪಿದ್ರೆ.ಏನಂತೀರಿ ಮನೆಯ ಯಜಮಾನರು "
"ಎಂಥಾ ಮಾತು, ನೀವು ಬರೋದು ಹೆಚ್ಚೋ, ನಾವು ಬಡಿಸೋದು ಹೆಚ್ಚೋ"
"ಕಳೆದ ಎಲೆಕ್ಷನ್ ನಲ್ಲಿ ನೀವು ನಮಗೆ ಹೆಚ್ಚಿನ ಸಹಾಯ ಮಾಡಲಿಲ್ಲ. ಈ ಸಲ ಆದ್ರೂ ಪೂರ್ಣ ಮನಸ್ಸಿನಿಂದ ಸಹಾಯ ಮಾಡಬೇಕು"
"ರಾಮಣ್ಣೋರೆ, ನಮಗೆ ಈ ಪಕ್ಷ, ಆ ಪಕ್ಷ ಅಂತ ಇಲ್ಲ. ನಮ್ಮ ಊರಿಗೆ ಉಪಕಾರ ಮಾಡೋರು ಯ್ಯಾರದ್ರೂ ಪರವಾಗಿಲ್ಲ ಓಟಾಕ್ತಿವಿ"
"ಈ ಊರಿಗೆ ಕುಡಿಯೋಕೆ ನೀರಿನ ಟ್ಯಾಂಕ್ ಕಟ್ಟಿಸಿದ್ದು ನಮ್ಮ ಪಕ್ಷದವರೆ ಅಲ್ವ. ನಮ್ಮ ಸರ್ಕಾರ ಕರೆಂಟ್ ಕೊಟ್ಟಿದೆ, ಸ್ಕೂಲು ಕೊಟ್ಟಿದೆ, ವಿಧವೆಯರಿಗೆ ಮಾಸಾಶನ ಕೊಡ್ತಾ ಇಲ್ವ.ನಿಮಗೆ ಏನಾದ್ರು ಬೇಕಿದ್ರೆ ಅರ್ಜಿ ಕೊಡಿ, ಸರ್ಕಾರದಿಂದ ಕೊಡ್ಸೊಣ"

"ನಮ್ಮೂರಿಗೆ ಒಂದು ಬಸ್ಸು ಬೇಕು ನೋಡಿ. ಇದನ್ನು ಎಲ್ಲಾ ಶಾಸಕರಿಗೂ ಕೇಳ್ತಾ ಬಂದಿದ್ದೇವೆ. ಇನ್ನೂ ಆ ಕಾಲ ಬಂದಿಲ್ಲ"

"ನಿಮ್ಮ ಯಜಮಾನರು ಬಹಳ ಬುದ್ಧಿವಂತರು ಕಣಮ್ಮ, ಇವರ ಮಾತು ನೋಡಿದ್ರೆ ನಮ್ಮ ಅಜ್ಜಿ ಹೇಳಿದ್ದ ಕತೆ ಜ್ಞಾಪಕ ಬರ್ತಿದೆ, ಹೇಳ್ತಿನಿ ಕೇಳಿ. ಒಂದೂರಿನಲ್ಲಿ ಒಂದು ಬಡ ಸಂಸಾರ ಇತ್ತಂತೆ, ಅದರಲ್ಲಿ ಗಂಡ, ಹೆಂಡತಿ ಮತ್ತು ಅತ್ತೆ ಇದ್ದರಂತೆ. ಆ ಗಂಡ-ಹೆಂಡತಿಗೆ ಮಕ್ಕಳಾಗಿರಲಿಲ್ಲವಂತೆ.ಕಡು ಬಡತನ ಬೇರೆ, ಗಂಡನಿಗೆ ಚೆನ್ನಾಗಿ ಹಣ ಸಂಪಾದಿಸಿ ಮನೆ ಕಟ್ಟಬೇಕು ಅಂತ ಆಸೆ. ಹೆಂಡತಿಗೆ ಚಿನ್ನದ ಮೇಲಿನ ಆಸೆ. ಅಜ್ಜಿಗೆ ಮೊಮ್ಮಕ್ಕಳು ಬೇಕು ಅಂತ ಆಸೆ.ಸರಿ ಒಂದು ದಿನ ಅವರೆಲ್ಲಾ ಕುಳಿತು ಬೇಡಿಕೊಂಡರಂತೆ. ತಕ್ಷಣ ದೇವ್ರು ಪ್ರತ್ಯಕ್ಷ ಆಗಿ ನಿಮಗೆ ಒಂದೇ ಒಂದು ವರ ಕೊಡುತ್ತೇನೆ ಬೇಡಿಕೊಳ್ಳಿ ಅಂತ ಹೇಳಿದನಂತೆ.ಅಜ್ಜಿ ಯೋಚನೆ ಮಾಡಿ ಹೇಳಿದರಂತೆ, ನನಗೆ ನ್ನ ಮೊಮ್ಮಗ ಅರಮನೆಯಂತಹ ನಮ್ಮ ಮನೆಯಲ್ಲಿ ಕೂತುಕೊಂಡು, ಚಿನ್ನದ ತಟ್ಟೆಯಲ್ಲಿ ಊಟ ಮಾಡುವುದನ್ನು ನೋಡಬೇಕು ಅಂತ ಆಸೆ,ಅಂತ ಬೇಡಿಕೊಂಡರಂತೆ. ಅಂದ್ರೆ ಅವರ ಮೊಮ್ಮಗನೂ ಬಂದ ಹಾಗೆ ಆಯ್ತು, ಅರಮನೆಯಂತಹ ಮನೆನೂ ಬೇಡಿದ ಹಾಗೆ ಆಯ್ತು, ಚಿನ್ನದ ತಟ್ಟೆನೂ ಸಿಕ್ಕ ಹಾಗೆ ಆಯ್ತು.ಅದೇ ರೀತಿ ನಿಮ್ಮ ಯಜಮಾನರು ಹೊಳೆಗೆ ಸೇತುವೆ ಬೇಕು ಅಂತ ಕೇಳದೆ, ಬಸ್ಸು ಬೇಕು ಅಂತ ಕೇಳಿದರು. ಬಸ್ಸು ಬಿಡಬೇಕಾದರೆ ಸೇತುವೆಯನ್ನು ಕಟ್ಟಲೇಬೇಕಲ್ಲಾ ಹ್ಹ... ಹ್ಹ...."

"ನೀವು ಏನೇ ಹೇಳಿ, ಈ ಹೊಳೆಯಿಂದ ನಮ್ಮೂರು ದ್ವೀಪದ ತರಹ ಆಗಿಬಿಟ್ಟಿದೆ. ಸೇತುವೆ ಇಲ್ಲದೆ ಬಸ್ಸು ಇಲ್ಲಾ. ಗಾಡಿಯಲ್ಲಿ ಕಬ್ಬು ತುಂಬಿ ಹೊಳೆಯನ್ನು ದಾಟಿಸುವುದು ಎಷ್ಟು ಕಷ್ಟ ಅಂತೀರಿ.ಹೆಂಗಸರು, ಮಕ್ಕಳು ಬೇರೆ ಊರಿಗೆ ಹೊಗಬೇಕಾದರೆ ಮೊದಲು ಹೊಳೆಯಲ್ಲಿ ಎಷ್ಟು ನೀರಿದೆ ಅಂತ ಯೋಚನೆ ಮಾಡಿ ಹೊರಡುತ್ತಾರೆ. ನಮ್ಮೂರಿನಲ್ಲಿ ಮದುವೆ ಸಂಬಂಧಗಳನ್ನು ಬೆಳೆಸೊದು ಬಹಳ ಕಷ್ಟ ಆಗಿಬಿಟ್ಟಿದೆ. ಬಸ್ಸಿಲ್ಲದ ಊರಿಗೆ ಯಾರು ಹೆಣ್ಣು ಕೊಡುತ್ತಾರೆ ಹೇಳಿ. ಒಂದಾ..... ಎರಡಾ............ ಈ ಹೊಳೆಯಿಂದ ನಮಗೆ ಎಷ್ಟು ಉಪಕಾರ ಆಗಿದೆಯೋ, ಅಷ್ಟೆ ಕಷ್ಟನೂ ಆಗಿದೆ"

"ಒಂದು ಸೇತುವೆ ಅಂದ್ರೆ, ಕೋಟಿಗಟ್ಟಲೆ ಟೆಂಡರಿನ ಮಾತು. ಒಂದೇ ಊರಿಗೆ ಕೋಟಿಗಟ್ಟಲೆ ಹಣ ಸುರಿಯುವುದಕ್ಕೆ ಸರ್ಕಾರದವರು ಒಪ್ಪುವುದಿಲ್ಲ. ಸಾವಿರಾರು ಬಸ್ಸು, ಲಾರಿ ಒಡಾಡ್ತ ಇದ್ರೆ,ಈ ಕೆಲಸಕ್ಕೆ ಸರ್ಕಾರ ತಕ್ಷಣ ಹಣ ಮಂಜೂರು ಮಾಡ್ತದೆ. ಇಲ್ಲಿ ಎಷ್ಟು ವಾಹನ ಓಡಾಡುತ್ತವೆ ಹೇಳಿ. ಒಂದು ಊರಿನ ಜನ ಓಡಾಡುವುದಕ್ಕೆ ಕೋಟಿಗಟ್ಟಲೆ ಬೆಲೆಬಾಳುವ ಸೇತುವೆ ಕಟ್ಟಿಸುವುದು,ತೆರಿಗೆ ಕೊಟ್ಟ ಹಣ ವ್ಯರ್ಥ ಮಾಡ್ದ ಹಾಗೆ ಅಲ್ವೆ...?"

"ನೀವು ಹಣ ಹಾಕಿ, ಹಣ ತೆಗೆಯೋ ವ್ಯಾಪಾರಸ್ಥರ ತರಹ ಮಾತಾಡ್ತ ಇದ್ದೀರಾ. ಜನಕ್ಕೆ ಉಪಯೋಗ ಆಗೋದಿದ್ರೆ, ಸರ್ಕಾರ ಲಾಭ ನಷ್ಟ ನೋಡಬಾರದು.ನಮ್ಮೂರು ಇಷ್ಟು ಹಿಂದೆ ಉಳಿಯುವುದಕ್ಕೆ ಸಂಪರ್ಕ ಇಲ್ಲದೇ ಇರೋದೆ ಕಾರಣ. ಮಕ್ಕಳು ಸ್ಕೂಲಿಗೆ ಹೋಗುವುದಕ್ಕೆ ಆಗಲ್ಲ, ಹೆಂಗಸರು ಹೊಳೆದಾಟುವುದು ಕಷ್ಟ. ಬೆಳೆದ ಫಸಲು ದಾಟಿಸುವುದು ಕಷ್ಟ.ಈ ಊರಿನಲ್ಲಿ ಮನೆ ಕಟ್ಟೋಕೆ ಎಷ್ಟು ಕಷ್ಟ ಅಂತೀರಿ. ಮನೆ ಕಟ್ಟುವ ಸಾಮಾನನ್ನು ಮದ್ದೂರಿನಿಂದ ಹೇಗೆ ಈ ಕಡೆ ಸಾಗಿಸುವುದು ನೀವೆ ಹೇಳಿ"

"ಸ್ಕೂಲು ಅಂದಾಗ ಜ್ಞಾಪಕ ಬಂತು ನೋಡಿ. ಕಾನ್ವೆಂಟ್ ನವರು ನಿಮ್ಮ ಹುಡುಗನಿಗೆ ಟಿ.ಸಿ ಕೊಟ್ಟು ಕಳಿಸಿದರಂತೆ. ಆಗ ನೀವು ನನಗೆ ಒಂದು ಮಾತು ಹೇಳಿದ್ರೆ ಅವರ ಗ್ರಹಚಾರ ಬಿಡಿಸ್ತಿದ್ದೆ"

"ಇರ್ಲಿ ಬಿಡಿ, ಅವರು ಹೇಳುವುದಲ್ಲೂ ನ್ಯಾಯ ಇದೆ. ನಮ್ಮ ಮಗನೂ ಅವರ ಶಾಲೆಗೆ ತಕ್ಕಂತೆ ಓದುತ್ತಿರಲಿಲ್ಲ"

"ನಿಮಗೆ ಗೊತ್ತಾಗಲ್ಲ ಬಿಡಿ. ಇದು ಹೊಸದೇನಲ್ಲ. ಯಾರಾದರೂ ಅವರಿಗೆ ಬೇಕಾದವರನ್ನು ಸೇರಿಸಿಕೊಳ್ಳುವುದಕ್ಕೆ ಇಂತಹದೆಲ್ಲಾ ನಾಟಕ ಮಾಡ್ತಾ ಇರ್ತಾರೆ. ಚನ್ನಾಗಿ ಓದಲ್ಲ ಅಂತ ಯಾರಿಗಾದರೂ ಟಿ.ಸಿ ಕೊಟ್ಟು ಕಳಿಸುವುದು, ತಮಗೆ ಬೇಕಾದವರನ್ನು ಆ ಜಾಗಕ್ಕೆ ಸೇರಿಸಿಕೊಳ್ಳುವುದು. ಅದನ್ನು ಅವ್ರು ನೇರವಾಗಿ ಮಾಡುವುದಿಲ್ಲ.ಚೆನ್ನಾಗಿ ಓದೋ ಹುಡುಗರನ್ನು ತೆಗೆದುಕೊಂಡು ಓದಿಸೋಕೆ ಅವ್ರೇ ಯ್ಯಾಕೆ ಬೇಕು. ಅವ್ರು ನಿಜವಾದ ಕಸುಬುದಾರರಾಗಿದ್ರೆ ನಿಮ್ಮ ಮಗನಂತಹ ಹುಡುಗರನ್ನು ತೆಗೆದುಕೊಂಡು ಬೆಳೆಸಬೇಕು.ಚನ್ನಾಗಿ ಓದೋರು ಎಲ್ಲಿದ್ರೂ ಓದ್ತಾರೆ. ಒಳ್ಳೆ ಸ್ಕೂಲು ಬೇಕಾಗಿರೋದು ಸುಮಾರಾಗಿರೋ ಹುಡುಗರಿಗೆ"

"ಬೇರೆ ಯ್ಯಾರನ್ನೊ ಸೇರಿಸಿಕೊಳ್ಳುವುದಕ್ಕೆ ನಮಗೆ ಟಿ.ಸಿ ಕೊಡೋ ವಿಷಯ ನನಗೆ ಗೊತ್ತಿರಲಿಲ್ಲ. ನಮ್ಮ ವಿಶ್ವ ಅವರ ಸ್ಕೂಲಿಗೆ ಹೊಂದಿಕೆ ಆಗಲ್ಲ ಅಂತ ಹೇಳಿ ಬಿಡಿಸಿದ್ರು"

"ಅವ್ರು ಕೊಟ್ರು, ನೀವು ಒಂದು ಮಾತನಾಡದೆ ಟಿ.ಸಿ ಇಸ್ಕೊಂಡು ಬಂದ್ರಿ. ನಿಮ್ಮಂತಹ ಒಳ್ಳೆ ಜನಕ್ಕೆ ಈ ಕಾಲದಲ್ಲಿ ಬೆಲೆ ಇಲ್ಲ. ಇರ್ಲಿ ಬಿಡಿ, ಈಗ ಏನು ಓದುತ್ತಾ ಇದಾನೆ"

"ಏಳು ಮುಗೀತು"

"ಒಳ್ಳೆ ಸಮಯಕ್ಕೆ ನಾನು ನಿಮ್ಮ ಮನೆಗೆ ಬಂದಿದ್ದೀನಿ. ಹೈಸ್ಕೂಲಿಗೆ ನಿಮ್ಮ ಹುಡುಗನಿಗೆ ಇಂಗ್ಲೀಷ್ ಮೀಡಿಯಂ ನಲ್ಲಿ ಸೀಟು ಕೊಡಿಸೋ ಜವಬ್ದಾರಿ ನಂದು. ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೆ ನಿಮ್ಮ ಮಗನ ಜೀವನವೇ ಬದಲಾಗುತ್ತೆ ನೋಡಿ ಯೋಚಿಸಿ"

"ನಮ್ಮ ಹುಡುಗನ್ನು ಒಂದು ಮಾತು ಕೇಳ್ತಿನಿ"

"ಸಣ್ಣ ಮಕ್ಕಳಿಗೆ ಏನು ಗೊತ್ತಾಗುತ್ತೆ. ಬಹಳ ಊರಿನ ನೀರು ಕುಡಿದೋರು ನಾವು, ನಾವು ಅವರಿಗೆ ಮಾರ್ಗದರ್ಶನ ಮಾಡಿ ಬೆಳೆಸಬೇಕು. ಎಲ್ಲದಕ್ಕೂ ಮಕ್ಕಳನ್ನು ಕೇಳಿ ಮಾಡುವುದಕ್ಕೆ ಆಗುವುದಿಲ್ಲ.ಅವರಿಗೆ ನಿರ್ಧಾರ ತಕ್ಕೊಳ್ಳೊ ಅನುಭವ ಇರುತಾ ಹೇಳಿ"

"ನೀವು ಹೇಳಿದ್ದು ಸರಿ ಬಿಡಿ"

"ಮತ್ತೆ ಈಗ ಎಲೆಕ್ಷನ್ ನಲ್ಲಿ ನಿಮ್ಮ ಊರಿನ ಓಟು ನಮಗೆ ಬೀಳೋ ಹಾಗೆ ನೋಡ್ಕೊ ಬೇಕು. ನೀವು ಬೆಳೆಯಿರಿ, ನಾವೂ ಬೆಳೆಯೋಣ"

"ಮತ್ತೆ ನಮ್ಮೂರಿಗೆ ಬಸ್ಸು....."

"ಸೇತುವೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಮಾಡೋಣ.ಇಲ್ಲ ಅಂತ ಹೇಳುದ್ನೆ ?ನೋಡಿ ನಾವು ಜನರ ಹಿತದ ಜೊತೆ ,ನಮ್ಮ ಹಿತವನ್ನು ನೋಡ್ಕೊಬೇಕು. ರಾಜಕೀಯ ಭಾಷೆಯಲ್ಲಿ ಹೇಳೂದಾದರೆ,ನೆಹರೂರವರ ತರ ಬದುಕಬೇಕು ,ಗಾಂಧಿಜಿ ಅವರ ಹಾಗೆ ಅಲ್ಲ .ನೋಡಿ ನೆಹರು ದೇಶಾ ದೇಶಾ ಅಂತ ,ಯಾವತ್ತು ಮನೆಯವರನ್ನ ಕಡೆಗಣಿಸಲಿಲ್ಲ.ನೆಹ್ರುರವರ ಮಕ್ಕಳು ,ಮೊಮ್ಮಕ್ಕಳು ಎಲ್ರು ಪ್ರದಾನ ಮಂತ್ರಿಗಳಾದರು .ಗಾಂಧೀಜಿ ಅವ್ರನ್ನ ನೋಡಿ.ಮನೆ ಕಡೆ ಗಮನ ಕೊಡದೆ ಇದ್ದುದ್ಕೆ ಮಕ್ಕಳು ಮೂರು ಮದ್ಯೆ ಮತ್ತೊಂದು ಅನ್ನೋ ಆಗೇ ಬದುಕ್ತಾ ಇದ್ದಾರೆ . ನಿಮ್ಮ ಮಗನಿಗೆ ಇಂಗ್ಲಿಷ್ ಮೀಡಿಯಂನಿಂದ ಜೀವನವೇ ಬದಲಾಗುತ್ತೆ .ನಿಮಗೇ ಗೊತ್ತು ,ಇಂಗ್ಲಿಷ್ ಗೊತ್ತಿದ್ರೆ ,ಅಮೆರಿಕದಲ್ಲೂ ಬೇಕಾದರೂ ಹೋಗಿ ಬದುಕಬಹುದು.ಬರಿ ಕನ್ನಡ ಅಂತಂದ್ರೆ ಬೆಂಗಳೂರಿನಲ್ಲೂ ಕೆಲಸ ಸಿಗೋದು ಕಷ್ಟವೆ............. "

ಅಲ್ಲೇ ನಿಂತಿದ್ದ ನನಗೆ ಎತ್ತಿ ಒಗೆದ ಹಾಗಾಯ್ತು. ಅಪರೂಪಕ್ಕೆ ಅಮ್ಮ ಮಾಡಿದ ಯಾವ ತಿನಿಸುಗಳು ರುಚಿಸಲಿಲ್ಲ.(ಮುಂದುವರೆಯುವುದು )

1 ಕಾಮೆಂಟ್‌:

  1. ದಯಾನಂದರೆ,
    ಕತೆ ಬಹಳ ಸ್ವಾರಸ್ಯಕರವಾಗಿ ಸಾಗುತ್ತಿದೆ. ಹುಡುಗನ ಕಣ್ಣಿನಿಂದ ಪ್ರಪಂಚವನ್ನು ತೋರಿಸುತ್ತಾ ಇದ್ದೀರಿ. ಈ ಕತೆ ಬಹಳ ಇಷ್ಟವಾಗುತ್ತಿದೆ.

    ಪ್ರತ್ಯುತ್ತರಅಳಿಸಿ