ಶುಕ್ರವಾರ, ಆಗಸ್ಟ್ 17, 2012

ಸತ್ಯಮೇವ ಜಯತೆ (ಕಾದಂಬರಿ -4)

                                                                    A for 'A' ಸೆಕ್ಷನ್

ರಾತ್ರಿಯೆಲ್ಲಾ ನಿದ್ರೆ ಬಾರದೆ, ಯಾವಾಗ ಬೆಳಗಾಗುತ್ತದೋ ಎನ್ನುವಂತಾಗಿತ್ತು. ಗಣಿತದಲ್ಲಿ ಎಷ್ಟು ಅಂಕ ಬಂದಿರಬಹುದು ಎಂಬ ಯೋಚನೆ, ನಿದ್ರೆ ಮಾಡಲು ಬಿಡಲಿಲ್ಲ.ಬೇರೆ ಎಲ್ಲಾ ವಿಷಯದ ಪ್ರಶ್ನೆ ಪತ್ರಿಕೆ ನೋಡಿ ನನಗೆ, ಎಷ್ಟು ಅಂಕ ಬರಬಹುದು ಎಂದು ಲೆಕ್ಕ ಹಾಕಿದ್ರೆ. ಗಣಿತ ಮತ್ತು ಇಂಗ್ಲೀಷ್ ನಲ್ಲಿ ಎಷ್ಟು ಬರಬಹುದು ಎಂದು ಲೆಕ್ಕ ಹಾಕಲು ಮನಸ್ಸು ಒಪ್ಪಲಿಲ್ಲ,ಬರೆದಿದ್ದು ಹಾಗಿದೆ, ಬಂದಷ್ಟು ಬರಲಿ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದೆ. ಛೇ... ಸೂತ್ರಗಳನ್ನು ಗಣಿತ ಪರೀಕ್ಷೆಯ ದಿನ ಒಂದು ಸಲ, ಎಲ್ಲಾ ತಿರುವಿ ಹಾಕಿದ್ದರೆ...... ಛೇ.. ಛೇ..ಅವತ್ತು ಹಿಂದಿನ ದಿನವೆಲ್ಲಾ ಸರಿಯಾಗಿ ಒಮ್ಮೆ ಒದಿದ್ದನ್ನು,ಗಟ್ಟಿಮಾಡಿಕೊಂಡು,ಪರೀಕ್ಷೆ ಬರೆದಿದ್ದರೆ... ಛೇ.. ಛೇ... ಆಗಿದ್ದೆಲ್ಲ ಆಗಿಹೋಗಿದೆ ಎಂದು ನನಗೆ ನಾನೆ ಸಮಾಧಾನ ಹೇಳಿಕೊಂಡರೂ ಸಮಾಧಾನವಿಲ್ಲ. ಪದೇ ಪದೇ ನಿಟ್ಟುಸಿರು ಹೊರಬರುತ್ತಲೇ ಇದೆ. ಆದರೂ ಎದೆ ಯಾಕೋ ಭಾರ,ಮಲಗಲು ಆಗದೆ ಎದ್ದುಕೂತು,ಗಡಿಯಾರ ನೋಡಿದರೆ ಆಗಲೇ ಐದು ಗಂಟೆ!
ಅಮ್ಮ ಆಗಲೇ ಎದ್ದು ನೀರಿನ ಒಲೆಗೆ ಬೆಂಕಿ ಹಾಕುತ್ತಿದ್ದಾಳೆ.ಎದ್ದು ಸ್ನಾನಾದಿಗಳನ್ನು ಮುಗಿಸುವ ಹೊತ್ತಿಗೆ ಆರುಗಂಟೆಯಾಗಿತ್ತು.ಅಪ್ಪನು ಬೇಗ ಸಿದ್ದರಾದರು, ಅವರು ನಮ್ಮ ಊರಿನವರಂತೆ ವಾರಕ್ಕೊಂದೆ ಸಲ ಸ್ನಾನ. ದಿನಾ ಮುಖ ತೊಳೆದು ಹಲ್ಲುಜ್ಜುತ್ತಾರಷ್ಟೆ. ಮೊದಲು ನಾನೂ ಅಷ್ಟೆ ವಾರಕ್ಕೊಂದೇ ಸಲ ಸ್ನಾನ ಮಾಡುತ್ತಿದ್ದುದು, ಹಾಸ್ಟೆಲಿಗೆ ಸೇರಿದಾಗಿನಿಂದ ದಿನಾ ಸ್ನಾನ ಮಾಡುವುದು ರೂಢಿಯಾಗಿದೆ.ನಾನು ದಿನಾ ಪಟ್ಟಣದವರ ಹಾಗೆ ಸ್ನಾನ ಮಾಡಿದರೆ ಅಮ್ಮನಿಗೂ ಖುಷಿ.ಆದರೆ ಅವಳು ಅಷ್ಟೂ ನೀರನ್ನು ದಿನಾ ಬಾವಿಯಿಂದ ಸೇದಿ ತರಬೇಕು ಎಂಬುದಷ್ಟೆ ನನ್ನ ದುಃಖ.
ಇನ್ನೂ ಸ್ವಲ್ಪ ಕತ್ತಲೆ ಇರುವಾಗಲೆ, ಹೊಳೆ ಹತ್ತಿರ ತಲುಪಿದ್ದೆವು. ಬೆಳಗಿನ ಚಳಿಗೆ ಹೊಳೆಯ ನೀರು ತಣ್ಣಗಿತ್ತು. ಅಪ್ಪ ಪಂಚೆಯನ್ನು ಮೇಲಕ್ಕೆ ಕಟ್ಟಿಕೊಂಡು ದಾಟಿದರು.ನಾನು ಪ್ಯಾಂಟ್ ಮೇಲೆ ಮಾಡಲು ಪ್ರಯತ್ನ ಮಾಡಿದೆನಾದರೂ ಅದು ಮಂಡಿಯ ಮೇಲೆ ಹೋಗಲಿಲ್ಲ.ಸರಿ ಪ್ಯಾಂಟ್ ತೇವವಾಗುವುದನ್ನು ತಪ್ಪಿಸಲು, ಪ್ಯಾಂಟ್ ಬಿಚ್ಚಿ ತಲೆಮೇಲೆ ಇಟ್ಟುಕೊಂಡು,
ನಿಕ್ಕರಿನಲ್ಲಿ ಹೊಳೆ ದಾಟಿದೆ. ಹೊಳೆ ದಾಟಿದ ಮೇಲೆ, ಕಾಲು ಒಣಗುವವರೆಗೂ ನಡೆದು, ನಂತರ ಮಾರ್ಗದ ಮಧ್ಯೆ ಪ್ಯಾಂಟ್ ಹಾಕಿಕೊಂಡೆ. ಮದ್ದೂರಿನ ಮುಖ್ಯ ರಸ್ತೆ ತಲುಪುವ ಹೊತ್ತಿಗೆ ಬೆಳಗಾಗಿತ್ತು.ಹಾಗೆ ಮುಖ್ಯರಸ್ತೆ ಮೇಲೆ ಸ್ವಲ್ಪ ದೂರ ನಡೆದರೆ, ಸರ್ಕಾರಿ ಬಸ್ ಸ್ಟ್ಯಾಂಡ್, ಸರ್ಕಾರಿ ಬಸ್ಸ್ ನವರು ಮಧ್ಯ ನಿಲ್ಲಿಸುವುದಿಲ್ಲ. ಬಸ್ಸ್ ಸ್ಟ್ಯಾಂಡಿನವರೆಗೆ ನಡೆದು ಹೋಗದೆ ವಿಧಿ ಇಲ್ಲ.ಬಸ್ ಸ್ಟ್ಯಾಂಡಿನ ಪಕ್ಕ ಒಂದು ಗುಡಿಸಿಲಿನಲ್ಲಿ ಹೋಟೆಲ್ ನಡೆಸುತ್ತಾರೆ, ಅಪ್ಪ ಯಾವಾಗಲೂ ಅಲ್ಲೇ ಕರೆದುಕೊಂಡು ಹೋಗುವುದು.ಸ್ಟ್ಯಾಂಡಿನ ಹೋಟೆಲಿಗಿಂತ ಕಡಿಮೆ ಬೆಲೆ, ಹೆಚ್ಚು ರುಚಿ.ಒಂದು ಸಾದಾ ದೋಸೆಗೆ ಒಂದೇ ರೂಪಾಯಿ. ಅದೇ ಸ್ಟ್ಯಾಂಡಿನ ಹೋಟೆಲಿನಲ್ಲಿ ಮೂರು ರೂಪಾಯಿ. ತಿಂಡಿ ತಿಂದು ಬಸ್ಸು ಹಿಡಿದೆವು. ಪುಣ್ಯಕ್ಕೆ ಸೀಟು ಸಿಕ್ಕಿತು.
ನಾಲ್ಕೈದು ನಿಲ್ದಾಣ ಬರುವಷ್ಟರಲ್ಲಿ, ಬಸ್ಸು ತುಂಬಿದ ಬಸುರಿಯಂತಾಯ್ತು. ಎರಡು ಕಾಲು ಇಟ್ಟು ನಿಲ್ಲಲು ಸ್ಥಳವಿಲ್ಲದಷ್ಟೂ ತುಂಬಿತು. ಆದರೂ ಎಲ್ಲಾ ಹಳ್ಳಿಗಳಲ್ಲೂ ನಿಲ್ಲಿಸದೇ ಹೋಗುವ ಹಾಗಿಲ್ಲ.ಇಲ್ಲದಿದ್ದರೆ, ವಾಪಾಸ್ಸು ಬರುವಾಗ ಆ ಜನರು ಅಡ್ಡ ಹಾಕಿ, ಚಾಲಕನ ಬೆವರಿಳಿಸುತ್ತಾರೆ.
"ಅಯ್ಯೋ ಚಪ್ಪಲಿ ಕಾಲಿನಲ್ಲಿ ತುಳಿದ್ಬಿಟ್ಟಿಯಲ್ಲೇ?" 
"ಗೊತ್ತಾಗಲಿಲ್ಲ ಕಣಜ್ಜಿ"
"ಗೊತ್ತಾಗಲಿಲ್ಲವಂತೆ, ಗೊತ್ತಾಗಲಿಲ್ಲ, ಕಣ್ಣಿಗೆ ಏನು ಇಟ್ಕಂಡಿದಿಯಾ?"
ಮುದುಕಿ ಯಾವುದೋ ಹೆಂಗಸನ್ನು ಬೈಯುತಿತ್ತು. ಆ ಹೆಂಗಸು ಅಜ್ಜಿಯ ಬೈಗುಳ ತಾಳಲಾರದೆ, ಹಿಂದೆ ಸರಿದು ನಮ್ಮ ಸೀಟಿನ ಹತ್ತಿರ ಬಂದು ನಿಂತರು. ಅರೇ ಎಲ್ಲೋ ನೋಡಿದ ಹಾಗೆ ಇದೆ.ಇವರನ್ನ ಅನ್ನಿಸಿತು. ಸರಿಯಾಗಿ ನೋಡಿದಾಗ ತಿಳಿಯಿತು, ಇವರು ನಮ್ಮ ಇಂಗ್ಲೀಷ್ ಟೀಚರ್, ಶಾಂತ ಮೇಡಂ ಅಂತ. ತಕ್ಷಣ ಮುಖವನ್ನು ಕಿಟಕಿಯ ಕಡೆ ಮಾಡಿಕೊಂಡೆ.ಒಂದು ಕ್ಷಣ ಎಲ್ಲಿ ನನ್ನನ್ನು ಕಂಡುಹಿಡಿದುಬಿಟ್ಟರೊ ಅಂತ ಭಯವಾಯಿತು. ಅವರಿಗೆ ಸೀಟು ಬಿಟ್ಟು ಕೊಡುವುದೋ, ಬೇಡವೋ ಅಂತ ಮನಸ್ಸಿನಲ್ಲೇ ತೊಳಲಾಟ ಶುರುವಾಯಿತು.ನಾನೇನೋ ಸೀಟು ಬಿಟ್ಟುಕೊಡಬಹುದು. ಆದರೆ ಅವರು, ಯಾರಪ್ಪ ನೀನು? ಅಂತ ಕೇಳಿ ಬಿಟ್ಟರೆ. ಅವರಾಗಿ ನನ್ನ ಕಂಡುಹಿಡಿಯುವುದು ಕಷ್ಟ. ಆಗಿನ ನನ್ನ ಮುಖಕ್ಕೂ,ಈಗಿನ ಚಿಗುರು ಮೀಸೆಯ ಮುಖಕ್ಕೂ ಬಹಳ ವ್ಯತ್ಯಾಸವಿದೆ. ನಾನಾಗೇ ನನ್ನ ಪರಿಚಯ ಹೇಳದೆ, ಕಂಡು ಹಿಡಿಯುವುದು ಕಷ್ಟ. ನಾನಾಗಿಯೇ ಪರಿಚಯ ಮಾಡಿಕೊಂಡರು ಅವರಿಗೆ ನೆನಪಿರುತ್ತದೋ, ಇಲ್ಲವೋ..... ನೆನಪಿರದೇ ಏನು, ಪ್ರತಿದಿನ ಗೋಳುಹೊಯ್ಯದೆ ಪಾಠ ಮಾಡುತ್ತಿರಲಿಲ್ಲ, ಅಂದ ಮೇಲೆ ನೆನಪಿರುತ್ತದೆ.ಮೂರು ಬಸ್ಸಿಗೆ ಆಗುವಷ್ಟು ಜನ ಒಂದೇ ಬಸ್ಸಿನಲ್ಲಿ ತುಂಬಿದ್ದರು. ಶಾಂತ ಮೇಡಂ ಹಿಡಿದುಕೊಳ್ಳಲು ಸ್ಥಳವಿಲ್ಲದೇ ಜೋಲಿ ಹೊಡೆಯುತ್ತಿದ್ದರು. ನನಗೆ ತಡೆದುಕೊಳ್ಳಲು ಆಗಲಿಲ್ಲ.
"ದಯವಿಟ್ಟು ಇಲ್ಲಿ ಕುಳಿತುಕೊಳ್ಳಿ ಮೇಡಂ" ಎಂದು ಹೇಳಿ ಎದ್ದು ನಿಂತೆ.ಬಲವಂತವಾಗಿ "ಮಿಸ್" ಅನ್ನುವ ಪದ ಉಪಯೋಗಿಸಲಿಲ್ಲ. ಇಲ್ಲದಿದ್ದರೆ ಯಾರೋ ಹಳೆಯ ಸ್ಟೂಡೆಂಟ್ ಅಂತ ಕಂಡುಹಿಡಿಯಬಹುದು ಎಂಬ ಹೆದರಿಕೆಯಿಂದ, ಯಾರೋ ಸೀಟು ಬಿಟ್ಟು ಕೊಟ್ಟಿದ್ದುದು ಅವರಿಗೆ ಆಶ್ಚರ್ಯವಾಗಿರಬೇಕು.ನನ್ನ ಮುಖವನ್ನು ನೋಡುವ ಪ್ರಯತ್ನವನ್ನು ಮಾಡಿದರಾದರೂ, ನಾನು ಬೇರೆ ಕಡೆ ಮುಖ ತಿರುಗಿಸಿ ನಿಂತಿದ್ದರಿಂದ,ಅವರಿಗೆ ಸರಿಯಾಗಿ ನೋಡಲಾಗುತ್ತಿರಲಿಲ್ಲ. ಬಸ್ಸು ಮುಂದಕ್ಕೊಡುತಿತ್ತು. ಮನಸ್ಸು ಹಿಂದಕ್ಕೊಡಿತು....
ಮದ್ದೂರಿನ ಸ್ಕೂಲಿಗೆ ಸೇರಿದ ಮೊದಲ ದಿನ, ಐದನೇ ತರಗತಿಯ ಮಕ್ಕಳನ್ನು ಸಾಲಾಗಿ ನಿಲ್ಲಲು ಹೇಳಿದರು. ಮುಖ್ಯೋಪಾಧ್ಯಾಯರು ಎಲ್ಲರ ಹಿನ್ನಲೆ ಮತ್ತು ಮುಖ್ಯಸ್ಥರು ಗುರುತು ಮಾಡಿರುವ
ರೀತಿಯ ಮೇಲೆ A, B, C ಸೆಕ್ಷನ್ ಗೆ ಹೋಗಲು ಹೇಳುತ್ತಿದ್ದರು. ನಾನು ಹಿಂದಿರುವ ಹುಡುಗನಿಗೆ -
"ನೀನು ಇದೇ ಸ್ಕೂಲಾ ಓದಿದ್ದು"
"ಹ್ಮೂ.."
"A, B, C ಸೆಕ್ಷನ್ ಅಂದ್ರೇನು"
"A ಸೆಕ್ಷನ್ ನಲ್ಲಿ ಎಲ್ಲಾ ಚೆನ್ನಾಗಿ ಓದೋರು, B ನಲ್ಲಿ ಸುಮಾರಾಗಿ ಓದೋರು, C ಸೆಕ್ಷನ್ ನಲ್ಲಿ ಉಳಿದವರು"
"ನಾಲ್ಕನೇ ಕ್ಲಾಸಿನಲ್ಲಿ ನಿಂದು ಯಾವ ಸೆಕ್ಷನ್"
"ನಾನು ಯಾವಾಗಲು A ಸೆಕ್ಷನ್,ಈಗಲೂ ಅಲ್ಲಿಗೆ ಕಳಿಸ್ತಾರೆ"
ನನ್ನ ಸರದಿ ಬಂದಾಗ, ಮುಖ್ಯೋಪಾಧ್ಯಾಯರು ಕಾಗದಗನ್ನು ಪರಿಶೀಲಿಸಿ "ನೀನು C ಸೆಕ್ಷನ್" ಅಂದ್ರು.
ಬಹಳ ಅವಮಾನ ಮಾಡಿದ ಹಾಗೆ ಅನ್ನಿಸಿತು. ನಮ್ಮೂರಿನ ಸ್ಕೂಲಿನಲ್ಲಿ ಮೇಷ್ಟ್ರು, ಆಲೆಮನೆ ನಂಜಪ್ಪನ ಮಗಳಿಗೆ "good, good" ಅನ್ನುತ್ತಿದ್ದರೇ ಹೊರತು, ಯಾರನ್ನು ದಡ್ಡ ಅನ್ನುತ್ತಿರಲಿಲ್ಲ.ನಂಜಪ್ಪನ ಮಗಳು ಗೌರಿಯ ಅಕ್ಷರ ಬಹಳ ದುಂಡಾಗಿದ್ದುದರಿಂದ ಹಾಗೆ ಹೇಳುತ್ತಾರೆ ಅಂತ ತಿಳಿದುಕೊಂಡಿದ್ದೆ. ಅಷ್ಟು ಬಿಟ್ಟರೆ ಯಾರು ಚೆನ್ನಾಗಿ ಓದೋರು, ಯಾರು ಓದದೆ ಇರೋರು ಅಂತ ನಮ್ಮಲ್ಲಿ ವಿಂಗಡಣೆ ಇರಲಿಲ್ಲ. ನಾನು ಚೆನ್ನಾಗಿ ಓದುತ್ತಿದ್ದೆನೋ, ಇಲ್ಲವೋ ಗೊತ್ತಿರಲಿಲ್ಲ. ಮೇಷ್ಟ್ರು ಯಾವಾಗಲೂ ಅದರ ಬಗ್ಗೆ ಹೇಳಿರಲಿಲ್ಲ.ಎಲ್ಲರೂ ಪಾಸಾಗುತ್ತಿದ್ದೆವು, ಅಂದರೆ ಎಲ್ಲರೂ ಚೆನ್ನಾಗಿ ಓದುತ್ತಿದ್ದೆವು ಅಂತ ತಿಳಿದುಕೊಂಡಿದ್ದೆ.
"ಯಾವ ಸೆಕ್ಷನ್ ಅಂದ್ರು" ಜವಾನ ಕೇಳಿದ.
"A ಸೆಕ್ಷನ್"
"ಸರಿ, ಮೊದಲ ಕೊಠಡಿ ಕಡೆ ಹೋಗು" ಅಂತ ಹೇಳಿದ.
ಸೀದಾ A ಸೆಕ್ಷನ್ ಗೆ ಹೋಗಿ ಎರಡನೇ ಬೆಂಚಿನ ಮೇಲೆ ಕುಳಿತುಕೊಂಡೆ. ನನ್ನ ಹಿಂದೆ ನಿಂತಿದ್ದ ಹುಡುಗ ಬಂದು ನನ್ನ ಪಕ್ಕ ಕುಳಿತುಕೊಂಡ. ನಾನು A ಸೆಕ್ಷನ್ ನಲ್ಲಿ ಕುಳಿತುಕೊಂಡಿರುವುದನ್ನು ಕಂಡು ಅವನಿಗೆ ಆಶ್ಚರ್ಯ.
"ನೀನು C ಸೆಕ್ಷನ್ ಅಲ್ವಾ"
"                      "
"ಸರ್ ಗೆ ಗೊತ್ತಾದ್ರೆ ಬೈತಾರೆ"
"ನಾನೇನು ದಡ್ಡ ಅಲ್ಲ"
"ನಿನ್ನ ಹೆಸರೇನು?"
"ವಿಶ್ವ, ನಿನ್ನ ಹೆಸರು?"
"ಹರೀಶ್"
"ಯಾರಿಗೂ ಹೇಳ್ಬ್ಯಾಡ್ವೊ ಹರೀಶ"
"ಸರಿ"
ಮೊದಲ ದಿನ,ಮೊದಲ ತರಗತಿ ಶಾಂತಾ ಮೇಡಂ ಹಾಜರಾತಿ ಪುಸ್ತಕ ತೆಗೆದುಕೊಂಡು ಬಂದು "ಒಂದರಿಂದ ನಾಲ್ಕನೇ ತರಗತಿಯವರೆಗೆ ಇಲ್ಲಿಯೇ ಓದಿದ ವಿದ್ಯಾರ್ಥಿಗಳ ಹೆಸರು ಆಗಲೇ ದಾಖಲಾಗಿದೆ.ಹೊಸದಾಗಿ ಬಂದವರು ಹೆಸರು ಹೇಳಿ" ಎಂದರು.ನಾಲ್ಕು ಐದು ಹುಡುಗ ಹುಡುಗಿಯರು ಎದ್ದು ನಿಂತರು. ನಾನೂ ಎದ್ದು ನಿಂತೆ.'ಹೆಸರು ಹೇಳಿ' ಎಂದು ಹಾಜರಾತಿ ಪುಸ್ತಕದಲ್ಲಿ ಬರೆದುಕೊಳ್ಳತೊಡಗಿದರು. ಎದೆ 'ಢವ್ ಢವ್' ಅಂತ ಬಡಿದುಕೊಳ್ಳುತ್ತಿತ್ತು. ಧೈರ್ಯ ಮಾಡಿಕೊಂಡು ಹೆಸರು ಹೇಳಿದೆ, ಬರೆದುಕೊಂಡರು.ಹರೀಶ ಏನೂ ಗೊತ್ತಿಲ್ಲದವನಂತೆ ಸುಮ್ಮನಿದ್ದ.ಮೊದಲ ದಿನ ಪಾಠವೇನು ನಡೆಯಲಿಲ್ಲ. ಎಲ್ಲರೂ ಬಂದು ಎಷ್ಟು ಪುಟದ ಬರೆದುಕೊಳ್ಳುವ ಪುಸ್ತಕ ಬೇಕು, ಓದಲು ಯಾವ ಯಾವ ಪುಸ್ತಕ ತೆಗೆದುಕೊಳ್ಳಬೇಕು
ಎಂಬ ವಿವರವನ್ನಷ್ಟೆ ಹೇಳಿದರು. ಪ್ರತಿಗಂಟೆಗೊಮ್ಮೆ ಬೇರೆ ತರಗತಿ ಶುರುವಾದಾಗ "ಈ ಮೇಡಂ ನ ಹೆಸರೇನು" ಎನ್ನುತ್ತಿದ್ದೆ. ಹರೀಶ ಮೇಡಂ ಅನ್ನಬಾರದು "ಮಿಸ್" ಅನ್ನು ಎನ್ನುತ್ತಿದ್ದ.ಇಲ್ಲಿ ಮೇಡಂಗಳಿಗೆ "ಮಿಸ್" ಅನ್ನುತ್ತಾರೆ ಅಂತ ಗೊತ್ತಾಯ್ತು. ಮೇಡಂ ಅಂತ ಏಕೆ ಕರೆಯಬಾರದು ಎಂದು ಕೇಳಿದೆ. ಹರೀಶ ಹೇಳಲಿಲ್ಲ.
"ನಿನಗೆ A B C D ಬರುತ್ತಾ?" ಎನ್ನುತ್ತಾ ಹರಿಶನನ್ನು ಮಾತಿಗೆಳೆದೆ .
"ಅದು ಒಂದನೇ ಕ್ಲಾಸಿನಿಂದಲೇ ಗೊತ್ತು"
"ಕ್ಯಾಟ್, ಬ್ಯಾಟ್ ಸ್ಪೆಲ್ಲಿಂಗ್ ಬರುತ್ತಾ"
"ಓ, ಓ ಬರುತ್ತೆ"
"ಎಲ್ಲಾ ವಾರಗಳನ್ನು ಇಂಗ್ಲೀಷಿನಲ್ಲಿ ಹೇಳಲು ಬರುತ್ತಾ"
"ಬರುತ್ತೆ, ಬರುತ್ತೆ"
ಹರೀಶನನ್ನು ಮಾತನಾಡಿಸುತ್ತ, ನನ್ನ ಓದು ಎಷ್ಟರ ಮಟ್ಟಿಗೆ ಇದೆ ಎಂದು ಮೊದಲ ಸಲ ಗೊತ್ತಾಗಿತ್ತು. ಅವನ ಜೊತೆ ಸರಿಸಮಾನನಾಗುವುದಕ್ಕೆ ಮೂರು, ನಾಲ್ಕು ವರ್ಷವಾದರು ಬೇಕು ಅನ್ನಿಸತೊಡಗಿತು.ಪ್ರತಿಸ್ಟೆಗೆ A ಸೆಕ್ಷನ್ ಗೆ ಬಂದು ತಪ್ಪು ಮಾಡಿದಿನೇನೋ, C ಸೆಕ್ಷನ್ ಗೆ ಹೋಗಿದ್ದರೆ ನನ್ನ ಮಟ್ಟದ ಹುಡುಗರು ಇರುತ್ತಿದ್ದರೋ ಏನೋ, ಆದರೆ ಹಿಂದಿರುಗುವ ಹಾಗಿಲ್ಲ.
ಮೊದಲ ದಿನ ಶಾಲೆಯಿಂದ ಕರೆದುಕೊಂಡು ಹೋಗಲು ಅಪ್ಪ ಬಂದಿದ್ದರು.
"ಹೇಗಿದೆ ಹೊಸ ಶಾಲೆ"
"ಎಷ್ಟೊಂದು ದೊಡ್ಡ ಶಾಲೆ ಗೊತ್ತಾ ಅಪ್ಪ, ಒಂದೊಂದು ತರಗತಿಗೂ, ಮೂರು-ಮೂರು ಗುಂಪು ಇದೆ"
"ನಿನ್ನದು ಯಾವ ಗುಂಪು"
"A" (A ಗೆ ಬಂದಿರುವ ಗುಟ್ಟು ಅಪ್ಪನ ಬಳಿ ಹೇಳಲಿಲ್ಲ, ಅಪ್ಪನೂ ಕೇಳಲಿಲ್ಲ)
"ಮತ್ತೆ"
"ಯಾರೂ ನೆಲದ ಮೇಲೆ ಕೂರುವ ಹಾಗಿಲ್ಲ, ಎಲ್ಲರಿಗೂ ಕುಳಿತುಕೊಳ್ಳುವುದಕ್ಕೆ ಬೆಂಚಿದೆ"
"ಮತ್ತೆ"
"ಒಂದೊಂದು ವಿಷಯಕ್ಕೂ ಒಬ್ಬೊಬ್ಬರು ಮಿಸ್ಸು/ಮೇಷ್ಟ್ರು. ನಮ್ಮ ಊರಿನ ಶಾಲೆಯ ಹಾಗಲ್ಲ"
"ಹೌದಾ! ಮತ್ತೆ"
"ಒಂದು ದಿನಕ್ಕೆ ಏಳು ಪೀರಿಯಡ್ ಗಳು, ಆಟಕ್ಕೆ ಒಂದೇ ಗಂಟೆ, ನಮ್ಮ ಶಾಲೆಯ ಹಾಗಲ್ಲ"
"ಹೌದಾ, ಮತ್ತೆ"
"ಎಲ್ಲಾ ವಿಷಯಕ್ಕೂ ಬೇರೆ, ಬೇರೆ ಪುಸ್ತಕ ಇಡಬೇಕಂತೆ. ನಮ್ಮ ಊರಿನ ಶಾಲೆಯ ಹಾಗೆ ಎಲ್ಲವನ್ನೂ ಒಂದೇ ಪುಸ್ತಕದಲ್ಲಿ ಬರೆಯುವ ಹಾಗಿಲ್ಲ"
"ಮತ್ತೆ"
"ನಮ್ಮ ಊರಿನ ಶಾಲೆಯ ಹಾಗೆ ಯುನಿಫಾರಂ ಅವರು ಕೊಡುವುದಿಲ್ಲ, ನಾವೇ ಕೊಂಡುಕೊಳ್ಳಬೇಕು. ಇಂದೇ ಅಂಗಡಿಯಲ್ಲಿ ಕೊಳ್ಳಬೇಕು ಅಂತ ವಿಳಾಸ ಕೊಟ್ಟಿದ್ದಾರೆ"
"ಮತ್ತೆ"
"ಬರೀ ಕಾಲಿನಲ್ಲಿ ಹೋಗುವ ಹಾಗಿಲ್ಲ, ಬೂಟು ಹಾಕಿಕೊಂಡು ಹೋಗಬೇಕಂತೆ. ಮತ್ತೆ ಎಲ್ಲಾ ತೆಗೆದುಕೊಳ್ಳುವುದಕ್ಕೆ ಒಂದೇ ವಾರ. ಮುಂದಿನವಾರದಿಂದ ಎಲ್ಲಾ ಹೊಂದಿಸಿಕೊಂಡು ಬನ್ನಿ ಅಂತ ಹೇಳಿದ್ದಾರೆ"
ಶಾಲೆಯವರು ಹೇಳಿದ ಅಂಗಡಿಗೆ ಹೋದೆವು. ಯ್ಯಾಕೋ ಅಪ್ಪನಿಗೆ ಅವರ ದರಗಳೆಲ್ಲಾ ದುಬಾರಿ ಎನಿಸಿದವು. ಚೌಕಾಸಿ ಮಾಡಿದಾಗ, ಅಂಗಡಿಯವನು ಬೇಕಾದ್ರೆ ತಕ್ಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದು ರೇಗಿಬಿಟ್ಟ.ಅಪ್ಪ ನನ್ನನ್ನು ಬೇರೆ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋದರು. ಅಲ್ಲಿ ಶಾಲೆಯ ಹೆಸರು ಹೇಳಿ, ಕಡಿಮೆ ಬೆಲೆಯ ಕಾಟನ್ ಸಮವಸ್ತ್ರ ಖರೀದಿಸಿದೆವು. ಅಂಗಡಿಯಲ್ಲಿ ನೋಡಿದಾಗ, ಬಟ್ಟೆಯ ಬಣ್ಣ ಶಾಲೆಯ ಸಮವಸ್ತ್ರವನ್ನು ಹೋಲುತ್ತಿದ್ದರೂ, ಸೂಕ್ಷ್ಮವಾದ ವ್ಯತ್ಯಾಸವಿತ್ತು. ಆದರೆ ಅದು ತೆಗೆದುಕೊಳ್ಳುವಾಗ ಗಮನಕ್ಕೆ ಬರಲಿಲ್ಲ. ಬಟ್ಟೆ ಹೊಲಿಸಿ, ಪ್ರಾರ್ಥನೆಗಾಗಿ ಸಾಲಿನಲ್ಲಿ ನಿಂತಾಗ,
ನನ್ನ ಬಟ್ಟೆಯ ಬಣ್ಣದಲ್ಲಿ ವ್ಯತ್ಯಾಸ ಸುಲಭವಾಗಿ ಗುರುತಿಸಬಹುದಿತ್ತು.

                                                           (ಮುಂದುವರೆಯುವುದು)

1 ಕಾಮೆಂಟ್‌: