ಭಾನುವಾರ, ಅಕ್ಟೋಬರ್ 30, 2011

ನ್ಯಾನೋ (Nano) ಕಥೆಗಳು



ಮೊದಲ ಮಾತು: ಈ ಯಾವ ಕತೆಗಳೂ ನನ್ನ ಸ್ವಂತದ್ದಲ್ಲ. ನೆನಪಿನಂಗಳದಲ್ಲಿ ಬೆಚ್ಚನೆ ಕೂತಿದ್ದ ಇವುಗಳನ್ನು ಮಿತ್ರ ದಯಾನಂದರ ಒತ್ತಾಸೆಯ ಮೇರೆಗೆ ಅಕ್ಷರಗಳಿಗಿಳಿಸಿದ್ದೇನೆ. ಮೆಚ್ಚಿಗೆಯಾದರೆ ಅದರ ಕೀರ್ತಿ ಅನಾಮಿಕ ಮೂಲ ಕತೆಗಾರರಿಗೆ. ಇಷ್ಟವಾಗದಿದ್ದಲ್ಲಿ ಅದು ಸಣ್ಣ ಕತೆಯೊಂದನ್ನೂ ನೆಟ್ಟಗೆ ಬರೆಯಲು ಬಾರದ ನನ್ನ ಮಹಾನ್ ಸಾಮರ್ಥ್ಯಕ್ಕೆ!
--------

ಸತ್ಯದರ್ಶನ

ಅವನ ಅಲೆದಾಟ ಕೊನೆಗೂ ಮುಗಿಯಿತು.
ಬೆಂಕಿಯ ಬದಿಯಲ್ಲಿ "ನಿಜ" ಕುಳಿತಿದ್ದಳು.
ಮಹಾ ಕುರೂಪಿ ಮುದುಕಿ.
"ನಿಜ" ಎಂದರೆ ನೀನೇನೋ?' ಅವ ಕೇಳಿದ.
ಹೌದೆಂದು ಗೋಣು ಆಡಿಸಿದಳು ಮುದುಕಿ.
"ಈ ಪ್ರಪಂಚಕ್ಕೆ ನಿನ್ನ ಯಾವ ಸಂದೇಶವನ್ನು ನಾನು ಹರಡಬೇಕೆನ್ನುವೆ?' ಪ್ರಶ್ನಿಸಿದನಾತ.
ಬೆಂಕಿಯೊಳಗೆ ಉಗಿದು ಆಕೆಯಂದಳು, "ಎಲ್ಲರಿಗೂ ಹೇಳು: 'ನಿಜ' ಏರು ಜವ್ವನದ ಅದ್ಭುತ ಲಾವಣ್ಯದ ಮಹಾ ಸುಂದರಿ ಎಂದು!"
----------

ಮೂಲ

ಸತತ ಐದು ವರ್ಷಗಳ ನಷ್ಟ.
"ವೇಲಾಯುಧ"ವನ್ನು ಇನ್ನೂ ಮುಂದುವರಿಸುವುದು ಹುಚ್ಚಿನ ಮಾತು.
ಕಾರ್ಖಾನೆ ಕಛೇರಿಯ ಪ್ರತಿಯೊಂದು ಕಾಗದವನ್ನೂ ಅವನು ಪರೀಕ್ಷಿಸಿದ್ದ.
ನಷ್ಟದ ಕಾರಣ ತಿಳಿಯಲಿಲ್ಲ.
ಸಾಲಿಗರು ಕತ್ತಿನ ಮೇಲೆ ಕೂತಿದ್ದರು.
ಒಂದೇ ದಾರಿ.
ಕಪಾಟಿನಿಂದ ಕೈಬಂದೂಕನ್ನು ತೆಗೆದು ಹಣೆಯ ಮೇಲಿಟ್ಟುಕೊಂಡ.
"ಟಕ್" ಎಂದು ಕುದುರೆ ಒತ್ತಿದ ಸದ್ದು.
ಸತ್ಯದರ್ಶನವಾಯಿತು.
"ನಮ್ಮ ಕೈಬಂದೂಕು ತಯಾರಿಕಾ ಘಟಕಕ್ಕೆ ಹೋಗಬೇಕು, ನಡೆ".
ತನ್ನ ಕಾರ್ಯದರ್ಶಿಯೊಡನೆ ಬಿರಬಿರನೆ ನಡೆದು ಹೊರಟ.
----------

ನೀ ನನಗೆ; ನಾ ನಿನಗೆ...

ಆಕೆಯ ಅಡುಗೆ ಅಮೃತ.
ಆತನೋ ಮಹಾನ್ ರಾಸಾಯನ ಶಾಸ್ತ್ರಙ್ಞ.
ಅವನ ನೆಚ್ಚಿನ ಅಡುಗೆ ತಯಾರಿಸಿದ್ದಳಾಕೆ.
ಬಹಳ ನಾಜೂಕಾಗಿ ಅವನು ಹಣ್ಣಿನ ರಸ ಬೆರೆಸಿದ್ದ.
"ಊಟಕ್ಕೆ ಬನ್ನಿ" ಆಮಂತ್ರಿಸಿದಳಾಕೆ.
ಹಣ್ಣಿನ ರಸ ತುಂಬಿದ ಗಾಜಿನ ಲೋಟಗಳೊಂದಿಗೆ ಬಂದನಾತ.
"ನಮ್ಮಿಬ್ಬರ ಪ್ರೀತಿಗಾಗಿ" ಎಂದರು ಇಬ್ಬರೂ ಒಟ್ಟಿಗೆ.
ನಕ್ಕರು.
ಅವನು ಊಟ ಬಾಯಿಗಿಟ್ಟ. ಅವಳು ಹಣ್ಣಿನ ರಸ ತುಟಿಗೆ ಸೋಕಿಸಿದಳು.
"ಕಾರ್ಕೋಟಕ ವಿಷ; ನಿಮಿಷ ಮಾತ್ರ!"
ಅವರಿಬ್ಬರ ಮನದ ಕಡೆಯ ಸ್ವಗತ.
------

ಆವರ್ತನ

"ಅಯ್ಯೋ"
"ಏನಾಯಿತು?"
"ಈ 'ಟೈಮ್ ಮೆಶೀನ್' ಗುಂಡಿಯನ್ನು ಒತ್ತಿಬಿಟ್ಟೆ. ಸಮಯ ಹಿಂದಕ್ಕೆ ಹೋಗುತ್ತಿದೆ"
"ತಕ್ಷಣ ಆ 'ಹಿಂದಿರುಗು' ಗುಂಡಿಯನ್ನು ಒತ್ತು"
"ಒತ್ತಲಾಗುತ್ತಿಲ್ಲ. ಕಚ್ಚಿಕೊಂಡಿದೆ"
"ನನ್ನ ಪ್ರಯತ್ನ ಫಲಿಸಿತು. ಆದರೆ ಒಂದು ನಿಮಿಷ ಹಿಂದಕ್ಕೆ ಹೋಗಲೇ ಬೇಕಾಗುತ್ತದೆ. ಗತ್ಯಂತರವಿಲ್ಲ"
"ಅಯ್ಯೋ"
"ಏನಾಯಿತು?"
"ಈ 'ಟೈಮ್ ಮೆಶೀನ್' ಗುಂಡಿಯನ್ನು ಒತ್ತಿಬಿಟ್ಟೆ. ಸಮಯ ಹಿಂದಕ್ಕೆ ಹೋಗುತ್ತಿದೆ"......
.......
----

ಬಹುಮಾನ

"ನನ್ನ ಇನ್ನೂ ಪ್ರೀತಿ ಇದೆಯಾ ನಿನಗೆ?" ಪತ್ನಿ ಕೇಳಿದಳು.
"ಬೆಟ್ಟದಷ್ಟು" ಎಂದನಾತ.
"ಪುರಾವೆ ನೀಡು"
"ಆಯಿತು. ಇನ್ನು ಮುಂದೆ ಮಂಚದ ಮೇಲೆ ನಿನ್ನ ಮುಟ್ಟುವುದಿಲ್ಲ!"
"ಅದೆಂಥಾ ಪುರಾವೆ?"
"ನನ್ನ ಮುಖ್ಯ ಬಯಕೆಯನ್ನು ಬಿಟ್ಟುಕೊಡುತ್ತಿದ್ದೀನಲ್ಲವಾ?"
ಅವಳು ಪ್ರಸನ್ನಳಾದಳು. ಆದರೂ "ನೋಡೋಣ" ಎಂದು ಕತ್ತು ಕೊಂಕಿಸಿದಳು.
ಆ ರಾತ್ರಿ ಅವನು ಅವಳನ್ನು ಮುಟ್ಟಲಿಲ್ಲ.
ಆವಳ ಪ್ರೀತಿ ತುಂಬಿ ಬಂತು.
ಅವನನ್ನು ಗಾಢವಾಗಿ ಚುಂಬಿಸಿದಳು.
ಅವರಿಬ್ಬರೂ ರಾತ್ರಿಯಿಡೀ ಪ್ರೀತಿ ಮಾಡಿದರು.
"ಅದನ್ನು ಮಾಡುವುದಿಲ್ಲವೆಂದಿದ್ದೆ!" ಎಂದು ಮತ್ತೆ ಕತ್ತು ಕೊಂಕಿಸಿದಳು ಮುಂಜಾನೆ.
"ಅದಾ", ಅವನೆಂದ. "ಅದು ನನ್ನ ಪ್ರೀತಿಯ ಪುರಾವೆಗೆ ನನಗೆ ದಕ್ಕಿದ ಬಹುಮಾನ!"

                                                                                         ನ್ಯಾನೋ ಮಾಲೀಕರು (ಲೇಖಕರು)
                                                                                                     ಡಾ.ಕಿರಣ್ V S
                                                                                                     ನಾರಾಯಣ ಹೃದಯಾಲಯ
                                                                                                     ಬೆಂಗಳೂರು