ಬುಧವಾರ, ಆಗಸ್ಟ್ 8, 2012

ಸತ್ಯಮೇವ ಜಯತೆ (ಕಾದಂಬರಿ -3)


                                                         ಹಳ್ಳಿ ಮೇಸ್ಟ್ರೆ... ಹಳ್ಳಿಮೇಸ್ಟ್ರೆ.

ಮಂಗಳವಾರ ಬೆಳಗ್ಗೆ ಕರಿಯನ ಕೈಲಿ ಗಾಡಿ ಕಟ್ಟಿಸಿ, ಮನೆ ಬಾಗಿಲಿಗೆ ತಂದು ನಿಲ್ಲಿಸಿದರು. ಅಮ್ಮ ಅದರ ಮೇಲೆ ಸ್ವಲ್ಪ ಒಣ ಹುಲ್ಲು ಹಾಕಿ, ಮೇಲೆ ಚಾಪೆ ಹಾಕಿದರು.ನಾನಾಗಿ ಗಾಡಿಯಲ್ಲಿ ಹೋಗಿ ಮಲಗಲು ಸಾಧ್ಯ ಆಗದಷ್ಟು ಸುಸ್ತು. ಕೊನೆಗೆ ಅಮ್ಮ, ಅಪ್ಪನೆ ಕೈ ಹಿಡಿದುಕೊಂಡು ಗಾಡಿಯಲ್ಲಿ ಚಾಪೆಯ ಮೇಲೆ ಮಲಗಿಸಬೇಕಾಯ್ತು. ದೊಡ್ಡ ಕಂಬಳಿ ಮುಖದ ಮೇಲೆ ಹೊಚ್ಚಿಕೊಂಡು ಮಲಗಿಬಿಟ್ಟೆ.ಗಾಡಿ ಮುಂದೆ ಹೋಗುತಿದ್ದುದು ಅಲುಗಾಟದಿಂದ ಅರಿವಾಗುತ್ತಿತ್ತು.


"ಒಂದು ಎರಡು ಬಾಳೆಲೆ ಹರಡು"
"ಒಂದು ಎರಡು ಬಾಳೆಲೆ ಹರಡು"
"ಮೂರು ನಾಲ್ಕು ಅನ್ನ ಹಾಕು"
"ಮೂರು ನಾಲ್ಕು ಅನ್ನ ಹಾಕು"


ಮೇಷ್ಟ್ರು ಹುಡುಗರಿಗೆ ಪಾಠ ಹೇಳಿ ಕೊಡ್ತ ಇದ್ದುದು ಕೇಳಿ, ಗಾಡಿ ನಮ್ಮೂರಿನ ಸ್ಕೂಲು ಹಿಂದಿನ ರಸ್ತೆಯನ್ನು ತಲುಪಿದೆ ಎಂದು ಮುಖದ ಮೇಲೆ ಮುಸುಕು ಹಾಕಿದ್ದರು ಗೊತ್ತಾಯ್ತು.


"ನಮಸ್ಕಾರ ಮೇಷ್ಟ್ರೇ"
"ಗೌಡರಿಗೆ ನಮಸ್ಕಾರ"
"ನಮ್ಮ ಮಗನಿಗೆ ಹುಷಾರಿಲ್ಲ, ಅದಕ್ಕೆ ಡಾಕ್ಟ್ರುಗೆ ತೋರಸಣಾ ಅಂತ ಕರಕೊಂಡು ಹೋಗ್ತಾಯಿದೀನಿ"
"ಹೋ.. ಹಾಗೇನು? ಮತ್ತೇ ರಿಸಲ್ಟು?"
"ಇನ್ನೂ ನೋಡಿಲ್ಲ ಸಾ, ಇವನಿಗೆ ಹುಷಾರಾದ ಮೇಲೆ ಇವನನ್ನೆ ಕರಕೊಂಡು ಹೋಗಿ ನೋಡಿ ಬರಬೇಕು"
"ನೋಡಿ ನಮ್ಮೂರ ಪಟೇಲರ ಮಗನ ಬಿಟ್ಟು ಯ್ಯಾರು ಈ ಸಲ ಸೈನ್ಸ್ ನಲ್ಲಿ PUC ಪಾಸಾಗಿಲ್ಲ. ಆರ್ಟ್ಸ್ ನಲ್ಲಿ ಇಬ್ರು ಪಾಸಾಗಿದ್ದಾರಂತೆ ಪುಣ್ಯಕ್ಕೆ, ನಮ್ಮ ಸ್ಕೂಲಲ್ಲಿ ಪಾಠ ಕಲಿತವರು, ಒಳ್ಳೆ ಡಿಗ್ರಿ ಮಾಡುದ್ರೆ ನಮಗೆ ಸಂತೋಷ ನೋಡಿ"


ನಾನು ಕಂಬಳಿ ಸರಿಸಿ, ಕಿಟಕಿ ಪಕ್ಕದಲ್ಲಿ ನಿಂತು ಮಾತನಾಡುತಿದ್ದ ಮೇಷ್ಟ್ರುಗೆ 'ನಮಸ್ಕಾರ ಸಾರ್' ಎಂದೆ. 'ಇರಲಿ ಇರಲಿ ಮಲಿಕ್ಕೊ' ಅಂದ್ರು.


"ನೀವು ಹೋಗಿ ಬನ್ನಿ ಗೌಡ್ರೆ, ರಿಸಲ್ಟು ಏನಾಯ್ತು ಅಂತ ತಿಳಿಸುವುದ ಮರಿಬ್ಯಾಡ್ರಿ, ಯಾಕಂದ್ರೆ ವಿಶ್ವ ನಮ್ಮ ಸ್ಟೂಡೆಂಟ್. ನಮಗೂ ಕೂತೂಹಲ ಇರುತ್ತೆ ನೋಡಿ"
"ನಿಮಗೆ ಹೇಳದೆ ಇರುತ್ತೇವೆನು ಮೇಷ್ಟ್ರೇ?. ಕರಿಯ ನಡಿ"

"ಐದು ಆರು ಬೇಳೆಯ ಸಾರು"
"ಐದು ಆರು ಬೇಳೆಯ ಸಾರು"
"ಏಳು ಎಂಟು ಪಲ್ಯಕೆ ದಂಟು"
"ಏಳು ಎಂಟು ಪಲ್ಯಕೆ ದಂಟು".......


ನಮ್ಮೂರಿನಲ್ಲಿ ಇದ್ದಿದು ಒಂದರಿಂದ ನಾಲ್ಕನೇ ತರಗತಿಯ ಪ್ರೈಮರಿಸ್ಕೂಲು ಮಾತ್ರ. ನಾಲ್ಕು ತರಗತಿಗಳಿದ್ದರೂ, ಇರುವುದೊಬ್ಬರೆ ಮೇಷ್ಟ್ರು. ನಾಲ್ಕು ಮೇಷ್ಟ್ರುಗಳನ್ನು ನೇಮಿಸಿದರೂ, ಪಾಠ ಮಾಡುವುದಕ್ಕೆ ಸಾಧ್ಯವಾಗುವುದು ಒಬ್ಬರಿಗೆ ಮಾತ್ರ. ಯಾಕೆಂದರೆ ಅಲ್ಲಿರುವುದು ಒಂದೇ ಕೊಠಡಿ. ಆ ಕೊಠಡಿಯೊಳಗೆ ನಾಲ್ಕು ಗೆರೆಯನ್ನು ಎಳೆದು, ನಾಲ್ಕು ಭಾಗವನ್ನಾಗಿ ಮಾಡಿ, ಒಂದೊಂದು ಮೂಲೆಗೂ ಒಂದೊಂದು ತರಗತಿಯ ಹುಡುಗರನ್ನು ಕೂರಿಸಿದ್ದಾರೆ. ಒಂದನೇ ತರಗತಿಯ ಪಾಠವನ್ನು ಎರಡು, ಮೂರು ಮತ್ತು ನಾಲ್ಕನೇ ತರಗತಿಯವರು ಕೇಳಬಹುದು. ಎಲ್ಲ ಪಾಠವನ್ನು ಎಲ್ಲಾ ತರಗತಿಯವರು ಕೇಳದೆ ವಿಧಿ ಇಲ್ಲ. ಗಲಾಟೆ ಹೆಚ್ಚಾದರೆ, ಯಾವುದಾದರು ಮೂರು ತರಗತಿಯವರನ್ನು ಆಟಕ್ಕೆ ಬಿಟ್ಟು, ಒಂದು ತರಗತಿಗೆ ಮಾತ್ರ ಪಾಠ ಮಾಡುತ್ತಾರೆ. ಆಗಾಗಿ ನಮಗೆ ಬಹಳ ಆಟದ ವಿರಾಮವಿರುತ್ತಿತ್ತು ಈ ಸ್ಕೂಲಿನಲ್ಲಿ ನಾವು ಓದುವಾಗ. ಈಗೆಲ್ಲಾ ಹೆಚ್ಚಿಗೆ ಆಟಕ್ಕೆ ಬಿಡುವುದಿಲ್ಲವಂತೆ, ಯಾಕೆಂದರೆ ಕಳೆದ ವರ್ಷ ಮೂರು ತರಗತಿಯವರನ್ನು ಆಟಕ್ಕೆ ಬಿಟ್ಟಿದ್ದರಂತೆ. ಮೂರು ತರಗತಿಯವರು ಆಟ ಆಡುವಷ್ಟು ಜಾಗ ಸ್ಕೂಲಿನ ಮುಂದೆ ಇಲ್ಲ. ಅದಕ್ಕೆ ಹುಡುಗರು ರೋಡಿನಲ್ಲಿ ಕಳ್ಳ-ಪೋಲಿಸ್ ಆಟ ಆಡುವಾಗ, ಸರ್ಕಾರಿ ಜೀಪು ಗುದ್ದಿ ತಲೆಗೆ ಪೆಟ್ಟಾಗಿತ್ತಂತೆ. ಪಾಪ ಮೇಷ್ಟ್ರುನ್ನ ಎಲ್ರು ವಿಚಾರಣೆ ಮಾಡಿ ಬಯ್ದಿದ್ದಾರೆ. "ಯಾವಾಗಲೂ ಹುಡುಗ್ರು, ಆಟ ಆಡುತ್ತಲೆ ಇರುತ್ತವೆ, ನೀವು ಯಾವಾಗ ಪಾಠ ಮಾಡ್ದೀರೋ ಗೊತ್ತಿಲ್ಲ" ಅಂತ ಪಂಚಾಯ್ತಿ ಮಾಡಿದ್ದಾರೆ. ಅದಕ್ಕೆ ಮೇಷ್ಟ್ರು ಸ್ಕೂಲಿಗೆ ಕಾಂಪೌಂಡ್ ಇಲ್ಲ, ಕಾಂಪೌಂಡ್ ಕಟ್ಟಿಸಿದರೆ ಮಕ್ಕಳು ರಸ್ತೆಗೆ ಹೋಗುವುದಿಲ್ಲ ಅಂತ ಸಮಜಾಯಷಿ ಕೊಟ್ಟಿದ್ದಾರೆ.


ಕೊನೆಗೆ ಸರ್ಕಾರದಿಂದ ಕಾಂಪೌಂಡ್ ಕಟ್ಟುವುದಕ್ಕೆ ಹಸಿರು ನಿಶಾನೆ ಬಂತು. ಆದರೆ ಒಂದೇ ಕಡೆ ಮಾತ್ರ ಕಾಂಪೌಂಡ್ ಕಟ್ಟಿ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದಾರೆ. ಮುಂದೆ ಕಟ್ಟುವುದಕ್ಕೆ ದುಡ್ಡು ಬಂದಿಲ್ಲವೊ ಅಥವಾ ಕಂಟ್ರಾಕ್ಟರು ದುಡ್ಡು ನುಂಗಿ ಅರ್ಧ ಮಾತ್ರ ಕಟ್ಟಿಸಿದ್ದಾನೊ ಗೊತ್ತಿಲ್ಲ. ಆಮೇಲೆ ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂತ ಕಾಣುತ್ತೆ. ಯಾಕೆಂದರೆ ಇಲ್ಲಿ ಬಹುಪಾಲು ಹೊಸತಲೆಮಾರಿನ ಜನಗಳೆ ಇಲ್ಲ, ಇನ್ನೂ ಮಕ್ಕಳು ಎಲ್ಲಿಂದ ಬರಬೇಕು.


ಇದ್ದರೂ ಅವರ ನೆಂಟರ ಮನೆಗಳಿಗೊ ಅಥವಾ ಮದ್ದೂರಿನ ಖಾಸಗಿ ಶಾಲೆಗಳಿಗೊ ಹಚ್ಚುತ್ತಾರೆ. ಅವರಿಗೆ ಕಡಿಮೆ ಅಂದರೂ ಇಂಗ್ಲೀಷ್ ಕಲಿಸುವ ಕನ್ನಡ ಶಾಲೆಯಾದರೂ ಬೇಕು. ಇಂಗ್ಲೀಷ್ ಮೀಡಿಯಂ ಸಿಕ್ಕರಂತೂ ಒಳ್ಳೆಯದೇ. ಸರ್ಕಾರಿ ಕನ್ನಡ ಶಾಲೆಯಲ್ಲಿ ೬ ನೇ ತರಗತಿಯವರೆಗೂ ಇಂಗ್ಲೀಷ್ ಹೇಳಿಕೊಡುವುದಿಲ್ಲ ಅಂತ ಎಲ್ಲರಿಗೂ ಗೊತ್ತು, ಅದಕ್ಕೆ ನಮ್ಮೂರ ಶಾಲೆ ಬಗ್ಗೆ ಅಷ್ಟಕಷ್ಟೆ.


ನಾನು ೪ ನೇ ಇಯತ್ತೆಯವರೆಗೂ ಇಲ್ಲಿಯೇ ಕಲಿತಿದ್ದು. ಆಮೇಲೆ ಕಲಿಯಬೇಕಾದರೆ ಮದ್ದೂರಿಗೆ ಹೋಗಬೇಕು. ನಮ್ಮಪ್ಪನಿಗೆ ನನ್ನನ್ನು ಇಂಗ್ಲೀಷ್ ಮೀಡಿಯಂಗೆ ಹಾಕಬೇಕು ಅಂತ ಬಹಳ ಆಸೆ ಇತ್ತು. ಬೇಸಿಗೆ ರಜೆಯಲ್ಲಿ ಮೇಷ್ಟರ ಮನೆಗೆ ಹೋಗಿ ಕಷ್ಟ ಪಟ್ಟು A B C D ಕಲಿತಿದ್ದು ಆಯ್ತು. ಮದ್ದೂರಿನ ಖಾಸಗಿ ಸ್ಕೂಲಿನಲ್ಲಿ ಇಂಗ್ಲೀಷ್ ಮೀಡಿಯಂಗೆ ಅರ್ಜಿ ಹಾಕಿ, ಸಂದರ್ಶನ ಕೊಟ್ಟಿದ್ದು ಇನ್ನೂ ನೆನಪಿದೆ.


ಅಲ್ಲಿನ ಮುಖ್ಯೋಪಾಧ್ಯಾಯರು ಕೇಳಿದ ಮೊದಲ ಪ್ರಶ್ನೆ ಹ್ಹ.. ಹ್ಹ...೯ ರ ಮಗ್ಗಿ, ಚಕಚಕನೆ ಹೇಳಿ ಮುಗಿಸಿದೆ.


ಎರಡನೇ ಪ್ರಶ್ನೆ ೧೯ ರ ಮಗ್ಗಿ. "ಹೇಳು ಮರಿ?".


"ಹತ್ತೊಂಬತ್ತೊಂದ್ಲ ಹತ್ತೊಂಬತ್ತು, ಹತ್ತೊಂಬತ್ತೆರಡ್ಲ ಮುವತ್ತೆಂಟೂ, ಹತ್ತೊಂಬತ್ಮೂರ್ಲ ಐವತ್ತೇಳು, ಹತ್ತೊಂಬತ್ನಾಲ್ಕ್ಲ ಎಪ್ಪಾತ್ತಾರು, ಹತ್ತೊಂಬತ್ತೈದ್ಲ .....ಹತ್ತೊಂಬತ್ತೈದ್ಲ..... ಹತ್ತೊಂಬತ್ತೈದ್ಲ......" ಬರಲೇ ಇಲ್ಲ.


ಬಹಳ ಪ್ರಯತ್ನ ಮಾಡುತ್ತಿದ್ದುದ್ದನ್ನು ನೋಡಿ ಮುಖ್ಯೋಪಾಧ್ಯಾಯರು "ಇರಲಿ ಬಿಡು ಮರಿ. ಕ್ಯಾಟ್ ಗೆ ಸ್ಪೆಲ್ಲಿಂಗ್ ಹೇಳು ಮರಿ ಅಂದ್ರು".


ನಾನು "A B C D ಮಾತ್ರ ಬರೋದು ಸಾರ್, ಅದೂ ಮೊನ್ನೆ ಮೊನ್ನೆ ಕಲಿತಿದ್ದು ಸಾರ್" ಎಂದೆ.

"ಇರಲಿ ಬಿಡು" ಅಂತ ನನ್ನ ಕೆನ್ನೆ ಸವರಿ ಅಪ್ಪನ ಕಡೆ ತಿರುಗಿದರು.

"ಹುಡುಗ ತುಂಬಾ ಚೂಟಿ ಇದ್ದಾನೆ, ಸೇರಿಸಿಕೊಳ್ಳಲು ಅಭ್ಯಂತರ ಏನೂ ಇಲ್ಲ"


ಅಪ್ಪನ ಮುಖ ಅರಳಿತ್ತು "ಇಂಗ್ಲೀಷ್ ಮೀಡಿಯಂ ಗೆ ತಿಂಗಳಿಗೆ ಎಷ್ಟು ಶುಲ್ಕ ಇದೆ ಸಾರ್"


"ನೋಡಿ ಗೌಡ್ರೆ, ನೀವೇನು ತಪ್ಪಾಗಿ ತಿಳಿದುಕೊಳ್ಳದಿದ್ದರೆ ಒಂದು ಮಾತು ನಮ್ಮ ಶಾಲೇಲಿ ಒಂದನೇ ತರಗತಿಯಿಂದಲೇ ಎಲ್ಲರಿಗೂ ಇಂಗ್ಲೀಷ್ ಹೇಳಿ ಕೊಡ್ತೇವೆ.೫ ನೇ ತರಗತಿಗೆ ಬರುವಷ್ಟರಲ್ಲಿ ಕನ್ನಡ ಮೀಡಿಯಂ ಹುಡುಗ್ರುಗೆ ವಾಕ್ಯ ರಚನೆ ಮಾಡುವಷ್ಟು ಇಂಗ್ಲೀಷ್ ಗೊತ್ತಿರುತ್ತೆ, ಇನ್ನೂ ಇಂಗ್ಲೀಷ್ ಮೀಡಿಯಂ ಹುಡುಗ್ರು ನೀರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಾರೆ. ಅವರ ಜೊತೆ ಏನಾದರು ನಿಮ್ಮ ಹುಡುಗ ಸೇರಿದ್ರೆ, ನಿಮ್ಮ ಹುಡುಗನಿಗೆ ಬಹಳ ಕಷ್ಟ ಆಗುತ್ತೆ ನೋಡಿ, ಕೆಲವೊಮ್ಮೆ ಚೂಟಿ ಹುಡುಗ್ರು ಇಂಗ್ಲೀಷ್ ಅರ್ಥ ಆಗ್ದೇ ಮಂಕಾಗಿ ಹೋಗ್ತಾರೆ.ನಿಮ್ಮ ಹುಡುಗನಿಗೆ ಇಂಗ್ಲೀಷ್ ಮೀಡಿಯಂ ಹುಡುಗರ ಜೊತೆ ಬಿಡುವ ಮಾತಿರಲಿ, ನಮ್ಮ ಶಾಲೆಯ ಕನ್ನಡ ಮೀಡಿಯಂ ಹುಡುಗರ ಜೊತೆ ಹೊಂದಿಕೊಳ್ಳೊದು ಕಷ್ಟ.ಆದರೂ "C" ಸೆಕ್ಷನ್ ಗೆ ಸೇರಿಸಿಕೊಳ್ಳುತ್ತೀವಿ, "C" ಸೆಕ್ಷನ್ ನಲ್ಲಿ ಸ್ವಲ್ಪ ಮುತುವರ್ಜಿ ವಹಿಸಿ ಹೆಚ್ಚಿನ ಗಮನದಿಂದ ಪಾಠಮಾಡುತ್ತೀವಿ."


"ಹಾಗಾದರೆ ಇಂಗ್ಲೀಷ್ ಮೀಡಿಯಂ ಕೊಡುವುದಿಲ್ಲ ಅಂತೀರಾ"


"ನೋಡಿ ಗೌಡ್ರೆ, ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತೇ, ಅವರಿಗೆ ಅತಿ ಒತ್ತಡದಿಂದ ಹಾಕಿದರೆ ಮಂಕಾಗೋದೆ ಹೆಚ್ಚು. ಹುಡುಗನ ತಾಯಿ ಕೂಡ ಹೆಚ್ಚಿಗೆ ಓದಿಲ್ಲ,ಹಾಗಾಗಿ ಅವರು ಮನೆಯಲ್ಲಿ ಹೇಳಿಕೊಡಲು ಸಾಧ್ಯವಿಲ್ಲ. ಆದ್ದರಿಂದ ನೀವು ಹುಡುಗನಿಗೆ ಅರ್ಥವಾಗುವ ಮಾತೃ ಭಾಷೆಯಲ್ಲಿ ಕಲಿಯಲು ಬಿಡಿ, ಮುಂದೆ ೮ ನೇ ತರಗತಿಗೆ ನೋಡೋಣ"

"ನಾನು ಮಗನಿಗೆ ಪಾಠ ಹೇಳಿಕೊಡ್ತೀನಿ ಸಾರ್, ಇಂಗ್ಲೀಷ್ ಮೀಡಿಯಂ ಕೊಡಿ"

"ದುಡಿಯೋ ಗಂಡಸರು ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡೊದು ಕಷ್ಟದ ಕೆಲಸ, ಅಲ್ಲದೇ ನಿಮ್ಮ ಹುಡುಗನ್ನ ದಿನಾ ಕರೆದುಕೊಂಡು ಹೋಗಿ, ಕರೆದುಕೊಂಡು ಬರುವುದಕ್ಕೆ ಬಹಳ ಸಮಯ ಬೇಕು. ಸಿಗೋ ಸಮಯದಲ್ಲಿ ಕನ್ನಡದಲ್ಲಿರೋ ಪಾಠಗಳನ್ನು ಅರಗಿಸಿಕೊಳ್ಳುವುದು ಕಷ್ಟ, ಇನ್ನೂ ಇಂಗ್ಲೀಷ್ ಪಾಠ ಎಂದರೇ ಇನ್ನೂ ಕಷ್ಟ.ಕನ್ನಡದಲ್ಲಿ ಕಲಿತವರೆಲ್ಲಾ ಹಾಳಾಗಿಲ್ಲ, ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದವರೆಲ್ಲಾ ಉದ್ದಾರ ಆಗಿಲ್ಲ, ಒಟ್ಟಿನಲ್ಲಿ ಓದೋದು ಮುಖ್ಯ ನೋಡಿ".

"ಸರಿ ಸಾರ್, ದೊಡ್ಡ ಉಪಕಾರವಾಯ್ತು"

"ಆಯ್ತು ಬನ್ನಿ"

ಗಾಡಿ ನಿಂತ ಹಾಗೆ ಆಯ್ತು, ಡಾಕ್ಟ್ರು ಶಾಪಿನೊಳಕ್ಕೆ ಅಪ್ಪ ಕೈ ಹಿಡಿದು ನಡೆಸಿಕೊಂಡು ಹೋದರು. ಕೂರಲಿಕ್ಕೂ ಜಾಗ ಇಲ್ಲ, ನನ್ನ ಸ್ಥಿತಿ ನೋಡಿ ರೋಗಿಯ ಸಂಬಂಧಿಕರೊಬ್ಬರು ಜಾಗ ಬಿಟ್ಟುಕೊಟ್ಟರು. ಅರ್ಧ ಗಂಟೆ ಕಳೆದ ಮೇಲೆ ಡಾಕ್ಟರು ಒಳಗೆ ಕರೆದರು.


"ವಿಶ್ವ ಅಂತ ಅಲ್ವೇ ನಿಮ್ಮ ಹುಡುಗನ ಹೆಸರು"
"ಹೌದು ಡಾಕ್ಟ್ರೇ"
"ಕೆಮ್ಮು, ನೆಗಡಿ ಏನಾದರೂ ಇದೆಯೇನು?"
"ಇಲ್ಲ ಸಾರ್"
"ಹೊಟ್ಟೆ ನೋವು?'
"ಬರೀ ಜ್ವರ ಮತ್ತು ಸುಸ್ತು ಸಾರ್"


ಸ್ಟೆತಾಸ್ಕೋಪ್ ಇಟ್ಟು ಎದೆ ಪರೀಕ್ಷಿಸಿದರು. ಕಣ್ಣು, ಬಾಯಿ, ಮೂಗು ಎಲ್ಲಾ ನೋಡಿ, ಹೊಟ್ಟೆ ಮೇಲೆ ಒತ್ತಿ ನೋಡಿದ ಮೇಲೆ ಥರ್ಮೋಮೀಟರ್ ಬಾಯಲ್ಲಿ ಇಟ್ಟು 'ಇದನ್ನು ಕಡಿಯಬಾರದು ಮರಿ.ಹಾಗೆ ಸುಮ್ಮನೆ ಬಾಯಲ್ಲಿ ಇಟ್ಟುಕೊಂಡಿರಬೇಕು' ಎಂದರು.


ನಾನು ಥರ್ಮೋಮೀಟರ್ ಬಾಯಲ್ಲಿಟ್ಟುಕೊಂಡು ಪಕ್ಕದಲ್ಲಿ ಕುದಿಯುತ್ತಿದ್ದ ನೀರನ್ನು ನೋಡುತ್ತಿದ್ದೆ. ಅದರೊಳಗೆ ನಾಲ್ಕೈದು ಗಾಜಿನ ಸೂಜಿ ಹಾಕುವ ಸಿರಿಂಜುಗಳು, ಸುಮಾರು ಸೂಜಿಗಳು ಕುದಿಯುತ್ತಿದ್ದವು.ಎಷ್ಟು ಸಲ ಚುಚ್ಚಿದ ಸೂಜಿಗಳೋ ಅವು. ಹೊಸ ಸೂಜಿಗಳಾದರೆ ಹೆಚ್ಚು ನೋವಾಗುವುದಿಲ್ಲ ಅಂತ ಗೊತ್ತಿತ್ತು. ಹಳೆಯ ಸೂಜಿಗಳು ಉಪಯೋಗಿಸಿ, ಉಪಯೋಗಿಸಿ ಮೊಂಡಾಗಿರುತ್ತವೆ. ಹಳೆಯ ಸೂಜಿಗಳ ಇಂಜಕ್ಷನ್ ಬಹಳ ನೋವು ಕೊಡುತ್ತವೆ. ಹೊಸ ಸೂಜಿ ಕೇಳಿದರೆ ಹೆಚ್ಚು ದುಡ್ಡು ಕೊಡಬೇಕಾಗುತ್ತೋ ಎನೋ?.


"ಸಾರ್"
"ಹೇ ಮಾತನಾಡಬೇಡ, ಬಾಯಲ್ಲಿರುವ ಥರ್ಮೊಮೀಟರ್ ಕಡಿದು ಮುರಿದರೆ ಕಷ್ಟ, ತಾಳು ಅದನ್ನು ಹೊರಗೆ ತೆಗೆಯುತ್ತೇನೆ.... ಈಗ ಹೇಳು"
"ಬರೀ ಗುಳಿಗೆ ಕೊಡಿ ಸಾರ್, ಇಂಜೆಕ್ಷನ್ ಬೇಡ"
"ಎಲ್ಲಾರು ಸರ್ಕಾರಿ ಆಸ್ಪತ್ರೆಯಲ್ಲಿ ಬರಿ ಗುಳಿಗೆ ಕೊಡ್ತಾರೆ, ಇಂಜೆಕ್ಷನ್ ಹಾಕಲ್ಲ ಅಂತ ಇಲ್ಲಿಗೆ ಬರ್ತಾರೆ, ನೀನು ಬರಿ ಗುಳಿಗೆ ಕೊಡಿ ಅಂತ ಹೇಳ್ತಾಯಿದ್ದಿಯಲ್ಲಪ್ಪ"
"ನನಗೆ ಸೂಜಿ ಕಂಡರೆ ಭಯ ಸಾರ್"
"ಏನೂ ಭಯ ಪಡಬೇಡ, ಸಣ್ಣ ಸೊಳ್ಳೆ ಕಡಿದ ಹಾಗೆ ಆಗುತ್ತೆ ಅಷ್ಟೆ"


ಹಾಕಿದ್ದ ಚಡ್ಡಿ ಸ್ವಲ್ಪ ಕೆಳಗೆ ಮಾಡಿ, ಬಿಗಿಯಾಗಿ ಕಣ್ಣು ಮುಚ್ಚಿ ಗೋಡೆ ಕಡೆ ಮುಖ ಮಾಡಿದೆ.


"ನಡು ಸ್ವಲ್ಪ ಸಡಿಲ ಮಾಡು ಮರಿ" ಎಂದು ಚುಚ್ಚಿದರು.


ಸೊಳ್ಳೆ ಇರಲಿ, ಡಾಕ್ಟರೆ ಹಲ್ಲಿನಿಂದ ಕಡಿದಿದ್ದರೂ ಇಷ್ಟು ನೋವಾಗುತ್ತಿರಲಿಲ್ಲ. ಹಳೆ ಸೂಜಿ ಇಂಚು ಅಂತೂ ಒಳಗೆ ಹೋಗುತ್ತಿರುವುದು ಗೊತ್ತಾಗುತ್ತಿತ್ತು, ಹಲ್ಲು ಕಚ್ಚಿ ತಡೆದುಕೊಂಡೆ.ಸೂಜಿ ತೆಗೆದ ಮೇಲೂ, ಉಜ್ಜಿದರೂ ಸಣ್ಣದಾಗಿ ನೋಯುತ್ತಿತ್ತು.


"ಎರಡು ತರಹದ ಗುಳಿಗೆ ಇದೆ, ಊಟದ ನಂತರ ತಲಾ ಮೂರು ತಕೋ ಬೇಕು; ಏಳು ದಿನ"
"ಸರಿ ಡಾಕ್ಟ್ರೆ"
ನನ್ನನ್ನ ಗಾಡಿಯಲ್ಲಿ ಕೂರಿಸಿ, ಮಾತ್ರೆ ತರಲು ಕರಿಯನ್ನ ಅಪ್ಪ ಕಳುಹಿಸಿದರು. ಮಾತ್ರೆ ತಂದ ಕರಿಯ ಅಪ್ಪನ ಕೈಲಿ ಕೊಟ್ಟ.


"ಗಾಡಿಯಲ್ಲಿ ಕೂತಿರು, ಡಾಕ್ಟರ ಹತ್ರ ಮಾತ್ರೆ ಸರಿ ಇದೆಯಾ ಅಂತ ತೋರಿಸಿ ಬರ್ತೀನಿ"
"ಅದನ್ನ ಅವರಿಗೆ ತೋರಿಸೋದೇನಿದೆ ಗೌಡ್ರೆ"
"ಮೆಡಿಕಲ್ ಶಾಪಿನಲ್ಲಿರೋರೆಲ್ಲಾ, ಫಾರ್ಮಸಿ ಓದಿದೋರಲ್ಲ. ಮೊದಲೆ ಡಾಕ್ಟ್ರು ಬರೆದದ್ದು ಗೊತ್ತಾಗಕಿಲ್ಲ, ವಸಿ ಖಾತರಿ ಮಾಡಿ ಬರ್ತೀನಿ ತಡಿ. ಏನೋ ಓದಿ, ಏನೋ ಮಾತ್ರೆ ಕೊಟ್ರೆ ಕಷ್ಟ"


ಎರಡು ನಿಮಿಷದ ನಂತರ ಅಪ್ಪ ಬಂದ್ರು


"ಲೇ ಕರಿಯ, ಏಳು ದಿನಕ್ಕಲ್ವೇನೋ ಬರೆದಿರೊದು, ಎರಡು ದಿನಕ್ಕಷ್ಟೆ ತಕ್ಕೊಂಡು ಬಂದಿದ್ದೀಯ?"
"ಅವ್ರು ಬರಿತಾರೆ ಅಂತ, ಏಳು ದಿನಾನು ಮಾತ್ರೆ ತಕ್ಕೊಳ್ಳಕ್ಕೆ ಆಯ್ತದ. ಎರಡು ದಿನದ ಮೇಲೆ ಜ್ವರ ಕಮ್ಮಿ ಆದ್ರೆ, ಮುಂದುಕ್ಕೆ ಗುಳಿಗೆ ನುಂಗೋದ್ಯಾಕೆ"
"ಡಾಕ್ಟ್ರುಗಿಂತ ನೀನೆ ತಿಳಿದೋನ ಹಾಗೆ ಮಾತಾಡ್ತಿ ನೋಡು, ಜ್ವರ ಇಳಿದ ಮೇಲೂ ಮಾತ್ರೆ ಬರೆಯೋಕೆ ಅವರಿಗೆ ತೆವ್ಲ. ಏಳು ದಿನ ಮಾತ್ರೆ ತಕೊಬೇಕು ಅಂದ್ರೆ, ಅದರಲ್ಲೇನೊ ಅರ್ಥ ಇರ್ತದೆ.ಸುಮ್ಮನೆ ಅವ್ರು ಹೇಳಿದ್ದನ್ನ ಮಾಡಬೇಕು".
"ನಿಮಗೆ ತಿಳಿಯೋದಿಲ್ಲ ಬನ್ನಿ ಗೌಡ್ರೆ, ಮೆಡಿಕಲ್ ಶಾಪ್ ನವರು ತಿಂಗ್ಳ, ತಿಂಗ್ಳ ಡಾಕ್ಟ್ರುಗೆ ದುಡ್ಡು ಎಣಿಸೋದನ್ನ ಕಣ್ಣಾರೆ ನೋಡಿದಿನಿ. ಡಾಕ್ಟ್ರು ಕಮಿಷನ್ ಆಸೆಗೆ ಮೂರುದಿನ ಬದ್ಲು, ಏಳುದಿನಕ್ಕೆ ಗುಳಿಗೆ ಬರಿತಾರೆ. ನಮ್ಮ ಹುಷಾರಿನಲ್ಲಿ ನಾವಿರಬೇಕು"


"ಸುಮ್ಮನೆ ಏನೇನೋ ಮಾತನಾಡಬೇಡ, ಅವರ ಮಧ್ಯೆ ಬೇರೆ ಏನೋ ಹಣಕಾಸು ವ್ಯವಹಾರ ಇದ್ದರೂ ಇರಬಹುದು. ನಿನ್ನ ಪಕ್ಕದ ಮನೆ ಮಾಲಿಂಗ, ಜ್ಞಾಪ್ಕ ಇದೆಯಾ.ಟಿ.ಬಿ ಬಂದಿದೆ ಅಂತ ಡಾಕ್ಟ್ರು ೬ ತಿಂಗಳವರೆಗೂ ಮಾತ್ರೆ ಬರೆದಿದ್ರಂತೆ.ಅದೂ ಸರ್ಕಾರಿ ಆಸ್ಪತ್ರೆಲಿ ಚೀಟಿ ತೋರಿಸಿದ್ರು ತಿಂಗ್ಳ ತಿಂಗ್ಳ ಬಿಟ್ಟಿ ಮಾತ್ರೆ ಕೊಡ್ತಿದ್ರು.ಇವನು ಎರಡು ತಿಂಗ್ಳ್ ಮಾತ್ರೆ ತಿಂದ ಮೇಲೆ, ದಮ್ಮು, ಕೆಮ್ಮು ಎಲ್ಲಾ ಕಡಿಮೆಯಾಗಿ ಹೊಯ್ತಂತೆ. ಇವನು ಎಲ್ಲ ಕಮ್ಮಿಯಾಗಿದೆ ಅಂತ ಮುಂದೆ ಮಾತ್ರೆ ತಕ್ಕೊಳ್ಳದೆ ನಿಲ್ಲಿಸಿಬಿಟ್ಟ. ಒಂದು ತಿಂಗಳು ಬಿಟ್ಟು ಮತ್ತೆ ದಮ್ಮು, ಕೆಮ್ಮು ಶುರುವಾಗಿದೆ. ಮತ್ತೆ ಅದೇ ಮಾತ್ರೆ ೧೨ ತಿಂಗ್ಳು ತಕೊಬೇಕು ಅಂದ್ರಂತೆ. ಹಳೆ ಮಾತ್ರೆ ಅರ್ಧಂಬರ್ಧ ತಕ್ಕೊಂಡು ಬಿಟ್ಟಿದ್ರಿಂದ,ಅದು ಮತ್ತೆ ಕೆಲಸ ಮಾಡಲಿಲ್ಲವಂತೆ. ಅದಕ್ಕೆ ಡಾಕ್ಟ್ರು ಸ್ಟ್ರಾಂಗ್ ಆಗಿರೋ ಮಾತ್ರೆ ಬರೆದರಂತೆ. ಅದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗೊದಿಲ್ಲ, ಮಾಲಿಂಗ ಅದನ್ನು ಖರೀದಿ ಮಾಡಿ ನುಂಗಲಿಕ್ಕೆ ಆಗದೆ, ರಕ್ತ ಕಾರಿ ಸತ್ತ. ಇದೆಲ್ಲ ನಿಂಗೂ ಗೊತ್ತಿರಬೇಕು,. ನೀನೂ ಏನಾದ್ರು ಸ್ವಲ್ಪ ಉಪದೇಶ ಕೊಟ್ಟಿರ್ದೆ ಇರ್ತೀಯಾ?"


"ಏನ್ ಗೌಡ್ರೆ, ಮಾಲಿಂಗ ಸತ್ತಿದ್ದಕ್ಕೆ ನಾನೇ ಕಾರಣ ಅನ್ನೊ ಹಾಗೆ ಹೇಳ್ತಿದ್ದಿರಾ? ಅವನ ಖಾಯಿಲೆ ಡಾಕ್ಟ್ರುಗಳ ಕೈಲಿ ವಾಸಿ ಮಾಡೋಕೆ ಆಗ್ದೇ ಸತ್ತಿದ್ದು ಅಂತ ಊರೊರಿಗೆಲ್ಲ ಗೊತ್ತಿದೆ.ಈಗೇನು ಎರಡು ದಿನ ಗುಳಿಗೆ ತಿನ್ನಿಸಿ, ಕಡಿಮೆ ಆಗದೆ ಇದ್ರೆ, ಗುಳಿಗೆ ಬದಲಾಯಿಸಿ ಅಂತ ಡಾಕ್ಟ್ರುನ್ನ ಕೇಳಿದ್ರಾಯ್ತು. ಗುಣ ಆದ್ರೆ ನಾನೇ ಮಿಕ್ಕಿದ ನಾಲ್ಕು ದಿನದ ಮಾತ್ರೆ ತಂದು ಕೊಡ್ತಿನಿ.ನಿಮಗೇನು ಈಗ ನಷ್ಟ ಆಗಿಲ್ಲ"


"ನಷ್ಟ ಲಾಭದ ಪ್ರಶ್ನೆ ಅಲ್ಲ ಕಣ್ಲ. ನಾವು ಗುಳಿಗೆಯಿಂದ ವಾಸಿ ಆಗುತ್ತೊ, ಇಲ್ವೊ ಅಂತ ಅನುಮಾನ ಪಡ್ಕೊಂಡು ಗುಳಿಗೆ ತಿಂದ್ರೆ ವಾಸಿ ಆಗ್ತದೇನು. ಒಂದು ತಿಳ್ಕೋ ಅರ್ಧ ಖಾಯಿಲೆಗಳೆಲ್ಲ ಗುಳಿಗೆಗಿಂತ, ಡಾಕ್ಟ್ರುಗಳ ಮೇಲಿನ ನಂಬಿಕೆಯಿಂದಲೇ ವಾಸಿಯಾಗೊದು. ಇನ್ನರ್ಧ ಗುಳಿಗೆ, ಇಂಜೆಕ್ಷನಿಂದ ವಾಸಿಯಾಗೊದು. ಅದಕ್ಕೆ ಹೇಳೊದು ಡಾಕ್ಟ್ರುಗಳು ಒಂದು ರೀತಿ ದೇವ್ರು ಇದ್ದಂಗೆ. ಬೇಕಿದ್ದರೆ ನಂಬಿ ಕೆಡೊಣ, ನಂಬದೆ ಕೆಡೊದಿಕ್ಕಿಂತ ನಂಬಿ ಕೆಡೊದು ಉತ್ತಮ"


"ಆಯ್ತು ಬಿಡಿ ಗೌಡ್ರೆ, ಈಗೇನು ೪ ದಿನದ್ ಮಾತ್ರೆ ತಕೊಂಡು ಬರಬೇಕು ತಾನೆ. ಈಗ್ಲೆ ಬರ್ತೀನಿ"


ಗಾಡಿ ಮನೆ ಕಡೆ ಹೊರಟಿತು.ಡಾಕ್ಟ್ರು ಬಹಳ ಸ್ಟ್ರಾಂಗ್ ಇಂಜೆಕ್ಷನ್ ಕೊಟ್ಟಿರಬೇಕು. ಜ್ವರವೆಲ್ಲ ಆಗಲೇ ಇಳಿದು ಹೋಗಿದೆ. ಚಳಿ ಅಂತ ಮೈ ಮೇಲೆ ಹೊದಿಕೆ ಹಾಕಿದ್ದರಿಂದ ಸೆಕೆ ಆಗ್ತಾ ಇದೆ. ಗಾಡಿ ಸ್ವಲ್ಪ ಹೊರಟ ಮೇಲೆ, ಹೊದಿಕೆ ತೆಗೆದು ಬಿಟ್ಟೆ. ಸುಸ್ತು ಕಡಿಮೆಯಾಗಿ, ಸ್ವಲ್ಪ ಹೊತ್ತು ಕುಳಿತುಕೊಳ್ಳೋಣ ಅನಿಸ್ತು. ನಾನು ಕುಳಿತದ್ದು ನೋಡಿ ಅಪ್ಪನಿಗೆ ಸಂತೋಷವಾಗಿತ್ತು.


"ಹಿಂದೆ ಬಂದರೆ ಹಾಯ ಬೇಡಿ"
"ಹಿಂದೆ ಬಂದರೆ ಹಾಯ ಬೇಡಿ"
"ಮುಂದೆ ಬಂದರೆ ಒದೆಯ ಬೇಡಿ"
"ಮುಂದೆ ಬಂದರೆ ಒದೆಯ ಬೇಡಿ"
"ಕಂದ ನಿಮ್ಮವನೆಂದು ಕಾಣಿರಿ, ತಬ್ಬಲಿಯ ಈ ಕರುವನು"
"ಕಂದ ನಿಮ್ಮವನೆಂದು ಕಾಣಿರಿ, ತಬ್ಬಲಿಯ ಈ ಕರುವನು"


ಸ್ಕೂಲು ಹತ್ತಿರ ಬರುತ್ತಿದ್ದಂತೆ, ಮಾಸ್ಟ್ರು ಗೋವಿನ ಹಾಡು ಹೀಳಿಕೊಡುತ್ತಿದ್ದುದು ಕೇಳಿಸುತ್ತಿತ್ತು.


"ನಮಸ್ಕಾರ ಸಾರ್"
"ಓ ಆಗ್ಲೇ ಸರಿಯಾಗಿ ಬಿಟ್ಟಿದ್ದಿಯಲ್ಲಪ್ಪ"
"ಒಂದು ಇಂಜೆಕ್ಷನ್ಗೆ ಎಲ್ಲ ಎಲ್ಲಾ ಕಮ್ಮಿ ಆಯ್ತು ಸಾರ್, ಇವತ್ತೆ ಹೋಗಿ ರಿಸಲ್ಟ್ ನೋಡಿ ಬರ್ತೀನಿ"
"ಇವತ್ತು ಬೇಡ, ಮಂಗಳವಾರ ಬೇರೆ. ನಾಳೆ ಹೇಗಿದ್ರು ಅಂಕ ಪಟ್ಟಿನೂ ಬರುತ್ತೇ, ಇಲ್ಲಾಂದ್ರೆ ಮತ್ತೆ ನೀವು ಎರಡೆರಡು ಸಲ ಹೋಗಬೇಕಾಗುತ್ತೆ"
"ಸರಿ ಸಾರ್, ನಾಳೆ ಹೋಗ್ತಿವಿ"
"ಒಳ್ಳೆದಾಗಲಿ"


ಗಾಡಿ ಮುಂದೆ ಹೊರಟಿತು......


                                                  (ಮುಂದುವರೆಯುವುದು)

5 ಕಾಮೆಂಟ್‌ಗಳು:

  1. ಹಳ್ಳಿಯ ಬದುಕನ್ನ ಹುಡುಗನ ಕಣ್ಣಿನಿಂದ ಚೆನ್ನಾಗಿ ತೋರಿಸಿದ್ದೀರಿ. ಹಳ್ಳಿಯ ಸಾಲೆಗಳು, ಅಲ್ಲಿಯ ಸಾಮಾನ್ಯ ಜನರ ತಿಳಿವಳಿಕೆಯ ಮಟ್ಟ ಎಲ್ಲ ಚೆನ್ನಾಗಿ ಬಂದಿವೆ. Interesting reading.

    ಪ್ರತ್ಯುತ್ತರಅಳಿಸಿ